ವೈದ್ಯಕೀಯ ವಿದ್ಯಾರ್ಥಿ ನವೀನ್ ಗ್ಯಾನಗೌಡರ್ ಕುಟುಂಬಕ್ಕೆ ಸರ್ಕಾರದ ವತಿಯಿಂದ ಪರಿಹಾರವನ್ನು ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಮಗೆ ಮೊದಲು ಆತನ ಮೃತದೇಹವನ್ನು ಸ್ವದೇಶಕ್ಕೆ ತರುವುದು ಮೊದಲ ಆದ್ಯತೆಯಾಗಿದೆ ಎಂದು ತಿಳಿಸಿದರು. ಪರಿಹಾರ ಕೊಡುವುದು ಸರ್ಕಾರದ ಕೈಯಲ್ಲಿದೆ. ಅದು ಕೂಡ ನನ್ನ ಗಮನದಲ್ಲೇ ಇದೆ. ಕುಟುಂಬಸ್ಥರ ಒತ್ತಾಸೆಯಂತೆ ಮೃತದೇಹವನ್ನು ತರಲು ನಮ್ಮ ಪ್ರಯತ್ನಗಳು ಮುಂದುವರೆದಿದೆ ಎಂದರು.
ಉಕ್ರೇನ್ ಮತ್ತು ರಷ್ಯಾದಲ್ಲಿರುವ ರಾಯಭಾರ ಅಧಿಕಾರಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ಮೃತದೇಹವನ್ನು ಭಾರತಕ್ಕೆ ತರಲು ನಾವು ಶಕ್ತಿಮೀರಿ ಪ್ರಯತ್ನವನ್ನು ಮಾಡುತ್ತಿದ್ದೇವೆ. ಉಕ್ರೇನ್‍ನಲ್ಲಿ ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ವಿಳಂಬವಾಗಿದೆ. ಆದರೂ ನಮ್ಮ ಪ್ರಯತ್ನ ನಿಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಕರ್ಕೀವ್ ಸೇರಿದಂತೆ ಬೇರೆ ಬೇರೆ ಭಾಗಗಳಲಿ ಕನ್ನಡಿಗರು ಸಿಲುಕಿಕೊಂಡಿದ್ದಾರೆ. ಎರಡೂ ರಾಷ್ಟ್ರಗಳ ನಡುವಿನ ಸಂಘರ್ಷದ ಕಾರಣ ವಿಳಂಭವಾಗುತ್ತಿದೆ. ರೈಲು, ಬಸ್, ರಸ್ತೆ ಮೂಲಕವೂ ಸುರಕ್ಷಿತ ಸ್ಥಳಗಳಿಗೆ ಅವರೆಲ್ಲರನ್ನೂ ಕರೆತರುವ ಪ್ರಯತ್ನ ನಡೆಯುತ್ತಿದೆ.
ಕೇಂದ್ರ ಸರ್ಕಾರ ಉಕ್ರೇನ್ ಸರ್ಕಾರದ ಜೊತೆ ಮಾತುಕತೆ ನಡೆಸಿ ಸುರಕ್ಷಿತ ವಲಯಗಳಿಗೆ ಸ್ಥಳಾಂತರ ಮಾಡುತ್ತಿದೆ. ಯುದ್ದ ವಲಯವಾಗಿರುವುದರಿಂದ ಭಾರತೀಯರನ್ನು ಸ್ಥಳಾಂತರ ಮಾಡುವುದು ವಿಳಂಬವಾಗುತ್ತಿದೆ ಎಂದರು.