ಮನೆಯಲ್ಲಿ ಹೆಣ್ಣು ಮಗು ಹುಟ್ಟಿತೆಂದು ಆಕೆಗೆ ಚಿಂದಿ ಎಂದು ಹೆಸರಿಟ್ಟು ಕಸಕ್ಕೆ ಸಮವೆಂಬಂತೆ ನೋಡಿದರು.ಓದುವ ಹುಚ್ಚಿದ್ದ ಹೆಣ್ಣು ಮಗುವಿನ ವಿದ್ಯಾಭ್ಯಾಸಕ್ಕೆ ನೀರೆರೆದು ಎಮ್ಮೆ ಮೇಯಿಸಲು ಕಳುಹಿಸಿದರು.10 ನೇ ವರ್ಷಕ್ಕೆ ಆಡಿ ಬೆಳೆಯ ಬೇಕಿದ್ದ ಮಗುವಿಗೆ 30 ವರ್ಷದ ಪುರುಷನೊಂದಿಗೆ ಮದುವೆ ಮಾಡಿಸಿದರು.
ಎನು ಅರಿಯದ ಸಿಂಧೂ ತಾಯಿ19 ವರ್ಷಕ್ಕೆ ಮೂರು ಮಕ್ಕಳ ತಾಯಿಯಾಗಿದ್ದರು.ಆ ಸಮಯಕ್ಕೆ ಹಳ್ಳಿಯ ಕ್ರಿಮಿನಲ್ ಜನಗಳ ವಿರುದ್ದ ತಿರುಗಿ ಬಿದ್ದು ಕಲೆಕ್ಟರ್ ಬಳಿ ಹೋಗಿ ಗೆದ್ದು ಬಂದಳು ಎನ್ನುವ ಕಾರಣಕ್ಕೆ ಆಕೆಯ ಮೇಲೆ ವ್ಯಭಿಚಾರದ ಆರೋಪ ಹೊರಿಸಿದರು.ಗಂಡನ ಮನೆಯವರು ಆಕೆಯ ಮೇಲೆ ಸಂಶಯ ಪಟ್ಟು ಆಕೆಯನ್ನು ತಳಿಸಿ ಮನೆಯಿಂದ ಹೊರಹಾಕಿದರು.ತುಂಬು ಗರ್ಭಿಣಿಯ ಹೊಟ್ಟೆಯ ಭಾಗಕ್ಕೆ ಕಾಲಿನಿಂದ ಒದ್ದ ಪರಿಣಾಮ ಆಕೆ ಮೂರ್ಚೆ ಹೋಗಿದ್ದಳು.ದನದ ಕೊಟ್ಟಿಗೆಯಲ್ಲಿ ಬಿಸುಟಲಾಗಿದ್ದ ಸಿಂಧೂ ತಾಯಿಯ ಮೂರ್ಚೆ ಹೋದ ದೇಹ ನಾಲ್ಕನೆ ಮಗುವಿಗೆ ಜನ್ಮ ನೀಡಿತ್ತು.
ಆದರೆ ಬಾಲ್ಯದಿಂದ ಗೋಮಾತೆಯೊಂದಿಗೆ ಬದುಕನ್ನು ಸಾಗಿಸಿದ್ದ ಸಿಂಧೂ ಮಾತೆಗೆ ಗೋಮಾತೆ ಮೋಸ ಮಾಡಲಿಲ್ಲ,ತಳ್ಳಲಿಲ್ಲ,ತುಳಿಯಲಿಲ್ಲ.ಮೂರ್ಚೆ ಹೋಗಿದ್ದ ಸಿಂಧೂ ತಾಯಿಯನ್ನು ರಕ್ಷಿಸಿ,ಆಕೆಯನ್ನು ಜೋರಾಗಿ ಕೂಗುತ್ತ ಮೂರ್ಚೆಯಿಂದ ಎಬ್ಬಿಸಲು ಗೋಮಾತೆ ಪ್ರಯತ್ನಿಸುತಿತ್ತು ಎಂದು ಸಿಂಧೂ ತಾಯಿಯವರೆ ಭಾವುಕರಾಗಿ ಹೇಳುತ್ತಾರೆ.ಮೂರ್ಚೆಯಿಂದ ಎದ್ದ ಸಿಂಧೂತಾಯಿ 16 ಬಾರಿ ಕಲ್ಲಿನಿಂದ ಜಜ್ಜಿ ಕರುಳ ಬಳ್ಳಿಯಿಂದ ಮಗುವನ್ನು ಬೇರ್ಪಡಿಸಿ ಸ್ವಾರ್ಥದ ಸಂಭಂದಗಳಿಂದ ಹೊರ ಬಂದು ಪುಣೆಯ ರೈಲು ನಿಲ್ದಾಣದಲ್ಲಿ ಹಾಡು ಹಾಡಿ ಬದುಕು ಕಟ್ಟಿ ಕೊಳ್ಳಲು ಶುರು ಮಾಡಿದ್ದರು.
