1984 ನಾನಾಗ ಲಕ್ಷ್ಮೀಪುರಂ ಠಾಣೆಯ ಸಬ್ ಇನ್ಸ್‌ಪೆಕ್ಟರ್.
ಎಸ್ ಪಿ . ಶ್ರೀ ವೈ.ಆರ್.ಪಾಟೀಲ್ ಅವರ ಫೋನ್.
” ತರಾಸು ಅಂತ ಒಬ್ರು ಸಾಹಿತಿಗಳಿದ್ದಾರೆ. ಗೊತ್ತೇನ್ರೀ ?”.
” ಗೊತ್ತು ಸಾರ್.”
” ಅವರದೊಂದು ಪ್ರಾಬ್ಲಂ ಇದೆ
ಅವರು ಬರೆದ ಕಾದಂಬರಿಯನ್ನು ಯಾರೋ ಪಬ್ಲಿಷರ್ ಇಲ್ಲೀಗಲ್ ಆಗಿ ಪ್ರಿಂಟ್ ಮಾಡಿಸಿ ಮಾರುತ್ತಿದ್ದಾನಂತೆ. ಕಾಪೀರೈಟನ್ನ ನೀವೇ ಬರಕೊಟ್ಟಿದ್ದೀರಿ ಅಂತ ದಬಾಯಿಸುತ್ತಾನಂತೆ. ಆದರೆ ತರಾಸು ಏನೆಂದು ಬರೆದುಕೊಟ್ಟಿದ್ದಾರೆ ಎಂಬುದನ್ನು ತೋರಿಸೋದಿಲ್ಲ. ಕೇಳಿದರೆ ಜಗಳಕ್ಕೆ ಬರ್ತಾನೆ. ಇವರಿಗೂ ವಯಸ್ಸಾಗಿದೆ. ಕಳಿಸಿಕೊಡ್ತೀನಿ. ವಿಚಾರಿಸಿ ಸಹಾಯ ಮಾಡ್ತೀರಾ ?. “.
” ಖಂಡಿತವಾಗಿಯೂ ಸರ್. ದಯವಿಟ್ಟು ಕಳಿಸಿಕೊಡಿ.” ಎಂದೆ.
ರಿಕ್ಷಾದಿಂದ ತರಾಸು ಇಳಿದು ಬಂದರು. ಅದೇ ಬಿಳಿಯ ಜುಬ್ಬಾ ಪಾಯಿಜಾಮ. ಆದರೆ ಹಿಂದಿನ ಆ ಗಡಸು ಧ್ವನಿಯ ತರಾಸು ಅವರಾಗಿರಲಿಲ್ಲ. ತುಂಬಾ ಇಳಿದುಹೋಗಿದ್ದರು. ನಡೆಯಲೂ ಆಸರೆ ಬೇಕಿತ್ತು. ನನ್ನ ಸ್ನೇಹಿತರಾಗಿದ್ದ ಶ್ರೀ ರಾಜಾರಾಂ ( ಪೆಥಾಲಜಿ ವಿಭಾಗದಲ್ಲಿದ್ದರು. ) ಜೊತೆಯಲ್ಲಿ ಬಂದಿದ್ದರು.
” ನನ್ನ ಕಾದಂಬರಿಯನ್ನು ಈಗಾಗಲೇ ಏಳೆಂಟು ಬಾರಿ ಮುದ್ರಣ ಮಾಡಿ ಮಾರಾಟ ಮಾಡಿಬಿಟ್ಟಿದ್ದಾನೆ. ಕೇಳಲು ಹೋದರೆ ಬಾಯಿಗೆ ಬಂದಂತೆ ಬೈದು ಜಗಳಕ್ಕೇ ಬರ್ತಾನೆ. ಹೋಗಲಿ ನಾನು ಕಾಪಿರೈಟ್ ಬರೆದು ಕೊಟ್ಟಿರುವುದನ್ನಾದರೂ ತೋರಿಸಪ್ಪಾ ? ಅಂದರೆ ಅದನ್ನೂ ತೋರಿಸೋದಿಲ್ಲ. ‘ ನಾನ್ಯಾಕೆ ತೋರಿಸಲಿ ?. ಅಂಥಾ ತೀಟೆ ಇದ್ದರೆ ನೀನೇ ಕೋರ್ಟಿಗೆ ಹೋಗು .ಅಲ್ಲಿ ತೋರುಸ್ತೀನಿ. ಇನ್ನೊಂದು ಸಾರಿ ಇಲ್ಲಿಗೆ ಬಂದ್ರೆ ಕೈಕಾಲು ಮುರಿಸಿ ಮೂಲೇಲಿ ಕೂರಿಸ್ತೀನಿ, ಹುಷಾರ್ ! ‘ ಅಂತೆಲ್ಲಾ ಹಲ್ಕಾ ಮಾತಲ್ಲಿ ಬೆದರಿಸುತ್ತಾನೆ “.
ಇಷ್ಟು ಮಾತಾಡುವುದರಲ್ಲಿ ಅವರಿಗೆ ಗಂಟಲುಬ್ಬಿ ಬಂದಿತ್ತು.
