Notice: Function _load_textdomain_just_in_time was called incorrectly. Translation loading for the colornews domain was triggered too early. This is usually an indicator for some code in the plugin or theme running too early. Translations should be loaded at the init action or later. Please see Debugging in WordPress for more information. (This message was added in version 6.7.0.) in /home/jegprscn/public_html/wp-includes/functions.php on line 6121

Warning: Cannot modify header information - headers already sent by (output started at /home/jegprscn/public_html/wp-includes/functions.php:6121) in /home/jegprscn/public_html/wp-content/plugins/post-views-counter/includes/class-counter.php on line 913
ಕರ್ನಾಟಕ ಎಲೆಕ್ಷನ್ @ 2023 : ಅಪಪ್ರಚಾರವೇ ರಾಜಕೀಯ ಪಕ್ಷಗಳಿಗೆ ಪ್ರಚಾರದ ಸರಕು…! - Valmiki Mithra

ಕರ್ನಾಟಕ ಎಲೆಕ್ಷನ್ @ 2023 : ಅಪಪ್ರಚಾರವೇ ರಾಜಕೀಯ ಪಕ್ಷಗಳಿಗೆ ಪ್ರಚಾರದ ಸರಕು…!

ಕರ್ನಾಟಕದಲ್ಲಿ ಮುಂದಿನ ವರ್ಷ ಏಪ್ರಿಲ್ ತಿಂಗಳಲ್ಲಿ ೧೬ನೇ ವಿಧಾನಸಭೆ ರಚನೆಯಾಗಲಿದೆ. ಈ ಚುನಾವಣೆ, ಒಂದೇ ಪಕ್ಷದ ಸರ್ಕಾರ ಅಥವಾ ಮೈತ್ರಿ ಸರ್ಕಾರ ರಚನೆಗೆ ದಾರಿಯಾಗಬಹುದು. ಆದರೆ, ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳು ರಾಜ್ಯದಲ್ಲಿ ಮತದಾರರಿಂದ ಮತಗಳನ್ನು ಪಡೆಯಲು ನಕಾರಾತ್ಮಕ ಅಭಿಯಾನಗಳನ್ನು ಕೈಗೊಳ್ಳುವ ಸಂಭವವೇ ಹೆಚ್ಚು.

ಆಡಳಿತ ಪಕ್ಷ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿ(ಎಸ್) ಇತ್ತೀಚಿನ ಕೆಲವು ತಿಂಗಳುಗಳಿAದ ಸಕ್ರಿಯವಾಗಿವೆ. ಇದು ಅವುಗಳು ಏನೋ ಉತ್ತಮ ಕೆಲಸವನ್ನು ಮಾಡುತ್ತಿವೆ ಎನ್ನುವ ಕಾರಣದಿಂದಲ್ಲ, ಬದಲಿಗೆ ಅಪಪ್ರಚಾರದಲ್ಲಿ ತೊಡಗಿಸಿಕೊಂಡಿವೆ.
ಈ ಪಕ್ಷಗಳ ರಾಜಕೀಯ ವಿಶ್ಲೇಷಣೆಗಳು ಕೇವಲ ಭಾಷಾ ಚಾತುರ್ಯತೆಯಿಂದ ಕೂಡಿರುತ್ತವೆಯೇ ಹೊರತು ಬೇರೆ ಏನೂ ಅಲ್ಲ. ಬೇರೆ ರೀತಿ ಹೇಳುವುದಾದರೆ ಅವರು ಸುಧಾರಿಸುತ್ತಿಲ್ಲ. ಸಾರ್ವಜನಿಕವಾಗಿ ಮತ್ತೊಬ್ಬರ ಮೇಲೆ ಆಪಾದನೆ ಹೊರಿಸುವ ಮೊದಲು ತಮ್ಮ ಹಿಂದಿನ ಚಾರಿತ್ರ್ಯದ ಕುರಿತು ಒಮ್ಮೆ ಆಲೋಚಿಸಬೇಕು. ಅವರವರ ಪಕ್ಷಗಳು ನಡೆಸಿರುವಂತಹ ಹಗರಣಗಳನ್ನು ಮರೆಯಬಾರದು. ರಾಜಕೀಯ ಪಕ್ಷಗಳು ಯುವಜನರನ್ನು ಅವರ ರಾಜಕೀಯ ಹಕ್ಕುಗಳಿಂದ ದೂರಗೊಳಿಸುತ್ತಿವೆ.

