ನವದೆಹಲಿ: ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ನಡೆಯುತ್ತಿರುವ ಸಮಾನ ಮನಸ್ಕ ಪಕ್ಷಗಳ ಸಭೆಯಲ್ಲಿ ರಾಷ್ಟ್ರಪತಿ ಅಭ್ಯರ್ಥಿಗೆ ದೇವೇಗೌಡರ ಹೆಸರು ಬಲವಾಗಿ ಕೇಳಿಬಂದಿದೆ.
ದೆಹಲಿಯಲ್ಲಿ ನಡೆಯುತ್ತಿರುವ ಸಭೆಯಲ್ಲಿ ಕಾಂಗ್ರೆಸ್ ಸೇರಿ ಸುಮಾರು ಹದಿನಾರು ಪಕ್ಷಗಳ ಮುಖಂಡರು ಭಾಗಿಯಾಗಿದ್ದಾರೆ. ಇದರಲ್ಲಿ ಎಲ್ಲರೂ ದೇವೇಗೌಡರ ಹೆಸರು ಪ್ರಸ್ತಾಪಿಸಿದ್ದಾರೆ. ಹೀಗಾಗಿ, ಬಿಜೆಪಿಗೆ ವಿರುದ್ಧವಾಗಿ ದೇವೇಗೌಡರು ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವ ಸಾಧ್ಯತೆ ಕಂಡುಬರುತ್ತಿದೆ.
ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಹೆಸರು ರಾಷ್ಟ್ರಪತಿ ಹುದ್ದೆಗೆ ಕೇಳಿಬಂದಿತ್ತು. ಆದ್ರೆ ನನಗೆ ಆ ಬಗ್ಗೆ ಆಸಕ್ತಿ ಇಲ್ಲ ಎಂದು ಶರದ್ ಪವಾರ್ ಹೇಳಿದ್ದಾರೆ. ಹೀಗಾಗಿ, ಬೇರೆ ಯಾರಿದ್ದಾರೆ ಎಂದು ನೋಡಿದಾಗ, ಎಲ್ಲರಿಗೂ ಕಾಣಿಸಿದ್ದು ದೇವೇಗೌಡರು ಮಾತ್ರ. ದೇವೇಗೌಡರನ್ನೇ ಅಭ್ಯರ್ಥಿ ಮಾಡುವ ಕುರಿತು ಸಭೆಯಲ್ಲಿ ಗಂಭೀರ ಚರ್ಚೆ ನಡೆಯುತ್ತಿದೆ.
ಇನ್ನು ಸಭೆಯಲ್ಲಿ ಮಮತಾ ಬ್ಯಾನರ್ಜಿ, ಶರದ್ ಪವಾರ್, ಒಮರ್ ಅಬ್ದುಲ್ಲಾ, ಮಹಬೂಬಾ ಮುಫ್ತಿ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದಾರೆ. ಸಭೆಗೂ ಮುನ್ನೆ ದೇವೇಗೌಡರು ಹಾಗೂ ಶರದ್ ಪವಾರ್ ಭೇಟಿ ಮಾಡಿ ಚರ್ಚೆ ನಡೆಸಿದ್ದರು. ಇನ್ನು ಸಭೆಯಲ್ಲಿ ದೇವೇಗೌಡರು, ಕುಮಾರಸ್ವಾಮಿ ಭಾಗವಹಿಸಿದ್ದಾರೆ. ಕಾಂಗ್ರೆಸ್ ಪರವಾಗಿ ಜೈರಾಮ್ ರಮೇಶ್, ಖರ್ಗೆ, ಸುರ್ಜೇವಾಲಾ ಪಾಲ್ಗೊಂಡಿದ್ದಾರೆ.
ಸಭೆಗೆ ಎಎಪಿ ಹಾಗೂ ತೆಲಂಗಾಣ ರಾಷ್ಟ್ರ ಸಮಿತಿ ಪ್ರತಿನಿಧಿಗಳು ಗೈರು ಹಾಜರಾಗಿದ್ದಾರೆ.