ಚಿಕ್ಕಮಗಳೂರು : ಬಾಲ್ಯದಲ್ಲಿ ತಂದೆ-ತಾಯಿಯಿಂದ ಬೇರ್ಪಟ್ಟಿದ್ದ ಮಗಳು 22 ವರ್ಷದ ಬಳಿಕ ತಾಯಿ ಮಡಿಲನ್ನು ಸೇರಿದ ಹೃದಯ ಕಲಕುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಮುದ್ರೆಮನೆ ಗ್ರಾಮದಲ್ಲಿ ನಡೆದಿದೆ.
ಅಂಜಲಿ ಎಂಬ ಬಾಲಕಿ 9ನೇ ವಯಸ್ಸಿನಲ್ಲಿ ನಾಪತ್ತೆಯಾಗಿದ್ದರು. ಆದರೆ ತಂದೆ- ತಾಯಿ ಮಗಳು ಕಾಣೆಯಾಗಿರುವ ಬಗ್ಗೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರಲಿಲ್ಲ. ಅಂಜಲಿ ಕೇರಳದಲ್ಲಿ ಮನೆ ಕೆಲಸ ಮಾಡಿಕೊಂಡು ಅಲ್ಲಿಯೇ ಜೀವನ ನಿರ್ವಹಣೆ ಮಾಡುತ್ತಿದ್ದರು. ಬಳಿಕ ಕೇರಳದ ನೆಲ್ಲಮಣಿಯ ಸಾಜಿ ಎಂಬುವರೊಂದಿಗೆ ವಿವಾಹವಾಗಿದ್ದರು.
ಕಳೆದ 3 ವರ್ಷದಿಂದ ಮಗಳು ಅಂಜಲಿ ಎಲ್ಲಾ ಕಡೆ ತಾಯಿಗಾಗಿ ಹುಡುಕಾಡಿದ್ದು, ಕೊನೆಗೂ ಮೂಡಿಗೆರೆಯ ಮುದ್ರೆಮನೆಯಲ್ಲಿ ತಾಯಿ ಪತ್ತೆಯಾಗಿದ್ದಾರೆ.
ಇನ್ನು ನಾಲ್ಕು ವರ್ಷಗಳ ಹಿಂದೆ ಅಂಜಲಿ ತಂದೆ ಕಾಳಿಮುತ್ತು ಮೃತಪಟ್ಟಿದ್ದಾರೆ ಎಂದು ಆಕೆಯ ತಾಯಿ ಮಾಹಿತಿ ನೀಡಿದ್ದು, ತಾಯಿ ಕಣ್ಣಿಗೆ ಬೀಳುತ್ತಿದ್ದಂತೆ ಅಂಜಲಿ ಓಡಿ ಹೋಗಿ ಅಪ್ಪಿಕೊಂಡಿದ್ದಾರೆ. ತಾಯಿಯನ್ನು ನೋಡಿದ ಖುಷಿಯಲ್ಲಿ ಮಗಳು ಮತ್ತು ಕಾಣೆಯಾಗಿದ್ದ ಮಗಳನ್ನು ಕಂಡ ತಾಯಿ ಒಬ್ಬರನ್ನೊಬ್ಬರು ಗಟ್ಟಿಯಾಗಿ ತಬ್ಬಿಕೊಂಡು ಕಣ್ಣೀರಿಟ್ಟಿದ್ದು ಈ ವಿಡಿಯೋ ಕೂಡ ವೈರಲ್ ಆಗಿದೆ.
ಮೂಲತಃ ತಮಿಳುನಾಡು ಮೂಲದವರಾದ ಅಂಜಲಿ ಕುಟುಂಬ ಕಳೆದ 40 ವರ್ಷದ ಹಿಂದೆ ಮೂಡಿಗೆರೆಗೆ ಬಂದಿದ್ದರು. ಮೂಡಿಗೆರೆ ತಾಲೂಕಿನ ಮುತ್ತಿಗೆಪುರದಲ್ಲಿ ವಾಸವಾಗಿದ್ದು, ನಂತರ ಹೊಟ್ಟೆಪಾಡಿಗಾಗಿ ಕುಟುಂಬದ ಅಲೆದಾಟ ಸಾಮಾನ್ಯವಾಗಿತ್ತು. ಅಂಜಲಿ ಅವರ ತಾಯಿಗೆ 11 ಮಕ್ಕಳಲ್ಲಿ ಈಕೆ ಒಂಭತ್ತನೇ ಮಗಳು.