ಆಡಳಿತಾರೂಢ ಬಿಜೆಪಿ ತನ್ನ ವಿವಿಧ ಉಪಕ್ರಮಗಳು, ಯೋಜನೆಗಳು, ಕ್ಯಾಬಿನೆಟ್ ನಿರ್ಧಾರಗಳು ಹಾಗೂ ಕೇಂದ್ರ ಸರ್ಕಾರ ಪ್ರಾಯೋಜಿತ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಲು ಸಾಮಾಜಿಕ ಮಾಧ್ಯಮವನ್ನು ಬಳಸಿಕೊಳ್ಳಲು ಆದ್ಯತೆ ನೀಡಿದೆ. ಇಲ್ಲವಾದಲ್ಲಿ, ಯಾವುದೇ ಸಮಯದಲ್ಲಾದರೂ ಕಾನೂನು ಸುವ್ಯವಸ್ಥೆ ಉಲ್ಲಂಘನೆ ಹಾಗೂ ಮಹತ್ತರವಾದ ಭ್ರಷ್ಟಾಚಾರ ಆರೋಪಗಳಿರುತ್ತವೆ, ಸಾರ್ವಜನಿಕರ ಮುಂದೆ ವಾಸ್ತವಾಂಶಗಳನ್ನು ಇಡುವ ಬದಲು ಯಾವಾಗಲೂ ಯಾವುದೋ ಒಂದು ವ್ಯಕ್ತಿ ಅಥವಾ ಒಂದು ವಿಷಯದ ವಿರುದ್ಧ ಆರೋಪಿಸುವುದನ್ನು ವಾಡಿಕೆ ಮಾಡಿಕೊಂಡಿದೆ. ಕಳೆದ ನಾಲ್ಕು ವರ್ಷಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ಹೆಚ್ಚಾಗಿ ಅವಲಂಬಿಸುವ ಬದಲಿಗೆ ಪಕ್ಷ ತನ್ನ ಸಾಧನೆಗಳ ಕುರಿತು ಹೆಚ್ಚು ಮಾತನಾಡಬೇಕಿತ್ತು.
೨೦೨೦ರಲ್ಲಿ ಬೆಂಗಳೂರಿನ ಪೂರ್ವ ಭಾಗದಲ್ಲಿ ಹಿಂಸಾಚಾರದ ಘಟನೆಗಳು ಸಂಭವಿಸಿದಾಗ, ಆಗಿನ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರು ಆ ಹಿಂಸಾಚಾರಕ್ಕೆ ಕಾಂಗ್ರೆಸ್‌ನ ಒಳ ಜಗಳ ಹಾಗೂ ಎಸ್‌ಡಿಪಿಐನ ಪಿತೂರಿಯೇ ಕಾರಣ ಎಂದರು. ಬಿಜೆಪಿಯ ಮತ್ತೋರ್ವ ನಾಯಕ ಸಿ.ಟಿ. ರವಿ, ಆ ಹಿಂಸಾಚಾರದ ಘಟನೆಗೆ, ಚಾಮರಾಜಪೇಟೆಯ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಅವರೇ ಕಾರಣ ಎಂದು ಆರೋಪಿಸಿದರು. ಈ ರೀತಿ ಆರೋಪಗಳನ್ನು ಮಾಡುವ ಬದಲಿಗೆ ಸರ್ಕಾರ ವಾಸ್ತವಾಂಶಗಳನ್ನು ಜನರ ಮುಂದಿಡಬಹುದಿತ್ತು. ಆದರೆ ಈಗಲೂ ಸಹ ಅದೇ ಪ್ರವೃತ್ತಿಯನ್ನು ಮುಂದುವರೆಸಿದೆ. ಬಿಜೆಪಿ ಶಿವಮೊಗ್ಗದಲ್ಲಿ ನಡೆದ ಹರ್ಷ ಕೊಲೆ ಪ್ರಕರಣ ಹಾಗೂ ಜೆಜೆ ನಗರದಲ್ಲಿ ನಡೆದ ಚಂದ್ರು ಕೊಲೆ ಪ್ರಕರಣಗಳಲ್ಲಿ ಅತಿಯಾಗಿ ಪ್ರತಿಕ್ರಿಯಿಸಿದೆ, ಆದರೆ ಇನ್ನೂ ಸಮಂಜಸವಾದ ರೀತಿಯಲ್ಲಿ ನಡೆದುಕೊಳ್ಳಬಹುದಿತ್ತು.
ಕಾಂಗ್ರೆಸ್ ಗೀಳು

