ಬೆಂಗಳೂರು: ಮುಂಬರುವ ಬಜೆಟ್‍ನಲ್ಲಿ ರಾಜ್ಯ ಸರ್ಕಾರಿ ನೌಕರರ ವೇತನ ಪರಿಷ್ಕರಣೆಗಾಗಿ ಏಳನೆ ವೇತನ ಆಯೋಗ ರಚನೆ ಮಾಡುವ ಸಾಧ್ಯತೆಯ ಸುಳಿವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೀಡಿದ್ದಾರೆ.
ರಾಜ್ಯ ಸರ್ಕಾರ ಐದಾರು ವರ್ಷಗಳಿಗೊಮ್ಮೆ ವೇತನ ಆಯೋಗವನ್ನು ರಚನೆ ಮಾಡಿ ವೇತನ ಪರಿಷ್ಕರಣೆ ಮಾಡುತ್ತಿದೆ. 2018ರಲ್ಲಿ ಅನುಷ್ಠಾನಕ್ಕೆ ಬಂದು ಆರನೇ ವೇತನ ಆಯೋಗ ಪ್ರಸ್ತುತ ಜರಿಯಲ್ಲಿದೆ. ಕೇಂದ್ರ ಸರ್ಕಾರದಲ್ಲಿ ಏಳನೇ ವೇತನ ಆಯೋಗ ಜಾರಿಯಲ್ಲಿದೆ. ರಾಜ್ಯ ಸರ್ಕಾರ ತನ್ನ ಆರ್ಥಿಕ ಇತಿಮಿತಿಗಳಲ್ಲಿ ನೌಕರರ ಅನುಕೂಲಕ್ಕಾಗಿ ಏಳನೇ ವೇತನ ಆಯೋಗ ರಚನೆ ಮಾಡಲು ಬಜೆಟ್ ನಲ್ಲಿ ಕ್ರಮ ಕೈಗೊಳ್ಳಲಿದೆ ಎಂದು ಭರವಸೆ ನೀಡಿದರು.
ರಾಜ್ಯ ಸರ್ಕಾರಿ ನೌಕರರು ಉತ್ತಮ ಕೆಲಸ ಮಾಡುತ್ತಿದ್ದಾರೆ. ಕೋವಿಡ್ ನಂತಹ ಸಂಕಷ್ಟ ಸಂದರ್ಭದಲ್ಲಿ ಅವರ ಕರ್ತವ್ಯ ನಿರ್ವಹಣೆ ಶ್ಲಾಘನೀಯ. ಒಬ್ಬೊಬ್ಬರು ಎರಡು ಮೂರು ಹುದ್ದಾಗಳನ್ನು ನಿಭಾಯಿಸಿದ್ದಾರೆ. ಸರ್ಕಾರದಲ್ಲಿ ಖಾಲಿ ಇರುವ ಹುದ್ದಾಗಳ ನೇಮಕಾತಿಗೆ ನಮ್ಮ ಸರ್ಕಾರ ಕ್ರಮ ಕೈಗೊಂಡಿದೆ ಎಂದರು.
ಕೋವಿಡ್ ನಿಂದಾಗಿ ನೇಮಕಾತಿಗೆ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಹಂತ ಹಂತವಾಗಿ ಅದನ್ನು ಸಡಿಲಗೊಳಿಸುತ್ತಿದ್ದೇವೆ. ಅಗತ್ಯ ಇರುವ ಕಡೆ ನೇಮಕಾತಿಗಳಿಗೆ ಅವಕಾಶ ನೀಡುತ್ತಿದ್ದು, ಹೊಸ ಹುದ್ದಾಗಳ ಸೃಷ್ಟಿಸುವ ಪ್ರಕ್ರಿಯೆಯೂ ನಡೆಯುತ್ತಿದೆ ಎಂದು ವಿವರಿಸಿದರು.