ನಾಡಿನ ನೆಲ ಜಲ , ಶಿಥಿಲ ದೇವಸ್ಥಾನದ ಸ್ಮಾರಕಗಳು ಅಂದರೆ ಸಾಕು ಗಂಡು ಗಂಟಲಲ್ಲಿ ಕಿಡಿಕಾರುತ್ತಾ ಮಾತಾಡುತ್ತಿದ್ದ ತರಾಸು ಇವರೇನಾ ? . ಅಶೋಕ ಮೆಹ್ತಾ ( ಸಮಾಜವಾದಿ ರಾಜಕಾರಣಿ ) ಅವರ ಇಂಗ್ಲಿಷ್ ಭಾಷಣವನ್ನು ಮೂಲದ ತಲೆಯ ಮೇಲೆ ಹೊಡೆದಂತೆ ತರ್ಜುಮೆ ಮಾಡಿ ನಿರರ್ಗಳವಾಗಿ ಮಾತಾಡುತ್ತಿದ್ದ ಆ ತರಾಸು ಈಗ ಇಷ್ಟು ನಿತ್ರಾಣಿಯೇ ?.
ಪೊಲೀಸೊಬ್ಬನನ್ನು ಕಳಿಸಿ ಆ ಪ್ರಕಾಶಕನನ್ನು ಕರೆಸಿದೆ. ಆತ ಭುಸುಗುಡುತ್ತಲೇ ಬಂದ.
” ಈ ಕುಡುಕ ಇಲ್ಲಿಗೂ ಬಂದು ಕಂಪ್ಲೇಂಟ್ ಕೊಟ್ಟಿದ್ದಾನಾ ಸಾರ್. ಇವನೇ ಕೈಯ್ಯಾರ ಕಾದಂಬರಿ ಹಕ್ಕನ್ನು ನಮ್ಮ ತಂದೆಯವರಿಗೆ ಬರೆದು ಕೊಟ್ಟಿದ್ದಾನೆ. ಕೈತುಂಬಾ ದುಡ್ಡು ಇಸ್ಕಂಡಿದ್ದಾನೆ. ಈಗ ನೋಡಿದ್ರೆ ಎಲ್ಲಾ ಕಡೆ ಸುಳ್ಸುಳ್ ಕಂಪ್ಲೇಂಟ್ ಕೊಟ್ಟು ಕಿರಿಕಿರಿ ಮಾಡ್ತಿದ್ದಾನೆ .. . . .” ಬಡ ಬಡಿಸತೊಡಗಿದ.
ಅದು ಎಂಬತ್ತರ ದಶಕ. ಬಂದವನದೇ ನ್ಯಾಯವಿರಲಿ. ಠಾಣೆಯಲ್ಲಿ ಯಾವನೂ ಹದ್ದುಮೀರಿ ಮಾತಾಡುವಂತಿರಲಿಲ್ಲ. ಇವನೋ ಠಾಣೆಯ ಭಯವೇ ಇಲ್ಲದವನಂತಿದ್ದಾನೆ. ಗೌರವಾನ್ವಿತ ತರಾಸು ಅವರಿಗೆ ಕುಡುಕ ನನ್ಮಗ ಅಂತೆಲ್ಲ ತುಚ್ಛವಾಗಿ ಮಾತನಾಡುವುದುಂಟೇ ?. ಅವರ ವಯಸ್ಸು , ಅನಾರೋಗ್ಯ ನೋಡಿ ಮಾತಾಡುವುದಲ್ಲವೇ ?.
” ಯ್ಯೇಯ್ ನೆಟ್ಟಗೆ ಮಾತಾಡೋ ಭೋಡಿಕೆ. ಝಾಡಿಸಿ ಎದೆಗೊದ್ದ ಅಂದ್ರೆ ತಿಂದಿದ್ದೆಲ್ಲಾ ಕಕ್ಕಂಬೇಕು ” ಎಂದು ಆವಾಜ್ ಹಾಕುತ್ತಿದ್ದಂತೆ , ಅವನ ಪಕ್ಕದಲ್ಲೇ ನಿಂತಿದ್ದ ಪೋಲಿಸ್ ಅವನ ಹೆಕ್ಕತ್ತಿಗೆ ಫಟ್ಟೆಂದು ಬಾರಿಸಿದ. ” ಪೋಲಿಸ್ ಸ್ಟೇಷನ್ ಅಂದ್ರೆ ನಿಮ್ಮಪ್ಪನ ಮನೆಯಲ್ಲ ಬೋಮಗನೇ . ಏನು ಹೇಳ್ಬೇಕೋ ಅದನ್ನು ಮರ್ಯಾದೆಯಿಂದ ಮಾತಾಡು ” ಅಂತ ಹೇಳ್ತಿದ್ದೆ.
ಪೇದೆ ಇನ್ನೊಂದೆರಡು ಬಿಟ್ಟ.
” ಸಾರ್ ಸಾರ್ ಹೊಡೆಯೋದೇನೂ ಬೇಡ. ಇದುವರೆಗೂ ಆ ಕಾದಂಬರಿಯ ಎಷ್ಟು ಕಾಪೀಸ್ ಪ್ರಿಂಟ್ ಮಾಡಿಸಿದ್ದಾರೆ. ಯಾವ ಆಧಾರದ ಮೇಲೆ ಪ್ರಿಂಟ್ ಮಾಡಿ ಮಾರಿದರು ಅಂತ ಅಷ್ಟನ್ನು ಹೇಳಲಿ ಸಾಕು.” ಎಂದು ತರಾಸು ತಡೆದರು.
