ತುಮಕೂರು: ನಗರದ ಜಿಲ್ಲಾ ಪಂಚಾಯಯಿತಿ ಸಭಾಂಗಣದಲ್ಲಿ ನಡೆದ 2022-23ನೇ ಸಾಲಿನ ತ್ರೈಮಾಸಿಕ ಕೆಡಿಪಿ ಪ್ರಗತಿ ಪರಿಶೀಲನಾ ಸಭೆಯಲ್ಲಿ, ಜಿಲ್ಲಾಸ್ಪತ್ರೆ, ತಾಲೂಕು ಆಸ್ಪತ್ರೆಗಳ ಕರ್ಮಕಾಂಡವನ್ನು ಶಾಸಕರು ಬಿಚ್ಚಿಟ್ಟಾಗ ಆರಗ ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಚಾಟಿ ಬೀಸಿದರು.
ಜಿಲ್ಲಾಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದಿಂದ ತಾಯಿ ಮತ್ತು ನವಜಾತ ಅವಳಿ ಶಿಶುಗಳು ಮೃತಪಟ್ಟ ಪ್ರಕರಣವನ್ನು ಪ್ರಸ್ತಾಪಿಸಿ ಬಳಿಕ ಕುಣಿಗಲ್ ತಾಕೂಕು ಆಸ್ಪತ್ರೆಯಲ್ಲಿ ತಾಯಿ ಸಾವಿನ ಪ್ರಕರಣದ ಬಗ್ಗೆ ನೋವು ತೋಡಿಕೊಂಡರು. ಪ್ರಾಥಮಿಕ ಹಂತದ ಸಮಸ್ಯೆಗಳನ್ನೇ ನಿಭಾಯಿಸಲು ಸಾಧ್ಯವಾಗಲ್ಲ ಎಂದರೆ ಅರ್ಥವೇನು? ತಾಲೂಕು ಆಸ್ಪತ್ರೆಯಿಂದ ಜಿಲ್ಲಾಸ್ಪತ್ರೆಗೆ ಕಳುಹಿಸಿಕೊಡುತ್ತಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಚಿವ ಆರಗ ಜ್ಞಾನೇಂದ್ರ ಜಿಲ್ಲಾಶಸ್ತ್ರ ಚಿಕಿತ್ಸಕಿ ಡಾ ವೀಣಾರನ್ನು ಕುರಿತು, ”ಒಂದ್ಸಲ ಕೆಟ್ಟ ಹೆಸರು ಬಂದಿದೆ, ಸರಿಪಡಿಸಿಕೊಳ್ಳಬೇಕು. ವಿಶೇಷ ಕಾಳಜಿ ವಹಿಸಿ ಕೆಲಸ ಮಾಡಬೇಕು. ಪ್ರಾಣ ಅಲ್ವಾ? ಹಾಗಾಗಿ ಜನ ಭಯ ಬೀಳುತ್ತಾರೆ. ಉತ್ತಮ ಸೇವೆ ಒದಗಿಸಬೇಕು. ನಾನು ಹೇಳಿದ್ದೀನಿ, ಆರೋಗ್ಯ ಸಚಿವರು ಹೇಳಿದ್ದಾರೆ. ಆದರೂ ಸ್ವಲ್ಪವೂ ಬದಲಾವಣೆ ಆಗಿಲ್ಲ ಎಂದರೆ ಹೇಗೆ?” ಎಂದು ಕ್ಲಾಸ್ ತೆಗೆದುಕೊಂಡರು.