ತುಮಕೂರು: ಆರ್.ರಾಜೇಂದ್ರ ನಾಮಪತ್ರ ಸಲ್ಲಿಕೆ


ಜಿಲ್ಲಾ ಚುನಾವಣಾಧಿಕಾರಿಗಳೂ ಆದ ಡಿಸಿ ವೈ.ಎಸ್.ಪಾಟೀಲ್ ಅವರಿಗೆ ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಯಾಗಿ ಆರ್.ರಾಜೇಂದ್ರ ಉಮೇದುವಾರಿಕೆ ಸಲ್ಲಿಸಿದರು. ಈ ವೇಳೆ ಜಿಪಂ ಮಾಜಿ ಸದಸ್ಯ ಕಲ್ಲಹಳ್ಳಿ ದೇವರಾಜು, ಮುಖಂಡ ಕೊಟ್ಟ ಶಂಕರ್ ಹಾಜರಿದ್ದರು.

ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಕೆ

ವಿಧಾನ ಪರಿಷತ್ ತುಮಕೂರು ಸ್ಥಳೀಯ ಸಂಸ್ಥೆ ಕ್ಷೇತ್ರದ ಚುನಾವಣೆಗೆ ಸಂಭಾವ್ಯ ಕಾಂಗ್ರೆಸ್ ಅಭ್ಯರ್ಥಿಯಾಗಿ ಪಕ್ಷದ ಯುವ ಮುಖಂಡ ಹಾಗೂ ಕ್ರಿಬ್ಕೊ, ಡಿಸಿಸಿ ಬ್ಯಾಂಕ್ ನಿರ್ದೇಶಕ ಆರ್.ರಾಜೇಂದ್ರ ಬುಧವಾರ ನಾಮಪತ್ರ ಸಲ್ಲಿಸಿದರು.
ಮುಖಂಡರಾದ ಕಲ್ಲಹಳ್ಳಿ ದೇವರಾಜ್ ಮತ್ತು ಕೊಟ್ಟ ಶಂಕರ್ ಅವರ ಜೊತೆಗೆ ತೆರಳಿ ಬುಧವಾರ ಜಿಲ್ಲಾ ಚುನಾವಣಾಧಿಕಾರಿಗಳಾದ ಡಿಸಿ ವÉೈ.ಎಸ್. ಪಾಟೀಲ್ ಅವರಿಗೆ ಒಂದು ಸೆಟ್ ನಾಮಪತ್ರ ಸಲ್ಲಿಸಿದರು.

ಟಿಕೆಟ್ ಖಾತ್ರಿಯಿಂದ ಸಾಂಕೇತಿಕ ಉಮೇದುವಾರಿಕೆ: ನಾಮಪತ್ರ ಸಲ್ಲಿಸಿದ ನಂತರ ಮಾಧ್ಯಮದವರಿಗೆ ಪ್ರತಿಕ್ರಿಯಿಸಿದ ಆರ್.ರಾಜೇಂದ್ರ ಅವರು ನನಗೆ ಕಾಂಗ್ರೆಸ್ ಟಿಕೆಟ್ ಖಚಿತವಾಗಿದ್ದು, ಈ ದಿನ ಒಳ್ಳೆಯ ದಿನವಾದ್ದರಿಂದ ವಿಧಾನ ಪರಿಷತ್ ಚುನಾವಣೆಗೆ ಸಾಂಕೇತಿಕವಾಗಿ ನಾಮಪತ್ರ ಸಲ್ಲಿಸಿದ್ದು, ನ.23ರಂದು ಕಾಂಗ್ರೆಸ್ ಪಕ್ಷದ ಅಧಿಕೃತ ಬಿ.ಫಾರಂನೊಂದಿಗೆ ರಾಜ್ಯ-ಜಿಲ್ಲೆಯ ಕಾಂಗ್ರೆಸ್ ನಾಯಕರಾದ ಮಾಜಿ ಡಿಸಿಎಂ ಡಾ.ಜಿ.ಪರಮೇಶ್ವರ, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಸಂಸದರಾದ ಡಿ.ಕೆ.ಸುರೇಶ್, ಮಾಜಿ ಶಾಸಕರಾದ ಕೆ.ಎನ್.ರಾಜಣ್ಣ, ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಶಾಸಕ ವೆಂಕಟರಮಣಪ್ಪ, ಮಾಜಿ ಶಾಸಕರಾದ ಕೆ.ಷಡಕ್ಷರಿ, ಷಫಿಅಹ್ಮದ್, ಡಾ.ರಫೀಕ್ ಅಹ್ಮದ್ ಇನ್ನಿತರೆ ಹಾಲಿ ಮತ್ತು ಮಾಜಿ ಮುಖಂಡರು ನಾಯಕರುಗಳೊಂದಿಗೆ ಆಗಮಿಸಿ ಸಲ್ಲಿಸುವೆ ಎಂದರು.

