ಬೆಂಗಳೂರು: ಹಲವಾರು ಬಾರಿ ಬಿ.ವೈ.ವಿಜಯೇಂದ್ರಗೆ ಟಿಕೆಟ್ ಫೈನಲ್ ಎಂಬ ಹಂತಕ್ಕೆ ಬಂದು ದೆಹಲಿ ನಾಯಕರಿಗೆ ಹೆಸರು ಕಳಿಸಿದ್ದರೂ ಸಹ ಹಲವಾರು ಕಾರಣಗಳಿಂದಾಗಿ ಅಂತಿಮ ಹಂತದಲ್ಲಿ ಅಚ್ಚರಿ ಹೆಸರುಗಳನ್ನು ಆಯ್ಕೆ ಮಾಡುವ ಮೂಲಕ ರಾಜ್ಯ ನಾಯಕರ ಮಾತಿಗೆ ಯಾವುದೇ ಮಹತ್ವ ನೀಡದೆ ಹೈಕಮಾಂಡ್ ನಿರ್ಧಾರ ತೆಗೆದುಕೊಳ್ಳುತ್ತಿತ್ತು.
ಕಾಣದ ಕೈಗಳು ದೆಹಲಿಯಲ್ಲಿ ಕೆಲಸ ಮಾಡಿದರೂ ಸಹ ಕರ್ನಾಟಕದಲ್ಲಿ ಬಿ. ಎಸ್. ಯಡಿಯೂರಪ್ಪ ಪ್ರಶ್ನಾತೀತಾ ನಾಯಕ ಎಂಬುದು ಬಿಜೆಪಿ ಹೈಕಮಾಂಡ್ ಗೆ ಅರಿವಾಗಿದ್ದಂತೆ ಕಾಣುತ್ತಿದೆ, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೂ ವಿಜಯೇಂದ್ರ ಹೆಸರು ಕಳುಹಿಸಲಾಗಿತ್ತು.
ಆದರೆ ವಿಜಯೇಂದ್ರ ಹಿಂಬಾಗಿಲಿನಿಂದ ರಾಜಕೀಯಕ್ಕೆ ಬರದೇ ನೇರವಾಗಿ ವಿಧಾನಸಭೆಯ ಮೂಲಕ ಪ್ರವೇಶಿಸಲಿ ಎಂಬುದು ಹೈಕಮಾಂಡ್ ನಿರ್ಧಾರ ಎಂದು ಬಿ. ಎಸ್. ಯಡಿಯೂರಪ್ಪನವರಿಗೂ ತಿಳಿಸಲಾಗಿದ್ದು ಅವರೂ ಸಹ ಈಗ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದಾರೆ.
ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ. ವೈ. ವಿಜಯೇಂದ್ರ ಸ್ಪರ್ಧೆ ಮಾಡುವುದು ಖಚಿತ, ಆದರೆ ಕ್ಷೇತ್ರ ಇನ್ನೂ ನಿರ್ಧಾರವಾಗಿಲ್ಲ ಎಂದ ಅವರು, ಯಾರಿಗೆ ಯಾವ ಜವಾಬ್ದಾರಿ ಕೊಡಬೇಕು ಎನ್ನುವುದನ್ನ ಪಕ್ಷ ತೀರ್ಮಾನ ಮಾಡುತ್ತದೆ ಎಂದು ತಿಳಿಸಿದರು.
ರಾಜ್ಯದ ಉದ್ದಗಲಕ್ಕೂ ಪ್ರವಾಸ ಪ್ರಾರಂಭವಾಗಿದೆ. ಮುಂಬರುವ ಚುನಾವಣೆಯಲ್ಲಿ 140 ಕ್ಷೇತ್ರಗಳನ್ನ ಗೆದ್ದು ಮತ್ತೆ ಬಿಜೆಪಿ ಅಧಿಕಾರಕ್ಕೆ ತರಬೇಕೆಂಬುದು ನಮ್ಮ ಗುರಿ. ವಾರಕ್ಕೆ ಒಂದೊಂದು ಜಿಲ್ಲೆಗೆ ತೆರಳಿ ಕಾರ್ಯಕರ್ತರ ಜೊತೆಗೆ ಸಮಾಲೋಚನೆ ಮಾಡುತ್ತೇವೆ ಎಂದರು.
ಬೇರೆ ಪಕ್ಷಗಳ ಅನೇಕ ಜನ ಬಿಜೆಪಿಗೆ ಬರಲು ತುದಿಗಾಲಲ್ಲಿ ನಿಂತಿದ್ದಾರೆ, ಯಾರು ಬರುವುದರಿಂದ ನಮ್ಮ ಪಕ್ಷಕ್ಕೆ ಅನುಕೂಲವಾಗುತ್ತೋ ಅವರನ್ನು ಸೇರಿಸಿಕೊಂಡು ಪಕ್ಷವನ್ನು ಸಂಘಟಿಸಿ ಬಲಪಡಿಸುತ್ತೇವೆ ಎಂದು ಹೇಳಿದರು.
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿಚಾರವಾಗಿ ಮಾತನಾಡಿದ ಅವರು ಇಡಿಯವರಿಗೆ ಯಾರ ಮೇಲೆ ಅನುಮಾನ ಇರುತ್ತದೋ ಅವರನ್ನ ತನಿಖೆ ಮಾಡುತ್ತಾರೆ, ತನಿಖೆ ಬಳಿಕ ಸತ್ಯ ಹೊರ ಬರಲಿದೆ, ನಿರಪರಾಧಿಯಾಗಿದ್ದರೆ ಯಾವುದೇ ಗೊಂದಲವಿಲ್ಲದೆ ಹೊರಗೆ ಬರುತ್ತಾರೆ, ಆರೋಪ ಸಾಬೀತಾದರೆ ಶಿಕ್ಷೆಯಾಗುತ್ತದೆ ಕಾನೂನಿನ ಮುಂದೆ ಎಲ್ಲರೂ ಸಮಾನರು ಎಂದು ತಿಳಿಸಿದರು.