ಸಿನಿಮಾರಂಗದಲ್ಲಿ ತಮ್ಮದೇ ಆದಂತಹ ಛಾಪು ಮೂಡಿಸಿ ನೆಲೆ ಕಂಡುಕೊಂಡಿರುವ ಬಹುಬೇಡಿಕೆ ನಟ ಡಾಲಿ ಧನಂಜಯ್ ಅವರು ಶೀಘ್ರದಲ್ಲೇ ರಾಜಕೀಯ ಅಖಾಡಕ್ಕೆ ಧುಮುಕಲಿದ್ದಾರೆ ಅನ್ನೋ ಸುದ್ದಿ ಹರಿದಾಡುತ್ತಿದೆ. ಈಗಾಗಲೇ ಕನ್ನಡ ಮಾತ್ರವಲ್ಲದೇ ಬಹುಭಾಷೆಗಳಲ್ಲಿ ತಮ್ಮ ನಟನಾ ಕೌಶಲ್ಯದ ಮೂಲಕ ಅಪಾರ ಅಭಿಮಾನಿ ಬಳಗವನ್ನು ಸೃಷ್ಟಿ ಮಾಡಿಕೊಂಡಿರುವ ನಟ ಧನಂಜಯ್ ರಾಜಕೀಯದಲ್ಲೂ ಗೆದ್ದು ಜನ ಸೇವೆ ಮಾಡಲು ಮನಸ್ಸು ಮಾಡಿದ್ದಾರೆ ಎನ್ನಲಾಗ್ತಿದೆ.
ಇದ್ದಕ್ಕಿದ್ದಂತೆ ಡಾಲಿ ಧನಂಜಯ್ ಅವರು ರಾಜಕೀಯಕ್ಕೆ ಬರುತ್ತಿರೋದೇಕೆ..? ಯಾವ ಪಕ್ಷ ನಟ ಧನಂಜಯ್ ಅವರಿಗೆ ಎಲೆಕ್ಷನ್ ಟಿಕೆಟ್ ಕೊಡ್ತಿದೆ ಅನ್ನೋ ಪ್ರಶ್ನೆಗೆ ಉತ್ತರ.., ಮೂಲಗಳ ಮಾಹಿತಿ ಪ್ರಕಾರ ಜೆಡಿಎಸ್ ಪಕ್ಷಕ್ಕೆ ನಟ ಧನಂಜಯ್ ಸೇರಲಿದ್ದಾರೆ ಎನ್ನಲಾಗ್ತಿದೆ.. ಇನ್ನು ಯಾವ ಕ್ಷೇತ್ರದಿಂದ ಧನಂಜಯ್ ರಾಜಕೀಯಕ್ಕೆ ಪದಗ್ರಹಣ ಮಾಡಲಿದ್ದಾರೆ ಅನ್ನೋ ಪ್ರಶ್ನೆಗೆ ಉತ್ತರ ಅರಸೀಕೆರೆ ಕ್ಷೇತ್ರ ಎನ್ನಲಾಗ್ತಿದೆ.. ಈ ದಿಢೀರ್ ಬೆಳವಣಿಗೆಗೂ ಕಾರಣವಿದೆ..
ಅರಸೀಕೆರೆ ಕ್ಷೇತ್ರದ ಎಂಎಲ್‌ಎ ಆಗಿರುವ ಶಿವಲಿಂಗೇಗೌಡರಿಗೂ ಜೆಡಿಎಸ್ ಪಕ್ಷದ ವರಿಷ್ಠರಾದ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ನಡುವೆ ಇರುವ ಮನಸ್ತಾಪ.. ಕೆಲ ಮನಸ್ತಾಪಗಳಿಂದಾಗಿ ಶಿವಲಿಂಗೇಗೌಡರು ಜೆಡಿಎಸ್ ಪಕ್ಷವನ್ನು ಶೀಘ್ರದಲ್ಲೇ ಬಿಡಲಿದ್ದಾರೆ ಅನ್ನೋ ಸುದ್ದಿ ರಾಜಕೀಯ ಪಡಸಾಲೆಯಲ್ಲಿ ಸದ್ದು ಮಾಡುತ್ತಿದೆ..
ಈಗಾಗಲೇ ಶಿವಲಿಂಗೇಗೌಡರ ವಿರುದ್ಧ ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಮಾಜಿ ಸಿಎಂ ಕುಮಾರಸ್ವಾಮಿ ಅವರು ಬಹಿರಂಗವಾಗಿಯೇ ಅಸಮಾಧಾನ ಹೊರಹಾಕಿದ್ದಾರೆ. ಹಾಸನದಲ್ಲಿ ಮಾತಾಡಿದ ಮಾಜಿ ಸಿಎಂ ಕುಮಾರಸ್ವಾಮಿ ಅವರು, ಶಿವಲಿಂಗೇಗೌಡ ತೆಂಗಿನ ಮರದ ಕೆಳಗೆ ಧರಣಿ ಕೂತಿದ್ದರು. ಅಂದು ದೇವೇಗೌಡರು ಮೋದಿ ಹತ್ತಿರ ಶಿವಲಿಂಗೇಗೌಡರನ್ನು ಕರೆದುಕೊಂಡು ಹೋಗಿದ್ದರು.
