ಭಾರತದ ಘರ್ಜನೆಯನ್ನು ಇಡೀ ವಿಶ್ವ ಕೇಳಿಸಿಕೊಳ್ಳುತ್ತಿದೆ ,ಸ್ವಾತಂತ್ರ್ಯ ಬಂದು 75 ವರ್ಷಗಳು ಪೂರ್ಣಗೊಂಡಿರುವಾಗ ಮುಂದಿನ 25 ವರ್ಷಗಳಲ್ಲಿ ದೇಶವನ್ನು ಹೇಗೆ ಪ್ರಗತಿಯತ್ತ ಕೊಂಡೊಯ್ಯಬೇಕು ಎಂಬುದರತ್ತ ಎಲ್ಲರೂ ಗಮನಹರಿಸಬೇಕು ಎಂದು ಪ್ರಧಾನಿ ಮೋದಿ ಹೇಳಿದರು.
ಕಾಂಗ್ರೆಸ್ ಅಧಿಕಾರದ ವೇಳೆ ದೇಶದ ಅಭಿವೃದ್ಧಿಗೆ ಅವಕಾಶ ನೀಡಲಿಲ್ಲ. ಈಗ ವಿರೋಧ ಪಕ್ಷದಲ್ಲಿದ್ದಾಗ ದೇಶದ ಅಭಿವೃದ್ಧಿಗೆ ಅಡ್ಡಿ ಮಾಡುತ್ತಿದ್ದಾರೆ ಹಾಗೂ ರಾಷ್ಟೀಯತೆಗೆ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಹಾಗಾದರೆ ನಿಮ್ಮ ಪಕ್ಷವನ್ನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಎಂದು ಏಕೆ ಕರೆಯುತ್ತಾರೆ ಎಂದು ಟೀಕಿಸಿದ್ದಾರೆ.
ಕೊರೊನಾ ಕಾಲದಲ್ಲಿ ದೇಶದ ಯುವಕರು ತೋರಿದ ಸಾಮಾಜಿಕ ಕಳಕಳಿ ಪ್ರಶಂಸನೀಯ. ದೇಶಕ್ಕಾಗಿ ನಮ್ಮ ಯುವಕರು ಟೊಂಕ ಕಟ್ಟಿ ನಿಲ್ಲುತ್ತಾರೆ ಎಂಬುದಕ್ಕೆ ಇದು ಉತ್ತಮ ಉದಾಹರಣೆ. ಎಲ್ಲಾ ವಲಯದಲ್ಲಿ ಯುವಕರು ಸಕ್ರಿಯವಾಗಿ ತಮ್ಮನ್ನು ತಾವು ತೊಡಗಿಸಿಕೊಂಡು, ದೇಶದ ಅರ್ಥವ್ಯವಸ್ಥೆ ಸದೃಢವಾಗಿರುವಂತೆ ನೋಡಿಕೊಂಡಿದ್ದಾರೆ ಎಂದು ಪ್ರಧಾನಿ ಮೋದಿ ಮೆಚ್ಚುಗೆ ವ್ಯಕ್ತಪಡಿಸಿದರು.
ಕೊರೊನಾ ಕಾಲದಲ್ಲಿ ಇಡೀ ದೇಶ ಒಂದಾಗಿ ಹೋರಾಡಿದೆ. ಆದರೆ ರಾಜಕೀಯವಾಗಿ ಮಾತ್ರ ಕೆಲವರು ಈ ಹೋರಾಟವನ್ನು ದುರ್ಬಲಗೊಳಿಸಲು ಪ್ರಯತ್ನಿಸಿದರು. ಆದರೆ ದೇಶ ಅವರ ಈ ಹುನ್ನಾರವನ್ನು ಸ್ಪಷ್ಟವಾಗಿ ಅರಿತಿದ್ದಲ್ಲದೇ, ಅದಕ್ಕೆ ಬಹುದೊಡ್ಡ ಪೆಟ್ಟನ್ನೂ ನೀಡಿತು ಎಂದು ಪ್ರಧಾನಿ ಮೋದಿ ಪರೋಕ್ಷವಾಗಿ ವಿಪಕ್ಷಗಳನ್ನು ತರಾಟೆಗೆ ತೆಗೆದುಕೊಂಡರು.