ಬೆಂಗಳೂರು: ಡಿ. 31ರಂದು ಸಂಚಾರ ದಟ್ಟಣೆ ಹೆಚ್ಚಾಗಿರುತ್ತದೆ. ಎಲ್ಲರೂ ಹೊಸ ವರ್ಷಾಚರಣೆಗೆ ಬರುತ್ತಾರೆ. ಈ ಹಿನ್ನೆಲೆಯಲ್ಲಿ ಸಂಚಾರ ದಟ್ಟಣೆ ನಿಯಂತ್ರಿಸಲು ಸಾರ್ವಜನಿಕ ಸಾರಿಗೆ ಬಳಸುವಂತೆ ಸಂಚಾರ ವಿಭಾಗದ ವಿಶೇಷ ಪೊಲೀಸ್ ಆಯುಕ್ತರಾದ ಡಾ. ಎಂ.ಎ. ಸಲೀಂ ಮನವಿ ಮಾಡಿದರು.
ಈಗಾಗಲೇ ಮೆಟ್ರೋ, ಬಿಎಂಟಿಸಿ ಅಧಿಕಾರಿಗಳೊಂದಿಗೆ ಮಾತನಾಡಿದ್ದೇವೆ. ಸಾರ್ವಜನಿಕ ಸಾರಿಗೆಗಳನ್ನು ಹೆಚ್ಚಾಗಿ ಒದಗಿಸಲು ಮನವಿ ಮಾಡಲಾಗಿದೆ ಎಂದು ಅವರು ಹೇಳಿದರು.
ನಗರದಾದ್ಯಂತ ಅಂದು ಕುಡಿದು ವಾಹನ ಚಾಲನೆ ಮಾಡುವವರ ಬಗ್ಗೆ ಪೊಲೀಸರು ಹದ್ದಿನ ಕಣ್ಣಿಡಲಿದ್ದಾರೆ. ಅದೇ ರೀತಿ ಕೆಲವು ಸೆಲಬ್ರೆಟಿಗಳು ತಮ್ಮ ವಾಹನವನ್ನು ಬಹಳ ಹುಮ್ಮಸ್ಸಿನಲ್ಲಿ ಚಾಲನೆ ಮಾಡಿಕೊಂಡು ಬರುತ್ತಾರೆ. ಅದರಿಂದ ಅಪಘಾತವಾಗುವ ಸಂಭವವಿದೆ. ಈ ಮೂರು ಅಂಶಗಳಲ್ಲಿ ಸಂಚಾರಿ ನಿಯಮವನ್ನು ಉಲ್ಲಂಘಿಸಿದರೆ ಗಂಭೀರವಾಗಿ ಪರಿಗಣಿಸಿ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.