ಧಾರವಾಡ: ಕರ್ನಾಟಕದ ಪ್ರತಿಯೊಬ್ಬರೂ ತಮ್ಮ ಮಕ್ಕಳನ್ನು SSLC ವರೆಗೆ ಕನ್ನಡ ಶಾಲೆಗಳಲ್ಲಿ ಓದಿಸಬೇಕು. ಕನ್ನಡ, ಬದುಕಿನಲ್ಲಿ ಬಾಂಧವ್ಯ ಕಲಿಸುತ್ತದೆ. ಕನ್ನಡ ಅನ್ನ, ರೊಟ್ಟಿ ಸಾರು, ಪಲ್ಯ ಇದ್ದ ಹಾಗೆ. ಆದರೆ ಇಂಗ್ಲಿಷ್ ಉಪ್ಪಿನಕಾಯಿ, ಹಪ್ಪಳ ಇದ್ದ ಹಾಗೆ ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತರಾದ ಜೋಗತಿ ಮಂಜಮ್ಮ ಹೇಳಿದರು.
ಧಾರವಾಡದಲ್ಲಿ ಪ್ರಸಾರ ಭಾರತಿ ಸೌಹಾರ್ದ ಟ್ರಸ್ಟ್ ಆಯೋಜಿಸಿದ್ದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಪ್ರಶಸ್ತಿ ವಿತರಿಸಿ ಮಾತನಾಡಿದರು. ಕಲಾವಿದರು ನಿಜವಾದ ಮುತ್ತಾಗಬೇಕು. ಪ್ರಶಸ್ತಿ, ಸನ್ಮಾನಗಳು ಆತ್ಮಗೌರವ ಹೆಚ್ಚಿಸುತ್ತವೆ, ಜವಾಬ್ದಾರಿ ಹೆಚ್ಚಿಸುತ್ತವೆ. ಈಗ ನೀವೇನು ಸಾಧಿಸಿದ್ದೀರಿ ಮುಖ್ಯವಲ್ಲ. ಮುಂದೆ ನೀವು ಮಾಡಬೇಕಾದ ಸಾಧನೆ ಬಹಳಷ್ಟಿದೆ ಎಂದು ಜೋಗತಿ ಮಂಜಮ್ಮ ಹೇಳಿದರು.
ನಾಡಿನ ಪ್ರತಿಯೊಬ್ಬರೂ ಓದುವ ಸಂಸ್ಕೃತಿ ಬೆಳೆಸಿಕೊಳ್ಳಬೇಕು. ಜೊತೆಗೆ ಸಮಾಜದ ಪ್ರತಿಯೊಬ್ಬರಿಗೂ ಬದುಕುವ ಹಕ್ಕಿದೆ. ಮಂಗಳಮುಖಿಯರನ್ನೂ ನೀವು ಮನುಷ್ಯರಂತೆ ಕಾಣುವುದನ್ನು ಅಭ್ಯಾಸ ಮಾಡಿಕೊಳ್ಳಿ ಎಂದು ಹೇಳಿದರು.
ಮಕ್ಕಳಿಗೆ ರಾಮಾಯಣ, ಮಹಾಭಾರತ ಓದುವುದನ್ನು ಅಭ್ಯಾಸ ಮಾಡಬೇಕು. ಕಾಯಕ ಯೋಗಿಗಳಾಗಿ ನಾವು ಬದುಕಬೇಕು. ಆ ಕಾಯಕವೇ ನಮಗೆ ಗೌರವ ತಂದುಕೊಡುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಬಸವರಾಜ್ ದೇವರು ಸ್ವಾಮೀಜಿ, ರಂಗಾಯಣ ನಿರ್ದೇಶಕರಾದ ರಮೇಶ್ ಶೂ. ಪರವಿನಾಯ್ಕರ, ಕರ್ನಾಟಕ ಸಮಾಚಾರ ಪತ್ರಿಕೆ ಸಂಪಾದಕರಾದ ರಮೇಶ್ ಹಿರೇಜಂಬೂರು, ಸವಿತಾ ಅಮರಶೆಟ್ಟಿ, ಮಂಜುಳಾ ಎಲಿಗಾರ್, ಸಂಘಟಕರಾದ ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.