ವಿಧಾನ ಸೌಧದ ಮೂರನೆ ಮಹಡಿಗೆ ಮರಳಲು ಕಾತುರವಾಗಿರುವ ಕಾಂಗ್ರೆಸ್ ಪಕ್ಷ, ಆಡಳಿತ ಪಕ್ಷದ ‘ವೈಫಲ್ಯ’ಗಳು ಹಾಗೂ ‘ಭ್ರಷ್ಟಾಚಾರ’ಗಳ ಕುರಿತು ಹೆಚ್ಚು ದೂರುಗಳನ್ನು ನೀಡುತ್ತಾ ಬಂದರೆ ಹೆಚ್ಚು ಮತಗಳನ್ನು ಗಳಿಸಬಹುದು ಎನ್ನುವ ಲೆಕ್ಕಾಚಾರದಲ್ಲಿರುವಂತಿದೆ. ಒಂದು ವೇಳೆ ಭ್ರಷ್ಟಾಚಾರವೇ ಅಳತೆಗೋಲಾದರೆ, ಕಾಂಗ್ರೆಸ್ ಸೇರಿದಂತೆ ಯಾವುದೇ ರಾಜಕೀಯ ಪಕ್ಷ ಈ ದೇಶದಲ್ಲಿ ಯಾವುದೇ ಚುನಾವಣೆಯಲ್ಲಿಯೂ ಗೆಲ್ಲಲು ಸಾಧ್ಯವಾಗುತ್ತಿರಲಿಲ್ಲ. ಎಸ್.ಎಂ. ಕೃಷ್ಣ ಆಡಳಿತಾವಧಿಯ ನಂತರ ಬೆಳಕಿಗೆ ಬಂದ ಬೃಹತ್ ಅಕ್ಕಿ ಮತ್ತು ಸ್ಟ್ಯಾಂಪ್ ಪೇಪರ್ ಹಗರಣಗಳ ನಂತರ ಕಾಂಗ್ರೆಸ್ ಪಕ್ಷ ಪುನಃ ರಾಜ್ಯದಲ್ಲಿ ಅಧಿಕಾರಕ್ಕೆ ಬರಲಿಲ್ಲವೇ?
೨೦೧೧ರಲ್ಲಿ ಭ್ರಷ್ಟಾಚಾರದ ಪ್ರಕರಣಗಳಲ್ಲಿ ಜೈಲು ಪಾಲಾದ ನಂತರ ಬಿಜೆಪಿಯ ಬಲಿಷ್ಠ ಅಭ್ಯರ್ಥಿ ಬಿ.ಎಸ್. ಯಡಿಯೂರಪ್ಪ ೨೧ ದಿನಗಳ ಕಾಲ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಆದರೆ ಕರ್ನಾಟಕ ೨೦೧೮ ಹಾಗೂ ೨೦೧೯ರಲ್ಲಿ ಪುನಃ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ನೋಡಿತು. ರಾಜ್ಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ೨೦೧೯ರಲ್ಲಿ ೫೦ ದಿನಗಳ ಕಾಲ ತಿಹಾರ್ ಜೈಲಿನಲ್ಲಿದ್ದರು. ಆದರೂ ಸಹ ಅವರು ಪಕ್ಷದ ಅಧ್ಯಕ್ಷರಾಗಿ, ಅವರ ಬೆಂಬಲಿಗರ ನಾಯಕರಾಗಿ ಮುಂದುವರೆದಿದ್ದಾರೆ.
ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಕೇವಲ ಭ್ರಷ್ಟಾಚಾರದ ಕುರಿತು ಮಾತನಾಡುವ ಬದಲು ಅವರ ಸಾಧನೆಗಳ ಬಗ್ಗೆ ಏಕೆ ಮಾತನಾಡುವುದಿಲ್ಲ? ಕಾಂಗ್ರೆಸ್ ಪಕ್ಷ, ಹಲವು ದೊಡ್ಡ ಮಟ್ಟದ ಹಗರಣಗಳಲ್ಲಿ ಸಿಲುಕಿಕೊಂಡರೂ ಸಹ ದಶಕಗಳವರೆಗೂ ಕರ್ನಾಟಕವನ್ನು ಆಳಿದೆ. ಒಂದು ವೇಳೆ ಕಾಂಗ್ರೆಸ್ ಪಕ್ಷ ತನ್ನ ಸಾಧನೆಗಳ ಕುರಿತು ಹೆಚ್ಚು ಮಾತನಾಡಲು ಆರಂಭಿಸಿದರೆ ಬಹುಶಃ ಅದು ಮತದಾರರಲ್ಲಿ ವಿಶ್ವಾಸವನ್ನು ಮೂಡಿಸಬಹುದು ಅನಿಸುತ್ತದೆ.