ಅಷ್ಟರಲ್ಲಾಗಲೇ ಅವನ ಸುತ್ತ ಮೂವರು ಪೋಲಿಸರು ಆವರಿಸಿ ನಿಂತಿದ್ದರು. ಆಗಿನ terrorising ವಿಚಾರಣಾ ಕ್ರಮ ಇದ್ದದ್ದೇ ಹಾಗೆ . ( ೧೯೮೦ರ ದಶಕ )ಮೂರ್ನಾಲ್ಕು ಜನ ಧಾಂಡಿಗ ಪೊಲೀಸರು ಸುತ್ತ ನಿಲ್ಲುತ್ತಿದ್ದರು. ಅವನು ಅಷ್ಟಕ್ಕೇ ಹುಯ್ದುಕೊಂಡಿದ್ದ. ದನಿ ಉಡುಗಿತ್ತು.
” ನನ್ನ ಮಕ್ಕಳ ಮೇಲೆ ಪ್ರಮಾಣಾ ಮಾಡಿ ಹೇಳ್ತೀನಿ. ನಮ್ಮ ತಂದೆಯವರಿಗೆ ಇವರು ಒಟ್ಟು ಮೂರು ಕಾದಂಬರಿಗಳ ಕಾಪಿರೈಟ್ಸ್ ಬರೆದುಕೊಟ್ಟಿದ್ದಾರೆ. ನಾವು ಇದೊಂದು ಕಾದಂಬರಿಯನ್ನು ಮಾತ್ರ ನಾಲ್ಕು ಬಾರಿ ಅಚ್ಚು ಹಾಕಿಸಿದ್ದೇವೆ. ಒಟ್ಟು ಮೂರು ಸಾವಿರ ಪ್ರತಿ. ಇಪ್ಪತ್ತು- ಮೂವತ್ತು ರೂಪಾಯಿ ಬೆಲೆ. ಇವರೇ ಬರೆದು ಕೊಟ್ಟಿರೋ ಪತ್ರ ಬೇಕಾದರೆ ತೋರುಸ್ತೀನಿ ” .
” ಬೇಕಾದ್ರೆ ತೋರುಸ್ತೀನಿ . ಬ್ಯಾಡಾದ್ರೆ ಇಟ್ಕಂತೀನಿ ಅಂದರೆ ದವಡೆ ಕಿತ್ತು ಕೈಗೆ ಕೊಡ್ತೀನಿ ಮಗನೇ. ಮರ್ಯಾದೆಯಾಗಿ ಈಗಲೇ ಈ ತಕ್ಷಣವೇ ತಂದು ತೋರಿಸ್ಬೇಕು.”.
” ಸಾರಿ ಸಾರ್. ಬೇಕಾದ್ರೆ ಅಂತ ಮಾತಿಗೆ ಅಂದೆ. ಈಗಲೇ ತಂದು ತೋರುಸ್ತೀನಿ. ” .
ಅವನನ್ನು ಕರೆತಂದಿದ್ದ ಪೇದೆಗೆ ,
” ನೋಡ್ರೀ ಇವನ ಜೊತೆ ಹೋಗಿ ಆ ಪೇಪರ್ ತೆಗೆಸಿಕೊಂಡು ಬನ್ನಿ. ಏನಾದ್ರೂ ಗಾಂಚಾಲಿ ಮಾಡಿದರೆ ಅಲ್ಲಿಂದಲೇ ಹೆಡಮುರಿ ಕಟ್ಕೊಂಡು ರೋಡಲ್ಲಿ ದರದರ ಎಳಕೊಂಡು ಬನ್ನಿ. “
” ಸಾರ್ ಸಾರ್ ದಯವಿಟ್ಟು ಬೇಡಿ. ನನ್ನ ನಂಬಿ. ಈ ತಕ್ಷಣ ತಗೊಂಡು ಬರ್ತೀನಿ.”
” ಅವೆಲ್ಲಾ ಪುರಾಣ ಬೇಡ. ಪೋಲೀಸ್ನೋರು ನಿನ್ನ ಜೊತೆಗೆ ಬರ‌್ತಾರೆ. ತಕ್ಷಣ ತಗೊಂಡು ಬಾ.” ಕಟುವಾಗಿ ಹೇಳಿದೆ.
ಅವನ ಪಕ್ಕ ನಿಂತಿದ್ದ ಪೇದೆ Shivanna S Mysore ಬೆನ್ನ ಮೇಲೆ ರಪ್ಪೆಂದು ಬಾರಿಸಿದ. ಅದು ಠಾಣಾ ವಾಡಿಕೆ !.
” ಪೋಲಿಸ್ ಕಾವಲು ಬೇಕಾಗಿರಲಿಲ್ಲ ಸಾರ್. ಅವರಪ್ಪ ಮರ್ಯಾದಸ್ತ. ಈ ಹುಡುಗನೂ ಕೆಟ್ಟವನಲ್ಲ. ಏನೋ ಬಿಸಿರಕ್ತ. ಹಾಗೆ ಮಾತಾಡಿದ್ದಾನೆ.” ತರಾಸು ಅಂದರು.
” ಇರಲಿ ಬಿಡಿ. ಪೊಲೀಸ್ ಎನ್ ಕ್ವೈರಿ ಅಂದರೆ ಲೂಸು ಬಿಡೋದಿಕ್ಕೆ ಆಗೋದಿಲ್ಲ. ಜೊತೆಗೆ ಪೋಲಿಸೂ ಹೋದ್ರೇನೆ ಅದಕ್ಕೆ ಬೆಲೆ.
” ಅದ್ಸರಿ. ‘ ನೀವೇ ಬರೆದುಕೊಟ್ಟಿದ್ದೀರಾ ‘ ಅಂದ್ನಲ್ಲ ?. ಅದು ನಿಜವೇ ?.”
