ಕೊಡಗು: ತೋಟಕ್ಕೆ ದಾಳಿ ಇಟ್ಟ ಹುಲಿಯೊಂದು ಯುವಕನ ಮೇಲೆರಗಿ ಸಾಯಿಸಿ ಹೋಗಿದ್ದು, ಆತನ ಶವ ಅಲ್ಲೇ ಇಟ್ಟುಕೊಂಡು ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನಲ್ಲಿ ಈ ಪ್ರಕರಣ ನಡೆದಿದೆ.
ವಿರಾಜಪೇಟೆ ತಾಲೂಕಿನ ರುದ್ರಗುಪ್ಪೆ ಗ್ರಾಮದ ತೋಟದಲ್ಲಿ ಕಾಳುಮೆಣಸು ಕೊಯ್ಲು ನಡೆಸುತ್ತಿದ್ದ ಹುಲಿ ದಾಳಿ ನಡೆಸಿದ್ದು, ಕಾರ್ಮಿಕ ಯುವಕ 30 ವರ್ಷದ ಗಣೇಶ್ ಎಂಬಾತ ಸಾವಿಗೀಡಾಗಿದ್ದಾನೆ.
ಈ ಪರಿಸರದಲ್ಲಿ ಕಳೆದ ವರ್ಷ ಮೂವರು ಹುಲಿ ದಾಳಿಗೆ ಬಲಿಯಾಗಿದ್ದು, ಈ ಸಲ ಮತ್ತೊಬ್ಬರು ಸಾವಿಗೀಡಾದ್ದರಿಂದ ರೊಚ್ಚಿಗೆದ್ದ ಸ್ಥಳೀಯರು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಯುವಕನ ಶವವನ್ನು ಸ್ಥಳದಲ್ಲೇ ಇರಿಸಿ ಪ್ರತಿಭಟನೆ ನಡೆಸಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬರಬೇಕು ಎಂದು ಆಗ್ರಹಿಸಿದ್ದಾರೆ. ಎಸ್ಪಿ ಅಯ್ಯಪ್ಪ ಸ್ಥಳಕ್ಕೆ ಭೇಟಿ ನೀಡಿದ್ದು, ಪೊಲೀಸ್ ಭದ್ರತೆ ಒದಗಿಸಲಾಗಿದೆ. ಅರಣ್ಯ ಅಧಿಕಾರಿಗಳು ಹುಲಿಯನ್ನು ಹಿಡಿಯಬೇಕು, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.