 

ಪಂಜಾಬ್‌ನಲ್ಲಿ ಆಮ್ ಆದ್ಮಿ ಪಕ್ಷದ ಸಕಾರಾತ್ಮಕ ನಡವಳಿಕೆಯೇ ಆ ಪಕ್ಷಕ್ಕೆ ಜಯವನ್ನು ತಂದುಕೊಟ್ಟಿತು. ದೆಹಲಿಯಲ್ಲಿ ಸಂಭವಿಸುತ್ತಿರುವ ಬದಲಾವಣೆಗಳ ಕುರಿತು ಹೆಚ್ಚು ಚರ್ಚಿಸುವುದು ಆಮ್ ಆದ್ಮಿ ಪಕ್ಷಕ್ಕೆ ಪಂಜಾಬ್‌ನಲ್ಲಿ ಹೆಚ್ಚು ಮತದಾರರನ್ನು ಆಕರ್ಷಿಸುವಲ್ಲಿ ನೆರವಾಯಿತು. ಉತ್ತರ ಪ್ರದೇಶದಲ್ಲಿ ನಡೆದ ೨೦೨೨ರ ವಿಧಾನಸಭಾ ಚುನಾವಣೆಗಳಲ್ಲಿ ಯೋಗಿ ಆದಿತ್ಯನಾಥ್ ಮುಂದಾಳತ್ವದ ಸರ್ಕಾರ ರಾಜ್ಯದಲ್ಲಿ ಕೋವಿಡ್-೧೯ ಸಾಂಕ್ರಾಮಿಕದ ಸಂದರ್ಭದಲ್ಲಿ ಯಾವ ರೀತಿ ಜನರ ಬೆಂಬಲಕ್ಕೆ ನಿಂತಿತ್ತು ಎನ್ನುವ ವಿಚಾರ, ಕಾನೂನು ಸುವ್ಯವಸ್ಥೆಯಲ್ಲಿ ಸುಧಾರಣೆ, ಜೊತೆಗೆ ತಕ್ಕ ಮಟ್ಟಿಗೆ ಮೂಲಭೂತಸೌಕರ್ಯ ಸುಧಾರಣೆಗಳ ವಿಚಾರಗಳ ಪ್ರಚಾರಕ್ಕೆ ಹೆಚ್ಚು ಒತ್ತನ್ನು ನೀಡಲಾಯಿತು. ನರೇಂದ್ರ ಮೋದಿ ಹಾಗೂ ಯೋಗಿ ಆದಿತ್ಯನಾಥ್ ಈ ಇಬ್ಬರ ಹೆಸರುಗಳನ್ನು ಉತ್ತರ ಪ್ರದೇಶದ ಅಭಿಯಾನದಲ್ಲಿ ಹೆಚ್ಚಾಗಿ ಬಳಸಿಕೊಳ್ಳಲಾಯಿತು. ಉತ್ತರ ಪ್ರದೇಶದ ಮುಖ್ಯಮಂತ್ರಿಯ ಕೆಲಸದ ಕುರಿತು ಮಾಧ್ಯಮಗಳಿಗೆ ತುಂಬಾ ಅಸಮಾಧಾನವಿತ್ತು. ಆದರೆ ಮತ್ತೊಂದೆಡೆ ಜನರು ಯೋಗಿ ಆದಿತ್ಯನಾಥ್ ಅವರಿಗೆ ಸಂಪೂರ್ಣ ಬೆಂಬಲ ನೀಡಿದರು, ಮತ್ತು ಸಮಾಜವಾದಿ ಪಕ್ಷವನ್ನು ದೂರವಿಟ್ಟರು. ಕಾಂಗ್ರೆಸ್ ಪಕ್ಷ ಸಂಭವನೀಯ ಪರ್ಯಾಯವೆಂದೂ ಸಹ ಅಲ್ಲಿನ ಜನ ಪರಿಗಣಿಸಲಿಲ್ಲ.