ಆದರೆ ಬಾಲ್ಯದಿಂದಲು ಅವಮಾನ ನೋವು ಅನುಭವಿಸಿದ್ದ ಸಿಂಧೂ ತಾಯಿ ಎರಡು ಬಾರಿ ಆತ್ಮ ಹತ್ಯೆಗೆ ಪ್ರಯತ್ನಿಸಿ ವಿಫಲವಾದಗ ಬದುಕಿಗೆ ಹೊಸ ಅರ್ಥ ಕಲ್ಪಿಸಿಕೊಳ್ಳಲು ಶುರು ಮಾಡಿದರು.ಅಂದಿನಿಂದ ಸತತ 54 ವರ್ಷಗಳಿಂದ ಅನಾಥ ಮಕ್ಕಳಿಗೆ ಅನ್ನವಿಟ್ಟು, ಅವರಿಗೆ ತಾಯಿಯಾಗಿ ಪ್ರೀತಿಯನ್ನು ಧಾರೆ ಎರೆದಿದ್ದಾರೆ.
ಸನ್ಮತಿ ಬಾಲನಿಕೇತನ್ ಸಂಸ್ಥೆ ಕಟ್ಟಿ ಅದರ ಮೂಲಕ ಆಕೆ ಇಂದು 2000 ಕ್ಕೂ ಹೆಚ್ಚು ಅನಾಥ ಮಕ್ಕಳಿಗೆ ತಾಯಿಯಾಗಿದ್ದಾರೆ.ಈಗ ಆಕೆಯ ಮಕ್ಕಳೆಲ್ಲರು ಡಾಕ್ಟರ್ ,ಇಂಜಿನಿಯರ್ಸ್ ಗಳಾಗಿದ್ದಾರೆ,ನೂರಾರು ಮೊಮ್ಮಕ್ಕಳು ಇದ್ದಾರೆ,ಸೊಸೆಯಂದಿರು ಇದ್ದಾರೆ.ಆದರೆ ಯಾರಿಗೆ ಯಾರೂ ಇಲ್ಲವೊ ಅವರಿಗೆ ನಾನಿದ್ದಿನಿ ಎನ್ನುವ ಸಿಂಧೂ ತಾಯಿಯದ್ದು ಮಾತ್ರ ಅನಾಥ ಬದುಕು.ಸಾವಿಗೂ ಸವಾಲೊಡ್ಡಿ ಸಂಘರ್ಷದ ಬದುಕು ಸಾಗಿಸಿ ಸಂಪೂರ್ಣ ಭಾರತಕ್ಕೆ ಆಕೆ ಪ್ರೇರಣೆಯ ಮಾತೃ ಶಕ್ತಿಯಾಗಿದ್ದಾರೆ.ಯಾವ ಗಂಡ ಮನೆಯಿಂದ ಬಡಿದು ಹೊರ ದಬ್ಬಿದ್ದನೊ ಆತನನ್ನು ಕೊನೆಯ ಕಾಲದಲ್ಲಿ ಮಗುವಂತೆ ಸಾಕಿದ ಮಹಾ ತಾಯಿ ಈಕೆ.ಆಕೆಯ ಬದುಕು ಭಾರತಕ್ಕೆ ಒಂದು ಪ್ರೇರಣೆ…