ಬೆಂಗಳೂರು: ರಾಜ್ಯ ಪರವಿ ಪೂರ್ಣ ಶಿಕ್ಷಣ ಇಲಾಖೆ ನಡೆಸಿರುವ ಪ್ರಸಕ್ತ 2022ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಪ್ರಕಟಗೊಂಡಿದೆ. ಈ ಬಾರಿ ಶೇಕಡಾ 61.88ರಷ್ಟು ಫಲಿತಾಂಶ ಬಂದಿದೆ.
ಬೆಂಗಳೂರಿನಲ್ಲಿಂದು ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಸಚಿವ ಬಿ ಸಿ ನಾಗೇಶ್ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿದರು. ಈ ವರ್ಷ ಒಟ್ಟು 6,83,563 ಮಂದಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು ಅವರಲ್ಲಿ 4,22,966 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಗ್ರಾಮಾಂತರ ಭಾಗದಲ್ಲಿ ಶೇಕಡಾ 62.18 ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದರೆ, ನಗರ ಪ್ರದೇಶದಲ್ಲಿ ಶೇಕಡಾ 61.78 ವಿದ್ಯಾರ್ಥಿಗಳು ಪಾಸಾಗಿದ್ದಾರೆ.ಪೂರಕ ಪರೀಕ್ಷೆ ದಿನಾಂಕ ಈ ತಿಂಗಳಾಂತ್ಯಕ್ಕೆ ಪ್ರಕಟಿಸಲಾಗುತ್ತದೆ.
ಕಲಾ ವಿಭಾಗದಲ್ಲಿ 2,28,167 ಮಂದಿ, ವಾಣಿಜ್ಯ ವಿಭಾಗದಲ್ಲಿ 2,45,519 ಮಂದಿ ಮತ್ತು ವಿಜ್ಞಾನ ವಿಭಾಗದಲ್ಲಿ 2,10,569 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಶೇ.72.53 ವಿಜ್ಞಾನ ವಿದ್ಯಾರ್ಥಿಗಳು, ಶೇ.64.97 ವಾಣಿಜ್ಯ, ಶೇ.48.71 ಕಲಾ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.