ಬೆಂಗಳೂರು : ಪರಿಶಿಷ್ಟ ಪಂಗಡಗಳ ಪ್ರಮಾಣ ಪತ್ರದಲ್ಲಿ ವಾಲ್ಮೀಕಿ, ಬೇಡ, ನಾಯಕ ಎಂಬ ಮೂಲ ಪದಗಳನ್ನು ಕೈ ಬಿಟ್ಟು ನಾಯಕ ತಳವಾರ ಮತ್ತು ಪರಿವಾರ ಎಂದಷ್ಟೇ ದಾಖಲು ಮಾಡುತ್ತಿರುವುದನ್ನು ಖಂಡಿಸಿ ಕರ್ನಾಟಕ ನಾಯಕರ ಒಕ್ಕೂಟವು ಅಧಿಕಾರಿಗಳಿಗೆ ಮನವಿ ಸಲ್ಲಿಸಿತು.
ಜಾತಿ ಪ್ರಮಾಣ ಪತ್ರಗಳಲ್ಲಿ ನಾಯಕ, ವಾಲ್ಮೀಕಿ, ಬೇಡ ಪದಗಳನ್ನು ಸರ್ಕಾರ ಕೈ ಬಿಟ್ಟಿರುವುದು ಸರಿಯಲ್ಲ. ಇಡೀ ಪರಿಶಿಷ್ಟ ಪಂಗಡಗಳ ಸಮುದಾಯ ಶೇ.7.5 ಮೀಸಲಾತಿಗಾಗಿ ಒಂದು ಕಡೆ ಹೋರಾಟ ನಡೆಸುತ್ತಿದೆ. ಆದರೆ ಮತ್ತೊಂದು ಕಡೆ ನಮ್ಮದೇ ಸಮುದಾಯದ ಕೆಲವು ಮುಂದಾಳುಗಳ ಯಡವಟ್ಟು ಕೆಲಸದಿಂದ ತಳವಾರ ಪರಿವಾರ ಪದಗಳನ್ನು ನಾಯಕ ಸಮುದಾಯದ ತಳವಾರ ಪರಿವಾರ ಮಾತ್ರ ಎಂದು ಬೇರ್ಪಡಿಸಿ ಸೇರಿಸದೆ ಏಕಾಎಕಿ ಸೇರಿಸಿದ್ದರಿಂದ ದೊಡ್ಡ ಅವಾಂತ ಸೃಷ್ಟಿಯಾಗಿದೆ ಎಂದು ಶಾಸಕ ರಾಜಾ ವೆಂಕಟಪ್ಪ ನಾಯಕ ಹಾಗೂ ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು ಜೂ.29 ರಂದು ವಿಧಾನ ಸೌಧದಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ನಿರ್ದೇಶಕ ಕಾಂತರಾಜ್ ಅವರನ್ನು ಭೇಟಿ ಮಾಡಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಜಾತಿ ಪ್ರಮಾಣ ಪತ್ರದಲ್ಲಿ ವಿದ್ಯಾರ್ಥಿಗಳಿಗೆ, ಉದ್ಯೋಗ ಆಕಾಂಕ್ಷಿಗಳಿಗೆ ತೀವ್ರ ಸಮಸ್ಯೆ ಆಗುತ್ತಿರುವ ಬಗ್ಹೆ ನಿರ್ದೇಶಕ ಕಾಂತರಾಜ್ ಅವರಿಗೆ ಜಾತಿ ಪ್ರಮಾಣ ಪತ್ರಗಳನ್ನು ತೋರಿಸಿ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ಸವಿವರವಾಗಿ ವಿವರಿಸಿದರು. ಇದರಿಂದ ಆಗುವ ಸಮಸ್ಯೆಗಳನ್ನು ಒಪ್ಪಿಕೊಂಡ ಕಾಂತರಾಜ್ ಅವರು ಲಿಖಿತವಾಗಿ ಮನವಿ ನೀಡಲು ಸೂಚಿಸಿದರು.
ಕರ್ನಾಟಕ ನಾಯಕರ ಒಕ್ಕೂಟದ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು, ಆಡಿಟರ್ ರೇಣುಕಾರಾಜ್, ಯುವ ಮುಖಂಡರಾದ ರವಿಚಂದ್ರ, ಸುಜಾತಾ, ವೀರೇಶ್, ಶಿವಕುಮಾರ ಪೂಜಾರ, ಕುಮಾರ್ ಚಂದ್ರಶೇಖರ್ ಹಾಗೂ ಮತ್ತಿತರರು ಚರ್ಚೆ ನಡೆಸಿ ಇಂದು ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ನಿರ್ದೇಶಕರ ಕಚೇರಿಗೆ ನಿಯೋಗ ತೆರಳಿ ಇಂದು ನಿರ್ದೇಶಕ ಕಾಂತರಾಜ್ ಅನುಪಸ್ಥಿತಿಯಲ್ಲಿ ಉಪ ನಿರ್ದೇಶಕ ರಾಜ್ ಕುಮಾರ್ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಜಾತಿ ಪ್ರಮಾಣ ಪತ್ರಗಳಲ್ಲಿ ಆಗುತ್ತಿರುವ ದೋಷಗಳನ್ನು ತಕ್ಷಣ ಸರಿಪಡಿಸಬೇಕು. ಅದಕ್ಕೆ ಕೂಡಲೇ ನಿರ್ದೇಶನಾಲಯದಿಂದ ಕಾರ್ಯದರ್ಶಿಗಳಿಗೆ ನೋಟ್ ಸಿದ್ಧಪಡಿಸಿ ಕಳುಹಿಸಲು ನಿಯೋಗ ಆಗ್ರಹಿಸಿತು. ಈ ವೇಳೆ ಈ ನಾಯಕ, ವಾಲ್ಮೀಕಿ, ಬೇಡ ಪದಗಳನ್ನು ಕೈ ಬಿಟ್ಟಿದ್ದರಿಂದ ಸಮಸ್ಯೆ ಸೃಷ್ಟಿಯಾಗಿರುವುದು ನಿಜ. ತಕ್ಷಣ ಈ ಬಗ್ಗೆ ಇಲಾಖೆ ಕಾರ್ಯದರ್ಶಿಗಳ ಗಮನಕ್ಕೆ ತರುವುದಾಗಿ ಉಪನಿರ್ದೇಶಕ ರಾಜ್ ಕುಮಾರ್ ಭರವಸೆ ನೀಡಿದರು.