” ಹಂಡ್ರೆಡ್ ಪರ್ಸೆಂಟ್ ನಾನು ಬರೆದುಕೊಟ್ಟಿಲ್ಲ ಅನ್ನೋದು ಗ್ಯಾರಂಟಿ. ನಾನು ಎಸ್ಪಿಯವರ ಬಳಿ ಹೋಗೋದಿಕ್ಕೆ ಮುನ್ನ ಹತ್ತುಬಾರಿ ಯೋಚನೆ ಮಾಡಿಕೊಂಡು ಹೋದೆ. ನಾನು ಕಾಪಿರೈಟ್ ಬರೆದುಕೊಟ್ಟಿಲ್ಲ. ಈತನನ್ನು ಕೇಳಿದರೆ ತೋರಿಸೋದೂ ಇಲ್ಲ. ಅದಕ್ಕಾಗಿ
as a last resort ನಿಮ್ಮ ಹತ್ತಿರ ಬಂದೆ.”
” ನೀವೇನೂ ಯೋಚನೆ ಮಾಡ್ಬೇಡಿ ಸಾರ್ . ಅವನೇನಾದ್ರೂ ನಿಮ್ಮ ಸಹಿ ಫೋರ್ಜರಿ ಮಾಡಿದ್ದರೆ ಹುಟ್ಟಲಿಲ್ಲಾ ಅನ್ನಿಸಿ ಬಿಡ್ತೀವಿ. “
ಆಗಿನ್ನೂ ಅವರು ತಮ್ಮ ಮಹೋನ್ನತ ಕೃತಿ ದುರ್ಗಾಸ್ತಮಾನ ಬರೆದಿದ್ದರು. ಅದರ ಬಗ್ಗೆ ಮಾತಾಡಿದರು. ಡಾ. ರಾಜ್ ಅವರು ತಮ್ಮ ಕಾದಂಬರಿ ಆಧಾರಿತ ಅಮೋಘವರ್ಷ ನೃಪತುಂಗ ಮಾಡಲಿದ್ದಾರೆ. ಅದರ ಮಾತುಕತೆ ನಡೆಯುತ್ತಿದೆ ಎಂದರು.
ಅಷ್ಟರಲ್ಲಿ ಫೋನೊಂದು ಬಂತು. ನೋಡಿದರೆ ಚಿತ್ರನಟ ಕೆ.ಎಸ್.ಅಶ್ವಥ್ !.
” ಪಾಪ , ಬಹಳಾ ನೊಂದು ಹೋಗಿದ್ದಾನೆ. ದಯವಿಟ್ಟು ನೀವಾದ್ರೂ ಅವನ ಕೈ ಹಿಡಿಯಬೇಕು ” ಕೇಳಿಕೊಂಡರು. ಫೋನಿಟ್ಟ ಮೇಲೆ
” ನಿಮ್ಮ ಚಾಮಯ್ಯ ಮೇಷ್ಟ್ರು” ಎಂದೆ.
” ನನ್ನ ಕಷ್ಟ ಹೇಳಿಕೊಂಡಿದ್ದೆ . ನೀವು ಗೊತ್ತು ಅಂತ ಹೇಳಿದ್ದ ” ತರಾಸು ಅಂದರು. ಅವರು ಮೂವರೂ ಏಕವಚನದ ಆತ್ಮೀಯರಂತೆ .

ಆ ಪ್ರಕಾಶಕ ಎಷ್ಟು ಹೊತ್ತಾದರೂ ಬರಲೇ ಇಲ್ಲ. ಅವನ ಅಂಗಡಿ , ಮನೆಗೆ ಫೋನ್ ಮಾಡಿದರೂ ಪತ್ತೆ ಇಲ್ಲ. ಈಗಿನಂತೆ ಮೊಬೈಲ್ ಇಲ್ಲದ ಕಾಲ ಅದು.
ಅದಾಗಲೇ ಮಧ್ಯಾಹ್ನ ಎರಡೂವರೆಯಾಗಿತ್ತು. ” ನೀವು ಮನೆಗೆ ಹೋಗಿ ಅಲ್ಲೇ ಇರಿ ಸಾರ್ . ಅವನು ಬಂದರೆ ಇಲ್ಲೇ ಕುಕ್ಕಿ ಹಾಕಿರ್ತೀನಿ. ನೀವು ಹೋಗಿ ” ಎಂದು ಕಳಿಸಿಕೊಟ್ಟೆ.
ಊಹೆ ನಿಜವಾಗಿತ್ತು. ಆ ಪ್ರಕಾಶಕ ವಕೀಲರೊಬ್ಬರನ್ನು ಜೊತೆಗೆ ಕರೆತಂದಿದ್ದ. ಕ್ರಿಮಿನಲ್ ಗಳ ಹಣೆಬರಹವೇ ಇದು.ಸ್ವಲ್ಪ ಸವುಡು ಸಿಕ್ಕರೆ ಸಾಕು. ಇವೆಲ್ಲವನ್ನೂ ಮಾಡಿಯೇ ಮಾಡುತ್ತಾರೆ.
ಆ ವಕೀಲರು ಮನೆಗೆ ಫೋನ್ ಮಾಡಿದ್ದರು.
