ಬೆಂಗಳೂರು: ನಗರದಲ್ಲಿಂದು ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಸಚಿವ ಡಿ.ಕೆ ಶಿವಕುಮಾರ್ ಅವರು, ನಾವು ಮೇಕೆದಾಟು ಯೋಜನೆ ಶೀಘ್ರ ಅನುಷ್ಠಾನಕ್ಕೆ ಒತ್ತಾಯಿಸಿ ಪಾದಯಾತ್ರೆ ಆರಂಭಿಸಿದಾಗ ಅದಕ್ಕೆ ತೊಂದರೆ ಕೊಡುವ ಸಲುವಾಗಿ ವಾರಾಂತ್ಯದ ನಿರ್ಬಂಧ ಜಾರಿಗೆ ತಂದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಗ ಕೊರೊನಾ ಸೋಂಕಿನ ಪ್ರಮಾಣ ಕಡಿಮೆ ಇತ್ತು. ನಮ್ಮ ಮೇಲಿನ ದ್ವೇಷಕ್ಕಾಗಿ ಲಾಕ್‍ಡೌನ್ ಜಾರಿ ಮಾಡಿ ಜನರಿಗೆ ಸಾವಿರಾರು ಕೋಟಿ ರೂಪಾಯಿ ನಷ್ಟ ಮಾಡಿದರು. ಈಗ ಸೋಂಕಿನ ಪ್ರಮಾಣ ಏರಿಕೆಯಾಗಿದೆ. ಆದರೂ ಲಾಕ್‍ಡೌನ್ ತೆರವು ಮಾಡಿದ್ದಾರೆ ಎಂದು ಅಸಮದಾನ ವ್ಯಕ್ತ ಪಡಿಸಿದರು.
ತಾವು ಮೊದಲೇ ಸರ್ಕಾರದ ನಿರ್ಧಾರವನ್ನು ಬಿಜೆಪಿ ಹಿತಾಸಕ್ತಿಯ ಕ್ರಮ ಎಂದು ಟೀಕೆ ಮಾಡಿದ್ದನ್ನು ಸ್ಮರಿಸಿಕೊಂಡ ಡಿ.ಕೆ.ಶಿವಕುಮಾರ್, ಅವರಿಗೆ ಬೇಕಾದಂತೆ ಲಾಕ್ಡೌನ್ ಮಾಡುತ್ತಾರೆ, ಬೇಡವಾದಾಗ ತೆಗೆಯುತ್ತಾರೆ. ಇದರ ಹಿಂದೆ ರಾಜಕೀಯ ದುರುದ್ದೇಶವಿದೆಯೋ ಹೊರತು ಜನರ ಹಿತಾಸಕ್ತಿ ಇಲ್ಲ. ನಮ್ಮ ಪಾದಯಾತ್ರೆಯನ್ನು ತಡೆಯಲು ಜನರಿಗೆ ಸರ್ಕಾರ ಕಿರುಕೂಳ ನೀಡಿತ್ತು ಎಂದರು.