೨೦೨೧ರಲ್ಲಿ ಇನ್ನೂ ಕೋವಿಡ್ ಸಾಂಕ್ರಾಮಿಕ ಇರುವಾಗಲೇ ಕೇರಳದಲ್ಲಿ ಚುನಾವಣೆ ನಡೆದಾಗ ಎಲ್‌ಡಿಎಫ್ ತನ್ನ ಅಧಿಕಾರವನ್ನು ಉಳಿಸಿಕೊಂಡಿತು. ಸಾಂಕ್ರಾಮಿಕದ ಸಮಯದಲ್ಲಿ ಕೇರಳ ಸರ್ಕಾರ ಮಹತ್ತರವಾದ ಕಷ್ಟವನ್ನು ಎದುರಿಸುತಿತ್ತು. ಆದರೂ ಸಹ ಅಲ್ಲಿನ ಮತದಾರರು ಎಲ್‌ಡಿಎಫ್ ಅನ್ನು ಬೆಂಬಲಿಸಿದರು. ಉತ್ತಮ ನೀತಿಗಳು, ಪಿಣರಾಯಿ ವಿಜಯನ್ ಅವರ ಉಪಸ್ಥಿತಿ ಹಾಗೂ ಸಮರ್ಥ ಸರ್ಕಾರಗಳಿರುವುದೇ ಇದಕ್ಕೆ ಪ್ರಮುಖ ಕಾರಣವೆನ್ನಬಹುದು.
ಸಿದ್ದರಾಮಯ್ಯ ಅವರೊಂದಿಗೆ ಜೆಡಿಎಸ್ ಗೀಳು
ಕರ್ನಾಟಕದಲ್ಲಿ ತನ್ನ ಅಸ್ತಿತ್ವವನ್ನು ತೋರಿಸಲು ಹೆಣಗಾಡುತ್ತಿರುವ ಮತ್ತೊಂದು ಪಕ್ಷ ಜನತಾ ದಳ (ಜಾತ್ಯಾತೀತ). ತನ್ನ ಮತ್ತು ತಮ್ಮ ತಂದೆಯ ಸಾಧನೆಗಳ ಬಗ್ಗೆ ಮಾತನಾಡುತ್ತಾ ಹೆಚ್.ಡಿ. ಕುಮಾರಸ್ವಾಮಿ ಅವರು ಸಿದ್ದರಾಮಯ್ಯ ಅವರನ್ನು ಹೆಚ್ಚು ಟೀಕಿಸುವುದಕ್ಕೇ ಪ್ರಾಮುಖ್ಯತೆ ನೀಡುತ್ತಾರೆ.
ವಾಸ್ತವದಲ್ಲಿ ಸಿದ್ದರಾಮಯ್ಯ ಜೆಡಿಎಸ್ ಪಾಲಿಗೆ ಗತಕಾಲ. ರಾಜ್ಯದಾದ್ಯಂತ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡುವ ಮೂಲಕ ಕಾಂಗ್ರೆಸ್ ಪಕ್ಷವನ್ನು ಬಲಹೀನಪಡಿಸಲಾಗುವುದಿಲ್ಲ, ಅಥವಾ ಹೆಚ್ಚಿನ ಮತಗಳನ್ನು ಗಳಿಸಲಾಗುವುದಿಲ್ಲ. ಯಾವುದೇ ಒಂದು ವ್ಯಕ್ತಿಯೊಂದಿಗೆ ಅಥವಾ ಇಲ್ಲದೆಯೂ ಕಾಂಗ್ರೆಸ್ ಪಕ್ಷ ಕರ್ನಾಟಕದಲ್ಲಿ ರಾಜಕೀಯ ಪಕ್ಷವಾಗಿ ತಳವೂರಿದೆ. ಆದರೆ ಒಂದು ಪ್ರಶಂಸನೀಯ ಅಂಶವೇನೆಂದರೆ ಕಾಂಗ್ರೆಸ್‌ನ ಜಾರಿಯಲ್ಲಿರುವ ಯಾತ್ರೆಗಳು, ಪಕ್ಷವು ಜಲ ವಿವಾದವನ್ನು ರಾಜ್ಯದಾದ್ಯಂತ ಪ್ರಚಾರ ಪಡಿಸುತ್ತಿದೆ. ಜೊತೆಗೆ, ಬಾಕಿ ಉಳಿದಿರುವ ಎಲ್ಲಾ ನೀರಾವರಿ ಯೋಜನೆಗಳನ್ನೂ ಪೂರ್ಣಗೊಳಿಸುವ ಆಶ್ವಾಸನೆಯನ್ನೂ ಜನರಿಗೆ ನೀಡಿದೆ. ಒಂದು ವೇಳೆ ಪಕ್ಷ ಅಧಿಕಾರಕ್ಕೆ ಬಂದರೆ ತನ್ನ ಆಶ್ವಾಸನೆಗಳನ್ನು ಉಳಿಸಿಕೊಳ್ಳುವುದೋ ಇಲ್ಲವೋ ಎನ್ನುವುದು ಬೇರೆ ವಿಚಾರ.
ಸರ್ಕಾರದ ಭ್ರಷ್ಟಾಚಾರವನ್ನು ಜನರ ಮುಂದೆ ಬಹಿರಂಗಪಡಿಸುವುದು ಉತ್ತಮ ಕೆಲಸ. ಆದರೆ, ಮತ್ತೊಬ್ಬರ ಲೋಪಗಳನ್ನು ತೋರಿಸುತ್ತಲೇ ಹೆಚ್ಚಿನ ಮತಗಳನ್ನು ಗಳಿಸುವುದು ಅಷ್ಟು ಉತ್ತಮ ಕ್ರಮವಲ್ಲ. ಜನರ ಮನವೊಲಿಸಲು ಪಕ್ಷಗಳು ಹೆಚ್ಚಾಗಿ ಅವುಗಳ ಶಕ್ತಿಗಳ ಕುರಿತು ಮಾತನಾಡಬೇಕು. ಅವುಗಳ ಆಕಾಂಕ್ಷೆಗಳು ಹಾಗೂ ಅಭಿವೃದ್ಧಿಯ ಯೋಜನೆಗಳನ್ನು ಮತದಾರರ ಮುಂದೆ ಇಡಬೇಕು. ಪಕ್ಷಗಳ ಯೋಜನೆಗಳು ವಾಸ್ತವಿಕವಾಗಿರಬೇಕು, ಹಣಕಾಸಿನ ಮಿತಿಗಳ ಕಡೆ ಗಮನವಿರುವ ಯೋಜನೆಗಳಾಗಿರಬೇಕು. ಇಲ್ಲದಿದ್ದರೆ, ಕಪ್ಪು ಹಣವನ್ನು ಖರ್ಚು ಮಾಡಿ ಅಧಿಕಾರಿಕ್ಕೆ ಬರುವ ಯಾವುದೇ ಪಕ್ಷವಾದರೂ ಸಹ ಭ್ರಷ್ಟಾಚಾರದಲ್ಲಿ ತೊಡಗುವುದು ತಪ್ಪುವುದಿಲ್ಲ.

 

ಆಶಾ ಕೃಷ್ಣಸ್ವಾಮಿ, ಹಿರಿಯ ಪತ್ರಕರ್ತರು, ಬೆಂಗಳೂರು.

Discover more from Valmiki Mithra

Subscribe now to keep reading and get access to the full archive.

Continue reading