ಗಾಂಧಿ ಹೆಸರೇಳಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಹೊಂಚು ಹಾಕುತ್ತಿದ್ದೀರಿ. ಇನ್ನೆಷ್ಟು ತಲೆಮಾರಿಗೆ ಆಗುವಷ್ಟು ಲೂಟಿ ಹೊಡೆಯಬೇಕು ಮಿಸ್ಟರ್ ಸಿದ್ದರಾಮಯ್ಯ?

ಸ್ವಯಂಘೋಷಿತ ಸಂವಿಧಾನ ರಕ್ಷಕ ಸಿದ್ದರಾಮಯ್ಯ ಮತ್ತೆ Janata Dal Secular ಬಗ್ಗೆ ವಿಷ ಕಾರಿಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಎಂದರು.

ಜೆಡಿಎಸ್ ಪಕ್ಷ ಸ್ವಾತಂತ್ರ್ಯ ಹೋರಾಟಕ್ಕೆ ನೀಡಿದ ಕೊಡುಗೆ ಏನು ಎಂದು ಅವರು ಪ್ರಶ್ನಿಸಿದ್ದಾರೆ.ನಮ್ಮ ಪಕ್ಷದ್ದು ಇರಲಿ, ಸ್ವಾತಂತ್ರ್ಯ ಹೋರಾಟಕ್ಕೆ ಈ ಸೋಗಲಾಡಿ ಸಿದ್ದಸೂತ್ರದಾರನ ಕೊಡುಗೆ ಏನು?

ವಿಕಿಪೀಡಿಯಾ ಪ್ರಕಾರ ನಿಮ್ಮ ಜನ್ಮವರ್ಷ 1947. ಹುಟ್ಟಿದ ಕೂಡಲೇ ಪಂಚೆ ಕಟ್ಟಿ ಸ್ವಾತಂತ್ಯ ಸಂಗ್ರಾಮಕ್ಕೆ ಧುಮುಕಿದರಾ ಮಿಸ್ಟರ್ ಸಿದ್ದರಾಮಯ್ಯ?

ಜೆಡಿಎಸ್ ಸ್ಥಾಪನೆ ಆಗಿದ್ದೇ 1999ರಲ್ಲಿ. ಆಗ ನೀವು ಎಲ್ಲಿದ್ದೀರಿ? ನಿಮಗೂ ಕಾಂಗ್ರೆಸ್ ಪಕ್ಷಕ್ಕೂ ಏನು ಸಂಬಂಧ? ನೀವು ಕಾಂಗ್ರೆಸ್ ಸೇರಿದ್ದು 2006ರಲ್ಲಿ. ಹೀಗಾಗಿ ಆ ಪಕ್ಷದ ಪೂರ್ವಾಪರದ ಬಗ್ಗೆ ಮಾತನಾಡಲು ಏನು ನೈತಿಕತೆ ಇದೆ ನಿಮಗೆ?

ಗೆದ್ದಲು ಕಟ್ಟಿಕೊಂಡ ಹುತ್ತಕ್ಕೆ ಹಾವಿನಂತೆ ಸೇರಿಕೊಂಡ ನೀವು, ಸ್ವಾರ್ಥ ಬೀಜಾಸುರನಾಗಿ ಆ ಪಕ್ಷದ ಮೂಲ ನಾಯಕರನ್ನೆಲ್ಲ ನುಂಗುತ್ತಿರುವ ನಿಮ್ಮ ಭಕಾಸುರ ಬಾಯಲ್ಲಿ ಸ್ವಾತಂತ್ರ್ಯ ಹೋರಾಟದ ಪಾರಾಯಣವೇ? ನಿಮಗೆ ಅದು ಬೇರೆ ಕೇಡು.

ಅಧಿಕಾರಕ್ಕಾಗಿ ದೀನ ದಲಿತರು, ಅಲ್ಪಸಂಖ್ಯಾತರ ಹೆಸರು ಬಳಸಿಕೊಂಡು, ಹಾದಿಬೀದಿಯಲ್ಲಿ ಹೈಡ್ರಾಮಾ ಆಡಿ ಕಾಂಗ್ರೆಸ್ ಪಕ್ಷಕ್ಕೆ ವಕ್ಕರಿಸಿಕೊಂಡ ನಿಮಗೆ, ಸ್ವಾತಂತ್ರ್ಯ ಹೋರಾಟದ ಬಗ್ಗೆ ಮಾತನಾಡುವ ನೈತಿಕ ಹಕ್ಕಿದೆಯಾ? ಖಂಡಿತಾ ಇಲ್ಲ.