ಅವನ ಜೊತೆಗೆ ಬಂದಿದ್ದ ವಕೀಲರು ಪರಿಚಯದವರೇ. ಅವರಿಗೆ ಮಾತಾಡಿದೆ. ” ಇಷ್ಟೊತ್ತು ಕಾಯ್ದು ಈಗಿನ್ನೂ ಊಟಕ್ಕೆ ಬಂದಿದ್ದೇನೆ. ಇನ್ನೊಂದು ಅರ್ಧ ಮುಕ್ಕಾಲು ಗಂಟೆ . ಬೇಗ ಬಂದು ಬಿಡ್ತೀನಿ. ತರಾಸು ಅವರನ್ನೂ ಕರೆಸಬೇಕು.ಅವನಲ್ಲೇ ಇರಲಿ.
” ಪಾಪ , ನೀವ್ಯಾಕೆ ಅಲ್ಲಿ ಸುಮ್ಮನೇ ಕಾಯಬೇಕು !. ನೀವೀಗ ಹೋಗಿರಿ. ನಾನು ಬಂದಮೇಲೆ ನಿಮಗೆ ಕಾಲ್ ಮಾಡ್ತೀನಿ.” ವಕೀಲರಿಗೆ ಹೇಳಿದೆ.
” ಇವನನ್ನೂ ಕರೆದುಕೊಂಡು ಬಂದು ನಾನೇ ಹಾಜರ್ ಮಾಡ್ತೀನಿ. ಕರೆದುಕೊಂಡು ಹೋಗಲೇ ? “.
” ಅದೆಲ್ಲಾ ಬೇಡಿ ಸಾರ್. ಇದು ಎಸ್ಪಿ ಸಾಹೇಬರ ಕೇಸು. ಡಾಕ್ಯುಮೆಂಟ್ಸ್ ತಗೊಂಡು ಬೇಗ ಬಾರಯ್ಯ ಅಂದರೆ ನಿಮ್ಮನ್ನು ಹಿಡಕೊಂಡು ಬಂದಿದ್ದಾನೆ. ನೀವು ಹೋಗಿ , ಅವನಲ್ಲೇ ಇರಲಿ. ನಾನೇ ನಿಮ್ಮನ್ನು ಕರೆಸುತ್ತೇನೆ. ಆಗ ಬರುವಿರಂತೆ.”
” ನಾನು ಆ ಕಡೆಗೆ ಹೋದಾಗ ಈ ಕಡೆ ಇವನಿಗೆ ಬಾರಿಸಿದರೆ ನನ್ನ ಪರಿಸ್ಥಿತಿ awkward ಆಗಿಬಿಡುತ್ತೆ. ನಾನಿಲ್ಲೇ ಕೂತಿರುತ್ತೇನೆ. ನೀವು ಬನ್ನಿ ಸಾರ್ !. ” ಅವರೆಂದರು.
ನನ್ನ ಮನಸ್ಸಿನಲ್ಲಿ ಬೇರೇನೊ ಇತ್ತು.
” ನಾನೀಗ ಎಸ್ ಪಿ ಸಾಹೇಬರ ಮೀಟಿಂಗ್ ಗೆ ಹೋಗ್ತಿದ್ದೇನೆ. ವಾಪಸ್ ಬಂದಾಗ ನಿಮಗೆ ಫೋನ್ ಮಾಡ್ತೀನಿ ಆಗ ತಾವು ಬನ್ನಿ. ಅವನು ಅಲ್ಲೇ ಕುಕ್ಕರು ಬಡಿದಿರಲಿ. ತಾವು ಹೊರಡಿ “. ಫೋನಿಟ್ಟೆ.
ಠಾಣೆಗೆ ಹೋದಾಗ ಸಂಜೆ ಏಳು ಗಂಟೆಯಾಗಿತ್ತು. ಆ ಪ್ರಕಾಶಕ ಹೈರಾಣಾಗಿದ್ದ. ಅದು ಕಾಯಿಸಿ ಹದ ಮಾಡುವಿಕೆ. ಅವನ ಕಡೆಯವರೆಲ್ಲಾ ಠಾಣೆಯ ಹೊರಗಡೆ ಗುಡ್ಡೆ ಹಾಕಿಕೊಂಡು ನಿಂತಿದ್ದರು. ಪಾಪ ,
ಆ ವಕೀಲರೂ ಪುನಃ ಠಾಣೆಗೆ ಬಂದು ಕಾಯುತ್ತಿದ್ದರು.
ತರಾಸು ಅವರಿಗೆ ಫೋನ್ ಮಾಡಿ ಕರೆಸಿದೆವು. ಅವರು ಬಂದಾಗ ರಾತ್ರಿ ಎಂಟು ಮೀರಿತ್ತು.
ವಕೀಲರನ್ನು ಹೊರಗಡೆ ಕೂರಿಸಿ , ಆತನಿಗೆ ಪತ್ರ ತೋರಿಸುವಂತೆ ಹೇಳಿದೆ .
ಅದೊಂದು ಮಾಸಿದ ಬಿಳಿಯ ಹಾಳೆ. ತನ್ನ ಕೌಟುಂಬಿಕ ತೊಂದರೆಗಳಿಗಾಗಿ ಸದರಿ ಕಾದಂಬರಿಯ ಸಮಸ್ತ ಹಕ್ಕುಗಳನ್ನೂ ಪ್ರಕಾಶಕರಿಗೆ ಕೊಟ್ಟಿದ್ದು , ಎಷ್ಟು ಬಾರಿ ಬೇಕಾದರೂ ಅದನ್ನು ಪುನರ್ಮುದ್ರಿಸಿ ಮಾರಬಹುದೆಂದೂ ಅನುಮತಿ ನೀಡಿದ್ದೇನೆ ಎಂದು ತರಾಸು ಅವರೇ ತಮ್ಮ ಸ್ವಂತ ಹಸ್ತಾಕ್ಷರಗಳಲ್ಲಿ ಬರೆದುಕೊಟ್ಟಿರುವಂತೆ ದಿನಾಂಕದೊಂದಿಗೆ ಸಹಿ ಹಾಕಿದ್ದ ಪತ್ರ ಅದಾಗಿತ್ತು .
