ಹಿಜಾಬ್ ಮತ್ತು ಕೇಸರಿ ಶಾಲು ನಡುವೆ ಉಂಟಾಗಿರುವ ವಿವಾದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಸಚಿವರು ಮತ್ತು ಅಧಿಕಾರಿಗಳ ಜತೆ ಸಭೆ ನಡೆಸಿದರು.
ನಿನ್ನೆ ರಾಜ್ಯದ 18 ಜಿಲ್ಲೆಗಳ 55 ಕಾಲೇಜುಗಳಲ್ಲಿ ಹಿಜಾಬ್ ಹಾಗೂ ಕೇಸರಿ ಶಾಲು ಧರಿಸುವ ಕುರಿತು ದೊಡ್ಡ ಸಂಘರ್ಷವೇ ನಡೆದಿತ್ತು. ಈ ಹಿನ್ನೆಲೆಯಲ್ಲಿ ಪ್ರೌಢಶಾಲೆ ಮತ್ತು ಕಾಲೇಜುಗಳಿಗೆ ಇಂದಿನಿಂದ ಅನ್ವಯವಾಗುವಂತೆ ಮೂರು ದಿನ ರಜೆ ಘೋಷಿಸಲಾಗಿದೆ. ನವದೆಹಲಿಯಿಂದ ರಾತ್ರಿ ತಡವಾಗಿ ಬೆಂಗಳೂರಿಗೆ ಆಗಮಿಸಿದ ಸಿಎಂ ಬೊಮ್ಮಾಯಿ ಅವರಿಗೆ ಇಂದು ಸಚಿವರು ಮತ್ತು ಅಧಿಕಾರಿಗಳು ಘಟನೆ ಬಗ್ಗೆ ಸಂಪೂರ್ಣವಾಗಿ ಮಾಹಿತಿ ನೀಡಿದ್ದಾರೆ.
ಉಡುಪಿ ಜಿಲ್ಲೆಯ ಕುಂದಾಪುರದಿಂದ ಆರಂಭವಾಗಿ ದಕ್ಷಿಣ ಕನ್ನಡ, ಮಡಿಕೇರಿ, ಮಂಡ್ಯ, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಬೆಳಗಾವಿ, ಬಾಗಲಕೋಟೆ ಸೇರಿದಂತೆ ಒಟ್ಟು 18 ಜಿಲ್ಲೆಗಳಲ್ಲಿ ಸಂಘರ್ಷಕ್ಕೆ ಕಾರಣವಾಗಿದೆ. ಸಮವಸ್ತ್ರ ಪಾಲನೆ ಮಾಡುವಂತೆ ವಿದ್ಯಾರ್ಥಿಗಳಿಗೆ ಹೇಳಿದರೂ ಕೆಲವರು ಧರ್ಮದ ಆಚರಣೆ ಎಂದು ಹೇಳಿಕೊಂಡು ತರಗತಿಯೊಳಗೆ ಹಿಜಾಬ್ ಧರಿಸಿಕೊಂಡು ಬರುತ್ತೇವೆ ಎನ್ನುತ್ತಾರೆ.
ಸಚಿವ ನಾಗೇಶ್ ಕೂಡ ಪ್ರಸ್ತುತ ಘಟನೆಯ ಬಗ್ಗೆ ಸಿಎಂಗೆ ಸಂಪೂರ್ಣವಾದ ವಿವರ ನೀಡಿದರು. ಕೆಲವು ಕಡೆ ಸಮವಸ್ತ್ರ ಧರಿಸಿಯೇ ಬರುವುದಿಲ್ಲ ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದಾರೆ. ಇದಕ್ಕೆ ಸಂಘಟನೆಗಳ ಕೈವಾಡವೂ ಇದೆ. ಶಾಲಾ ಆಡಳಿತ ಮಂಡಳಿಯವರು ಸಮವಸ್ತ್ರ ಧರಿಸಿಕೊಂಡು ಬರುವಂತೆ ಮನವೊಲಿಸಿದರೂ ಕೇಳುತ್ತಿಲ್ಲ. ಇದರಿಂದ ಪರಿಸ್ಥಿತಿ ಬಿಗಡಾಯಿಸಿದೆ ಎಂದು ಹೇಳಿದ್ದಾರೆ.