ರಾಜಧಾನಿಯಲ್ಲಿ ಆಟೋ ಚಾಲಕರ ಆಕ್ರೋಶ..!

ಬೆಂಗಳೂರು: ಆಟೋ ಚಾಲಕರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ಸ್ಟೇಷನ್‌ನಿಂದ ಬೃಹತ್ ಆಟೋ ರ‍್ಯಾಲಿ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದರು. ಆದರೆ, ಇದಕ್ಕೆ ಅನುಮತಿ ಸಿಗದ ಕಾರಣಕ್ಕೆ ಕಾಲ್ನಡಿಗೆ ಮೂಲಕವೇ ವಿಧಾನಸೌಧ ಮುತ್ತಿಗೆಗೆ ಮುಂದಾದರು. ಮುಷ್ಕರಕ್ಕೆ ಸುಮಾರು 21 ಆಟೋ ಸಂಘಟನೆಗಳು ಸಾಥ್ ನೀಡಿದ್ದು, ರಾಜಧಾನಿಯ 2,10,000 ಚಾಲಕರು ಪ್ರತಿಭಟನೆ ನಡೆಸಿದರು.

ರಾಜಧಾನಿಯಲ್ಲಿ ರ‍್ಯಾಪಿಡೋ ಬೈಕ್ ಟ್ಯಾಕ್ಸಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ಇದರಿಂದ ಆಟೋ ಚಾಲಕರು ಬೀದಿಗೆ ಬೀಳುತ್ತಿದ್ದಾರೆ. ರ‍್ಯಾಪಿಡೋ ಬೈಕ್ ಟ್ಯಾಕ್ಸಿಗೆ ಅನುಮತಿ ಇಲ್ಲದಿದ್ದರೂ ರಾಜಾರೋಷವಾಗಿ ಸಂಚಾರ ಮಾಡುತ್ತಿದೆ. ಆರ್‌ಟಿಒ ಅಧಿಕಾರಿಗಳು ಬೈಕ್ ಟ್ಯಾಕ್ಸಿಗಳನ್ನು ಮಟ್ಟ ಹಾಕುವಲ್ಲಿ ವಿಫಲರಾಗಿದ್ದಾರೆ ಎಂದು ಚಾಲಕರು ಅಸಮಾಧಾನ ತೋಡಿಕೊಂಡಿದ್ದಾರೆ.

ಇ-ಬೈಕ್ ಸೇವೆ ನೀಡಲು ಅನುಮತಿ ಕೇಳಿ ಅರ್ಜಿ ಸಲ್ಲಿಸಿದ್ದು ಇದಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕಿದೆ. ಇದರಿಂದಾಗಿ ಆಟೋ ಬಳಸುವವರ ಸಂಖ್ಯೆ ಕಡಿಮೆ ಆಗಲಿದೆ. ಹೀಗಾಗಿ ಅನುಮತಿಯನ್ನು ವಾಪಸ್‌ ಪಡೆಯಬೇಕೆಂದು ಚಾಲಕರು ಮನವಿ ಮಾಡಿದ್ದಾರೆ.

ಆಟೋ ಚಾಲಕರ ಪ್ರತಿಭಟನಾ ಸ್ಥಳಕ್ಕಾಗಮಿಸಿದ ಕಾಂಗ್ರೆಸ್‌ ನಾಯಕ ರಾಮಲಿಂಗಾರೆಡ್ಡಿ, ಬೈಕ್ ಟ್ಯಾಕ್ಸಿ ರದ್ದತಿಯ ಬಗ್ಗೆ ಸರ್ಕಾರಕ್ಕೆ ಮನವರಿಕೆ ಮಾಡಲಾಗುವುದು. ಮುಂದೆ ನಮ್ಮ ಸರ್ಕಾರವೇ ಅಧಿಕಾರಕ್ಕೆ ಬರಲಿದ್ದು, ನಿಮ್ಮ ಸಮಸ್ಯೆ ಬಗೆಹರಿಸುತ್ತೇವೆ ಎಂದು ಭರವಸೆ ನೀಡಿದರು. ಜತೆಗೆ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿ, ನಾವು ಬಿಜೆಪಿ ರೀತಿ ಸುಳ್ಳು ಆಶ್ವಾಸನೆ ನೀಡುವುದಿಲ್ಲ. ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದರು.

Discover more from Valmiki Mithra

Subscribe now to keep reading and get access to the full archive.

Continue reading