ನೀವು ಹೇಳಿದ ಕಾಂಗ್ರೆಸ್ ಈಗೆಲ್ಲಿದೆ? ನೀವು ಕದ್ದಮಾಲು ಹ್ಯೂಬ್ಲೆಟ್ ವಾಚು ಕಟ್ಟಿದಾಗಲೇ 1947ರ ಕಾಂಗ್ರೆಸ್ ಗೆ ಸಮಾಧಿ ಕಟ್ಟಿದಿರಿ. 5 ವರ್ಷಗಳ ನಿಮ್ಮ ಆಡಳಿತದಲ್ಲಿ ಆ ನತದೃಷ್ಟ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಸಾವಿನ ಮೊಳೆ ಹೊಡೆದಿರಿ, ಲೆಕ್ಕ ಹೇಳಬೇಕೆ ಮಿಸ್ಟರ್ ಸಿದ್ದರಾಮಯ್ಯ?

ಮಹಾತ್ಮ ಗಾಂಧಿ ಅವರ ಕಾಂಗ್ರೆಸ್ ಪಕ್ಷವನ್ನು ನೀವೆಲ್ಲಾ ಸೇರಿ ಎಂದೋ ಮುಗಿಸಿದಿರಿ. ಅದಕ್ಕೆ ಸಮಾಧಿಯೂ ಕಟ್ಟಿ ತಿಥಿ ಊಟವನ್ನೂ ಮಾಡಿದ್ದೀರಿ. ಮಾಜಿ ಸ್ಪೀಕರ್ ರಮೇಶ್ ಕುಮಾರ್ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹೇಳಿದ ತಲೆ ತಲೆಮಾರುಗಳ ಲೂಟಿ ಕಾಂಗ್ರೆಸ್ ಮಾತ್ರವಷ್ಟೇ ಈಗ ಉಳಿದಿರುವುದು.

ಗಾಂಧಿ ಹೆಸರೇಳಿಕೊಂಡು ಮತ್ತೆ ಅಧಿಕಾರಕ್ಕೆ ಬರಲು ಹೊಂಚು ಹಾಕುತ್ತಿದ್ದೀರಿ. ಇನ್ನೆಷ್ಟು ತಲೆಮಾರಿಗೆ ಆಗುವಷ್ಟು ಲೂಟಿ ಹೊಡೆಯಬೇಕು ಮಿಸ್ಟರ್ ಸಿದ್ದರಾಮಯ್ಯ?
ಅಧಿಕಾರಕ್ಕಾಗಿ ಸ್ವಾತಂತ್ರ್ಯ ಹೋರಾಟದ ಜಪವೇ? ನೇರವಾಗಿ ಕುರ್ಚಿ ಜಪವನ್ನೇ ಮಾಡಬಹುದಲ್ಲವೇ?

ಅಂದು ದೇಶ ಉಳಿಸಿದ ಕಾಂಗ್ರೆಸ್ ಬೇರೆ, ಈಗ ದೇಶವನ್ನು ಲೂಟಿ ಹೊಡೆಯುತ್ತಿರುವ ಕಾಂಗ್ರೆಸ್ಸೇ ಬೇರೆ. ಲೂಟಿ ಹೊಡೆಯೋದೇ ದೇಶಪ್ರೇಮವಾ ಮಿಸ್ಟರ್ ಸಿದ್ದರಾಮಯ್ಯ? ನಿಮ್ಮ 5 ವರ್ಷದ ಆಡಳಿತದಲ್ಲಿ ನಿಮ್ಮ ಸುತ್ತಮುತ್ತಲಿನ ಪಟಾಲಂ ಹೊಡೆದ ಕೊಳ್ಳೆಯ ಲೆಕ್ಕ ಕೊಡಲೇ? ಅರ್ಕಾವತಿ ರೀಡು ಹಗರಣ ತೆಗೆದರೆ ಮುಖ ಎಲ್ಲಿಟ್ಟುಕೊಳ್ಳುತ್ತೀರಿ?

ಜೆಡಿಎಸ್ ಇನ್ನೊಂದು ಪಕ್ಷದ ಬಳಿ ಬೆಂಕಿ ಕಾಯಿಸಿಕೊಳ್ಳುವ ಪಕ್ಷ ಎನ್ನುತ್ತೀರಿ. ಆದರೆ, ನಿಮ್ಮನ್ನು ನಂಬಿದ್ದಕ್ಕೆ ನಮ್ಮ ಪಕ್ಷಕ್ಕೆ ನೀವೇ ಬೆಂಕಿ ಹಾಕಿದ್ದು ಮರೆತಿರಾ? ಬಿಜೆಪಿ ಜತೆ ಒಳಒಪ್ಪಂದ ಮಾಡಿಕೊಂಡು ಆಪ್ತರನ್ನೆಲ್ಲ ಮುಂಬಯಿಗೆ ಸಾಗಹಾಕಿದ ಕತ್ತಲ ಕಿತಾಪತಿ ಮಾಡಿದ್ದು ಯಾರು?

