ಬೆಂಗಳೂರು: ಹೈಕೋರ್ಟ್ ತ್ರಿಸದಸ್ಯ ಪೀಠವು ಹಿಜಾಬ್ ವಿವಾದ ಕುರಿತು ತೀರ್ಪು ನೀಡಿದ್ದು ಹಿಜಾಬ್ ಇಸ್ಲಾಂನ ಅತ್ಯಗತ್ಯ ಭಾಗ ಅಲ್ಲ ಎಂದು ಹೇಳಿದೆ. ಸರ್ಕಾರದ ಆದೇಶವು ಕಾನೂನುಬದ್ಧವಾಗಿದೆ ಎಂದು ಕರ್ನಾಟಕ ಹೈಕೋರ್ಟ್ ತನ್ನ ಆದೇಶದಲ್ಲಿ ಹೇಳಿದೆ.
ಜಾಗತಿಕ ಮಟ್ಟದಲ್ಲಿ ಸುದ್ದಿಯಾಗಿದ್ದ ರಾಜ್ಯದ ಹಿಜಾಬ್ ವಿವಾದದ ಸಂಬಂಧ ಹೈಕೋರ್ಟ್ ತೀರ್ಪು ಪ್ರಕಟಿಸಿದೆ. ಹಿಜಾಬ್ ಇಸ್ಲಾಂ ಧರ್ಮದ ಅತ್ಯಗತ್ಯ ಭಾಗ ಅಲ್ಲ. ಸರ್ಕಾರದ ವಸ್ತ್ರ ಸಂಹಿತೆ ಆದೇಶ ಕಾನೂನು ಬದ್ಧವಾಗಿದೆ ಎಂದು ಎಂದಿದೆ. ಹಿಜಾಬ್ ಗೆ ಅವಕಾಶ ನೀಡುವಂತೆ ಕೋರಿದ್ದ ಅರ್ಜಿಯನ್ನು ವಜಾ ಮಾಡಿದೆ. ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನಿರಾಕರಿಸಿದ್ದ ಪ್ರಾಂಶುಪಾಲರ ನಡೆಯನ್ನು ಪ್ರಶ್ನಿಸಿ ಉಡುಪಿ ಬಾಲಕಿಯರ ಪಿಯು ಕಾಲೇಜಿನ 6 ಮಂದಿ ವಿದ್ಯಾರ್ಥಿಗಳು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಬಗ್ಗೆ ಸುದೀರ್ಘ ವಿಚಾರಣೆ ನಡೆಸಿದ ಉಚ್ಚ ನ್ಯಾಯಾಲಯ ಇಂದು ತೀರ್ಪು ಪ್ರಕಟಿಸಿದೆ.
ಶಾಲೆಗಳಿಗೆ ನಿಗದಿಪಡಿಸಿರುವ ಸಮವಸ್ತ್ರಗಳನ್ನು ಮಾತ್ರ ವಿದ್ಯಾರ್ಥಿಗಳು ಧರಿಸಬೇಕು ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ. ಮುಖ್ಯನ್ಯಾಯಮೂರ್ತಿ ರಿತುರಾಜ್ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಈ ನ್ಯಾಯಪೀಠದಲ್ಲಿದ್ದರು. ಎಲ್ಲ ರಿಟ್ ಅರ್ಜಿಗಳನ್ನೂ ನ್ಯಾಯಪೀಠ ವಜಾಗೊಳಿಸಿದೆ. ಉಡುಪಿ ಕಾಲೇಜಿಗೆ ಪ್ರತ್ಯೇಕ ನಿರ್ದೇಶನ ನೀಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.