ಅನುಕಂಪ, ಪಕ್ಷಾತೀತ ಸಹಕಾರ ಗೆಲುವಿಗೆ ಪೂರಕ: ಕಳೆದ ಬಾರಿ ಪರಾಭವಗೊಂಡಿದ್ದ ಅನುಕಂಪ ನನ್ನ ಮೇಲಿದ್ದು, ಕಳೆದ ಎರಡು ತಿಂಗಳುಗಳಿಂದ ಇಡೀ ಜಿಲ್ಲೆಯಾದ್ಯಂತ ಪ್ರವಾಸ ಮಾಡಿ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆ, ನಗರಸಭೆ, ಪಾಲಿಕೆ ಸದಸ್ಯರುಗಳನ್ನು ಭೇಟಿ ಮಾಡಿದ್ದು, ಪಕ್ಷಾತೀತವಾಗಿ ನನ್ನ ಸ್ಪರ್ಧೆಗೆ ಆಶೀರ್ವದಿಸಿದ್ದಾರೆ. ಈ ಬಾರಿ ಪಂಚಾಯ್ತಿಗಳಲ್ಲಿ ಯುವಕರೇ ಹೆಚ್ಚು ಆಯ್ಕೆಯಾಗಿದ್ದು, ಯುವ ಮುಖಂಡನಾಗಿ ನನಗೆ ಪೂರಕವೆನಿಸಿದೆ. ಆದ್ದರಿಂದ ಈ ಬಾರಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ತಾಯಿ ನಾಮಪತ್ರ ಸಲ್ಲಿಸುವುದಕ್ಕೂ ಮುನ್ನ ನಗರದ ಕೋಟೆ ಶ್ರೀ ಆಂಜನೇಯಸ್ವಾಮಿ ದೇವಸ್ಥಾನ, ಗಣಪತಿ ದೇವಸ್ಥಾನದಲ್ಲಿ ತಾಯಿ ಜಿಪಂ ಮಾಜಿ ಅಧ್ಯಕ್ಷೆ ಶಾಂತಲಾರಾಜಣ್ಣ, ಪತ್ನಿ ರಶ್ಮಿ ರಾಜೇಂದ್ರ, ಸಹೋದರ ಆರ್.ರವೀಂದ್ರ, ಭವಾನಿ ರವೀಂದ್ರ, ಸಹೋದರಿ ರಶ್ಮಿ ಅವರೊಂದಿಗೆ ಪೂಜೆ ಸಲ್ಲಿಸಿ ಅಲ್ಲಿಂದ ಜಿಲ್ಲಾಧಿಕಾರಿಗಳ ಕಚೇರಿಗೆ ಅಪಾರ ಬೆಂಬಲಿಗರೊಂದಿಗೆ ಆಗಮಿಸಿ ಉಮೇದುವಾರಿಕೆ ಸಲ್ಲಿಸಿದರು.

ಈ ವೇಳೆ ಮುಖಂಡರಾದ ಟಿ.ಪಿ.ಮಂಜುನಾಥ್, ಶಶಿ ಹುಲಿಕುಂಟೆ ಮಠ್, ಡಿಸಿಸಿ ಬ್ಯಾಂಕ್ ನಿರ್ದೇಶಕ ಜಿ.ಎನ್.ಮೂರ್ತಿ, ರವಿ, ರಾಘವೇಂದ್ರಸ್ವಾಮಿ, ವಾಲೆಚಂದ್ರಯ್ಯ, ಇ.ಟಿ.ನಾಗರಾಜ್, ಅನಿಲ್‍ಕುಮಾರ್, ಇಲಾಹಿ ಸಿಖಂದರ್, ಮೋಹನ್ ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಬೆಂಬಲಿಗರು ಭಾಗವಹಿಸಿದ್ದರು.

ಜೆಡಿಎಸ್, ಬಿಜೆಪಿಯಿಂದ ಯಾರೇ ಅಭ್ಯರ್ಥಿ ಹಾಕಿದರೂ ಕಾಂಗ್ರೆಸ್ ಗೆಲುವಿನ ಮೇಲೆ ಪರಿಣಾಮ ಬೀರುವುದಿಲ್ಲ. ಜಿಲ್ಲೆಯ ಹಿರಿಯ ನಾಯಕರ ಆಶೀರ್ವಾದ, ಸ್ಥಳೀಯ ಸಂಸ್ಥೆ ಚುನಾಯಿತ ಪ್ರತಿನಿಧಿಗಳ ಬೆಂಬಲದಿಂದ ಮೇಲ್ಮನೆಗೆ ಆಯ್ಕೆಯಾಗುವ ವಿಶ್ವಾಸವಿದೆ.
 -ಆರ್.ರಾಜೇಂದ್ರ, ವಿಧಾನಪರಿಷತ್ ಸ್ಪರ್ಧಾ ಅಭ್ಯರ್ಥಿ

Discover more from Valmiki Mithra

Subscribe now to keep reading and get access to the full archive.

Continue reading