ಕೃತಿಯ ಸಮಸ್ತ ಹಕ್ಕುಗಳನ್ನೂ ಕೊಟ್ಟಿರುವುದು ಮೇಲ್ನೋಟಕ್ಕೆ ಮೋಸವೆಂಬಂತೆ ಕಾಣುತ್ತಿತ್ತು.
ಅದೂ ಎಷ್ಟು ರೂಪಾಯಿಗೆ ?.
ಕೇವಲ ಐನೂರು ರೂಪಾಯಿಗಳಿಗೆ ಕೃತಿಯ ಸಮಸ್ತ ಹಕ್ಕುಗಳನ್ನು ಪರ್ಮನೆಂಟಾಗಿ ಕೊಟ್ಟು ಬಿಟ್ಟಿದ್ದರು !.
ಅದನ್ನಾತ ಪ್ಲ್ಯಾಸ್ಟಿಕ್ ಫೋಲ್ಡರಿನಲ್ಲಿ ಹಾಕಿ ಕೊಟ್ಟಿದ್ದ.
ತರಾಸು ಅವರು ಕನ್ನಡಕ ಏರಿಸಿಕೊಂಡು ಕೂಲಂಕಷವಾಗಿ
ಆ ಪತ್ರವನ್ನು ಓದಿದರು. ಅದರ ಬರಹ , ಒಕ್ಕಣೆ , ಸಹಿ ಎಲ್ಲವನ್ನೂ ನಿಧಾನವಾಗಿ ಪರಿಶೀಲಿಸಿದರು .
ನನಗದು ಫೋರ್ಜರಿ ಎಂದು ಖಚಿತವಾಗಿತ್ತು. ನನ್ನ ಶಿಷ್ಯನಿಗೆ ಕಣ್ಸನ್ನೆ ಮಾಡಿದೆ. ಆತ ಆ ಪ್ರಕಾಶಕನ ಪಕ್ಕಕ್ಕೇ ಬಂದು ನಿಂತ. ಫೋರ್ಜರಿ ಸತ್ಯ ಗೊತ್ತಾದೊಡನೆ ಹೆಕ್ಕತ್ತಿನ ಮೇಲೆ ಬಾರಿಸಲು ತಯಾರಾಗಿದ್ದ.
ತರಾಸು ಇನ್ನೂ ನೋಡುತ್ತಲೇ ಇದ್ದರು. ಅವರ ಮನದಲ್ಲಿ ಅದೇನು ತಳಮಳ ನಡೆಯುತ್ತಿತ್ತೋ ?. ನಾವೆಲ್ಲರೂ ಮೌನವಾಗಿ ಕಾಯುತ್ತಿದ್ದೆವು. ನಮ್ಮ ಪೇದೆಗೆ ತಡೆಯದಾಯಿತು. ಅಡ್ವಾನ್ಸಾಗಿ ಇರಲಿ ಎಂದು ಪ್ರಕಾಶಕನ ಹೆಕ್ಕತ್ತಿಗೊಂದು ಬಾರಿಸಿಯೇಬಿಟ್ಟ !.
” ಯೇಯ್ ಯಾಕ್ರೀ ?! ” ಎಂದೆ.
” ನ್ಯಟ್ಟಗೆ ನಿಂತ್ಕಳ್ಳೋದು ಬಿಟ್ಟು ನುಲಿದಾಡ್ತಾ ಅವ್ನೇ ! ” ಪೇದೆ ಸುಂದರ್ ಸಬೂಬು ಹೇಳಿದ.
” ಇಲ್ಲಾ ಸಾರ್. ಇದು ನಾನೇ ಬರೆದಿರೋದು. ನನ್ನದೇ ಅಕ್ಷರ.ಯಾವಾಗ ಬರೆದುಕೊಟ್ಟಿದ್ದೆ ಅಂತ ನೆನಪಿಲ್ಲ.” ತರಾಸು ಅಂದುಬಿಟ್ಟರು.
ನನಗಾದ ನಿರಾಸೆ ಅಷ್ಟಿಷ್ಟಲ್ಲ. ಸವುಡು ಸಿಕ್ಕರೆ ಸಾಕು.ಮೈಮೂಳೆ ಮುರಿಯಲು ಸಿದ್ಧನಾಗಿದ್ದೆ. ( ಇದು ಆ ದಿನಗಳ ಪೊಲೀಸಿಂಗ್. ಉಭ ಶುಭ ಎಲ್ಲಕ್ಕೂ ಲಾತಾ ಕೊಟ್ಟೇ ಮಾತಾಡುತ್ತಿದ್ದದ್ದು.).
” ಇನ್ನೊಂದು ಸಾರಿ ಸರಿಯಾಗಿ ನೋಡಿ ಸಾರ್. ಇಂತಹ ಡಾಕ್ಯುಮೆಂಟ್ ಗಳನ್ನು ಬಹಳ ಹುಷಾರಾಗಿ ಫೋರ್ಜರಿ ಮಾಡಿರುತ್ತಾರೆ ” ಎಂದೆ.