ನಮ್ಮ ಸರ್ಕಾರ ಬಂದ ನಂತರ ನಾನು 500 ಕೋಟಿ ರೂಪಾಯಿ ಹಣ ಕೊಟ್ಟೆ. ಗೆದ್ದ ಮೇಲೆ ಸಿದ್ದರಾಮಯ್ಯರಿಂದ ನಾನು ಗೆದ್ದೆ ಎಂದರು. ಚನ್ನರಾಯಪಟ್ಟಣಕ್ಕೆ ಕಾಲೇಜು ಕೊಡಬೇಕು ಎಂದು ಬಾಲಕೃಷ್ಣ ಕೇಳಿದ್ದರು. ಆದರೆ ನಾನು ಅರಸೀಕೆರೆ ತಾಲ್ಲೂಕು ಹಿಂದುಳಿದಿದೆ ಎಂದು ಕಾಲೇಜು ಕೊಟ್ಟೆ ಅದ್ಯಾವುದೂ ಅವರಿಗೆ ನೆನಪಿಲ್ಲ ಅಂತಾ ಶಿವಲಿಂಗೇಗೌಡ ವಿರುದ್ಧ ಅಸಮಾಧಾನ ಹೊರ ಹಾಕಿದ್ದಾರೆ.
ಈ ಸಮಯದಲ್ಲೇ ಕುಮಾರಸ್ವಾಮಿ ಭಾಷಣದ ನಡುವೆ ದೇವೇಗೌಡರು ಮಧ್ಯೆ ಪ್ರವೇಶಿಸಿ, ಶಿವಲಿಂಗೇಗೌಡ ತೆಂಗಿನ ಮರದ ಕೆಳಗೆ ಕುಳಿತುಕೊಳ್ಳುವ ನಾಟಕ ಆಡಿದರು. ನಾನು ಮೂರು ದಿನ ತೆಂಗಿನ ಮರದ ಕೆಳಗೆ ಕುಳಿತುಕೊಳ್ಳುತ್ತೇನೆ. ಆಗ ನೀವು ಬನ್ನಿ ಎಂದಿದ್ದರು. ಜಿಲ್ಲೆಯಲ್ಲಿ ಮತ್ತೊಬ್ಬ ನಾಟಕಕಾರ ಹುಟ್ಟಿದ್ದಾರೆ ಎಂದು ಶಿವಲಿಂಗೇಗೌಡ ವಿರುದ್ಧ ದೇವೇಗೌಡರು ವ್ಯಂಗ್ಯ ಮಾಡಿದ್ದಾರೆ.
ಈ ಎಲ್ಲಾ ಕಾರಣಗಳಿಂದಾಗಿ ಶಿವಲಿಂಗೇಗೌಡರು ಶೀಘ್ರದಲ್ಲೇ ಜೆಡಿಎಸ್ ಬಿಡಲಿದ್ದಾರೆ ಎನ್ನಲಾಗ್ತಿದೆ.. ಹಾಗಾಗಿ ಅರಸೀಕೆರೆ ಕ್ಷೇತ್ರದಿಂದ ನಟ ಡಾಲಿ ಧನಂಜಯ್ ಅವರನ್ನು ಕಣಕ್ಕಿಳಿಸಲು ದಳಪತಿಗಳು ನಿರ್ಧಾರ ಮಾಡಿದ್ದಾರೆ ಎನ್ನಲಾಗ್ತಿದೆ.
ಈಗಾಗಲೇ ತಮ್ಮ ನಟನೆಯಿಂದ ಹೆಸರುವಾಸಿಯಾಗಿರುವ ಡಾಲಿ ಧನಂಜಯ್ ಅವರು ಜೆಡಿಎಸ್ ಪಕ್ಷದಿಂದ ರಾಜಕೀಯ ಅಖಾಡಕ್ಕಿಳಿದು ಜನ ಸೇವೆ ಮಾಡುವುದು ಬಹುತೇಕ ಖಚಿತ ಅನ್ನೋ ಮಾಹಿತಿಯಿದೆ.. ಈ ಬಗ್ಗೆ ಮಾತುಕತೆಯೂ ನಡೆದಿದ್ದು ಅಧಿಕೃತ ಘೋಷಣೆಯೊಂದೇ ಬಾಕಿ ಅನ್ನೋ ಸುದ್ದಿಯೂ ಹರಿದಾಡುತ್ತಿದೆ.