ಇಷ್ಟಕ್ಕೂ ತಾವೇನೂ ಮೂಲ ಕಾಂಗ್ರೆಸ್ಸಿಗರಲ್ಲ. ವಲಸೆ ಹೋಗಿ, ವಿಷಹುಳವಾಗಿ ಅಲ್ಲಿಗೆ ಕರೆದುಕೊಂಡು ಹೋದವರ ಕೈ ಕಚ್ಚಿದ್ದು, ಆಮೇಲೆ ನಿಮ್ಮಿಂದ ಆ ಪಕ್ಷ ಬಿಟ್ಟುಹೋದವರ ಪಟ್ಟಿ ಹನುಮನ ಬಾಲದಂತೆ ಬೆಳೆದದ್ದು ಗೊತ್ತಿಲ್ಲವೆ? ಆಶ್ರಯ ಕೊಟ್ಟ ಮನೆಯಲ್ಲೇ ಗಳ ಇರಿದವರು ಯಾರು?

ಹಿರಿಯರಾದ ಮಲ್ಲಿಕಾರ್ಜುನ ಖರ್ಗೆ ಅವರ ವಿರುದ್ಧ ನೀವು ನಡೆಸುತ್ತಿರುವ ಷಡ್ಯಂತ್ರ ಇನ್ನೂ ನಿಂತಿಲ್ಲ, ಇನ್ನೊಬ್ಬರನ್ನು ಸೈಡಿಗೆ ತಳ್ಳಿ ಆಗಲೇ ಸಿಎಂ ಕುರ್ಚಿ ಮೇಲೆ ಟವೆಲ್ ಹಾಕಿದ್ದೀರಲ್ಲ ಮಿಸ್ಟರ್ ಸಿದ್ದರಾಮಯ್ಯ? ಇದು ಸ್ವಾತಂತ್ರ್ಯ ಸಂಗ್ರಾಮವೋ ಅಥವಾ ಕರ್ಚಿಗಾಗಿ ಹೋರಾಟವೋ?

ನಿಮ್ಮಂತಹ ರಾಜಕೀಯ ಭಸ್ಮಾಸುರರು ಇರುವ ಕಾಂಗ್ರೆಸ್ ಪಕ್ಷದ ಹತ್ತಿರಕ್ಕೆ ಬಂದವರೆಲ್ಲ ಸುಟ್ಟು ಭಸ್ಮವಾಗಿದ್ದಾರೆ. ನಮ್ಮ ಪಕ್ಷ ಇರಲಿ, ಪಕ್ಕದ ಮಹಾರಾಷ್ಟ್ರದಲ್ಲಿ ಶಿವಸೇನೆ ಗತಿ ಏನಾಯಿತು? ಯುಪಿಎ-1 ಸರಕಾರಕ್ಕೆ ಬೆಂಬಲ ಕೊಟ್ಟ ತಪ್ಪಿಗೆ 65 ಕ್ಷೇತ್ರ ಗೆದ್ದಿದ್ದ ಕಮ್ಯುನಿಸ್ಟರು ಈಗೆಲ್ಲಿದ್ದಾರೆ? ನಿಮ್ಮ ಸಹವಾಸ ಮಾಡಿದವರಿಗೆಲ್ಲ ಇದೇ ಗತಿ!

ಅಧಿಕಾರದ ದುರಾಸೆಗೆ ಅನ್ಯಪಕ್ಷಗಳನ್ನು ನಂಬಿಸಿ ಕತ್ತು ಕುಯ್ಯವ ಕಾಂಗ್ರೆಸ್ ಪಕ್ಷ ಎಸಗಿದ ಪಾಪಕ್ಕೆ ಈಗ ಫಲ ಉಣ್ಣುತ್ತಿದೆ. ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಗಲಾಡಿ ಸಿದ್ದರಾಮಾಯಣ ಶುರುವಾಗಿದೆ. ಈ ಸೋಗಲಾಡಿ ಸಿದ್ದಯ್ಯನ ಅಸಲಿಯೆತ್ತು ಏನು ಎಂಬುದು ಜನರಿಗೆ ಚೆನ್ನಾಗಿ ಗೊತ್ತಿದೆ ಎಂದರು.

Discover more from Valmiki Mithra

Subscribe now to keep reading and get access to the full archive.

Continue reading