” ನಮ್ಮನೆ ದೇವರಾಣೆಯಾಗೂ ಇವರೇ ಬರಕೊಟ್ಟಿರೋದು ಸಾರ್. ಹಂಗೇನಾದ್ರೂ ಫೋರ್ಜರಿ ಮಾಡಿದ್ರೆ ನನ್ನ ವಂಶ ನಿರ್ವಂಶವಾಗಲಿ !” ಪ್ರಕಾಶಕ ಹಲುಬಿದ.
” ಅದನ್ನೇ ಮಾಡ್ತೀವಿ ತಡಿ. ಈ ಕಾಗದ ಯಾವಾಗ ತಯಾರಿಸಿದ್ದು ?. ಇಂಕಿನ ವಯಸ್ಸೇನು ?. ಇದನ್ನು ಯಾರು ಬರೆದಿದ್ದಾರೆ ಎಲ್ಲವನ್ನೂ ಪರೀಕ್ಷೆ ಮಾಡಿಸಿದ ಮೇಲೇ ನಿನ್ನನ್ನು ಬಿಡೋದು.
‘ ರೀ ಸುಂದರ ಇವನನ್ನು ಒಳಗೆ ಕೂರಿಸ್ರೀ ‘ ” ಎಂದು ಕಳಿಸಿದೆ.
ತರಾಸು ಅವರಿಗೆ , ” ಸಾರ್ .ಇದು ಫೋರ್ಜರಿ ಅಂತ ಹೇಳಿ ಸಾಕು. ಆ ನನ್ಮಗನನ್ನು ಇಟ್ಟಾಡಿಸಿ ಬಿಡ್ತೀನಿ. ಹ್ಯಾಂಡ್ ರೈಟಿಂಗು , ಪೇಪರ್ರು , ಇಂಕು ಇವೆಲ್ಲವೂ ಎಕ್ಸ್ ಪರ್ಟ್ ಹತ್ರ ಹೋಗಿ ಪರೀಕ್ಷೆಯಾಗಿ ಬರಲಿ. ಆಮೇಲೆ ನೋಡೋಣ. ಈಗ ಒಂದು ಕಂಪ್ಲೇಂಟ್ ಕೊಡಿ. ” ಎಂದೆ.
” ಛೇ ಛೆ. ಅದೇನು ಬೇಡಿ. ಇದನ್ನು ನಾನೇ ಬರೆದು ಸೈನ್ ಹಾಕಿದ್ದೇನೆ. ಅದಂತೂ ಸತ್ಯ. ನಾವೆಲ್ಲರೂ ಬರವಣಿಗೆ ನಂಬಿಕೊಂಡು ಬದುಕು ಮಾಡಿದವರು. ಖಾಯಿಲೆ ಕಸಾಲೆ ಅಂತ ನೂರೆಂಟು ತಾಪತ್ರಯಗಳು. ಏನೋ ಕಷ್ಟಗಳು ಅಂತ ಬಂದಾಗಲೆಲ್ಲಾ ಹೀಗೆ ಬರೆದುಕೊಟ್ಟು ದುಡ್ಡು ತೆಗೆದುಕೊಳ್ತಿದ್ದೋ. ಬೇರೆಯವರಾದರೆ ಚಿನ್ನ ಬೆಳ್ಳಿ ಅಡವಿಡ್ತಾರೆ. ನಮಗೆ ಇಡೋದಿಕ್ಕೆ ಏನಿದೆ ?. ನಮ್ಮ ಜನಪ್ರಿಯ ಪುಸ್ತಕಗಳೇ ಅಡವಿಡುವ ಆಸ್ತಿ.
ಕಷ್ಟ ಅಂದರೆ ಸಾಹಿತಿಗೆ ಯಾರು ಸಾಲ ಕೊಡ್ತಾರೆ ?. “
” ಅದ್ಸರಿ. ನೀವು ಕಾದಂಬರಿಯಲ್ಲಿ ಕಾಪಿರೈಟ್ ಹಕ್ಕುಗಳು : ಲೇಖಕರವು ಅಂತ ಹಾಕಿರುತ್ತೀರಾ ಅಲ್ಲವೇ ? “
” ಹಾಗೆ ಪ್ರಿಂಟ್ ಮಾಡಿರುತ್ತಾರೆ. ಆದರೆ ಅದರ ಕಾನೂನು ಏನು ಅಂತ ಈವತ್ತಿಗೂ ನನಗೆ ಗೊತ್ತಿಲ್ಲ!. “
ಆ ಕಾದಂಬರಿ ತೆರೆದು ನೋಡಿದೆ. ಹಕ್ಕುಗಳನ್ನು ಕಾದಿರಿಸಲಾಗಿದೆ ಎಂದಿತ್ತು . ಲೇಖಕನಿಗೆ ಹಕ್ಕೇ ಇಲ್ಲ!.
” ಅದಿರಲಿ ಸಾರ್. ನಿಮ್ಮ ದುಡಿಮೇಲಿ ದುಡ್ಡು ಮಾಡಿಕೊಂಡು , ನಿಮ್ಮನ್ನೇ ಅಲೆದಾಡಿಸಿ ಅವಮಾನಿಸಿದ್ದಾನೆ. ಇವನನ್ನು ಸುಮ್ಮನೇ ಬಿಡೋದು ಬೇಡ. ಅಂತಹ ವ್ಯವಹಾರಸ್ಥ ಆಗಿದ್ದಿದ್ದರೆ , ಈ ಪತ್ರ ತೋರಿಸಿ ಹೀಗೀಗೆ ಅಂತ ಹೇಳಬಹುದಿತ್ತು. ತೋರಿಸದೇ ಯಾಕೆ ಮುಚ್ಚಿಟ್ಟ. ಪೋಲಿಸು ಅಂದ್ರೇನು ಅಂತ ತೋರಿಸೋಣ. ಒಂದು ಕಂಪ್ಲೇಂಟ್ ಬರೆದು ಕೊಡಿ.”
” ಒಂದು ನಿಮಿಷ ” ಎಂದವರೇ ಪಕ್ಕದಲ್ಲಿದ್ದ ರಾಜಾರಾಂ ಅವರ ಬಳಿ ಏನೋ ಮಾತಾಡತೊಡಗಿದರು. ಕೊನೆಗೆ ನಿರ್ಧರಿಸಿದವರಂತೆ ,
” ಕಂಪ್ಲೇಂಟ್ ಏನೂ ಬೇಡಿ ಸಾರ್. ಅವನನ್ನು ಬಿಟ್ಟುಬಿಡಿ. ಆ ಕೃತಿಯ ಹಕ್ಕುಗಳನ್ನು ಬರೆದು ಕೊಟ್ಟಿರುವುದು ಮರೆತೇ ಹೋಗಿತ್ತು. ಯಾವುದೋ ಕಷ್ಟಕ್ಕೆ ಬರೆದು ಕೊಟ್ಟಿರಬೇಕು. ಈ ಹುಡುಗನ ತಂದೆ ಧರ್ಮಾತ್ಮ. ಟೈಮಿಗೆ ಆಗ್ತಿದ್ದ. ಅದನ್ನು ನೆನೆಯಬೇಕು. ಇವನೊಂದು ಸಾರಿ ಪತ್ರ ತೋರಿಸಿದ್ದಿದ್ದರೆ ಸಾಕಿತ್ತು. ನಾನಿಲ್ಲಿಗೆ ಬರ್ತಾನೇ ಇರಲಿಲ್ಲ ” .
” ನಿಮ್ಮ ದುಡಿಮೆಯಲ್ಲಿ ಸಾವಿರಾರು ರೂಪಾಯಿ ಲಾಭ ಹೊಡೆಯುವವನಿಗೆ ಒಂದು ಚಿಕ್ಕ ಕೃತಜ್ಞತೆಯಾದರೂ ಇರಬೇಕಿತ್ತು. ವಂಚನೆಗಿಂತ ಕೃತಘ್ನತೆ ಹೀನವಾದದ್ದು. ನೀವು ಯಾವಾಗ ಬೇಕಾದರೂ ಕಂಪ್ಲೇಂಟ್ ಕೊಡಿ. ನಾನು ರಿಜಿಸ್ಟರ್ ಮಾಡ್ತೀನಿ ” . ಎಂದು ಬೀಳ್ಕೊಂಡೆ.
ಪ್ರಕಾಶಕನನ್ನು ಹೊರಕ್ಕೆ ಕರೆದೆ.
” ಅವರು ಆಮೇಲೆ ಬಂದು ಕಂಪ್ಲೇಂಟ್ ಕೊಡ್ತಾರಂತೆ. ಅಂಗಡಿ ಬಾಗಿಲು ಹಾಕಿ ಏಳು ವರ್ಷ ಜೈಲಲ್ಲಿ ಕೂರುವೆಯಂತೆ .ಈಗ ಹೊರಡು ” ಎಂದೆ.
ಅಲ್ಲೇ ಇದ್ದ ದಫೇದಾರ್ ರಂಗಸ್ವಾಮಿ ತಮ್ಮದೊಂದು ಧಮಕಿ ಹಾಕಿದರು.
” ಈಗ ಸಿಕ್ಕಿರೋದು ಚಿಕ್ಕ ಜೀವದಾನ. ಕಂಡೋರ್ ದುಡ್ಡು ತಿಂದು ಅರಗಿಸಿಕೊಳ್ಳೋದು ಸುಲಭಾ ಅಲ್ಲ. ಮೊದಲು ಆ ಸಾಯಿತಿಗಳನ್ನ ಕಂಡು ರಿಪೇರಿ ಮಾಡ್ಕೋ. ಅದೇನು ಮಾಡ್ಕತೀಯೋ ಮಾಡ್ಕೋ. ಅದು ನಿಂಗೆ ಬಿಟ್ಟಿದ್ದು “.
ಈ ಜ್ವಾಪಾಳ ಮಾತ್ರೆ ಚೆನ್ನಾಗಿ ಚೆನ್ನಾಗಿ ಕೆಲಸ ಮಾಡಿತು.
ಮಾರನೇ ದಿನವೇ ಅವನು ತರಾಸು ರ ಕೈಕಾಲು ಹಿಡಿದು ಕಾಡಿ ಬೇಡಿ ತಕರಾರು ತೀರ್ಮಾನಿಸಿಕೊಂಡನೆಂದು ಗೊತ್ತಾಯಿತು.
ಕೆಲವೇ ತಿಂಗಳಲ್ಲಿ ತರಾಸು ತೀರಿಕೊಂಡರು.

-ಜೆ.ಬಿ.ರಂಗಸ್ವಾಮಿ, ನಿವೃತ್ತ ಪೊಲೀಸ್ ಅಧಿಕಾರಿ, ಮೈಸೂರು