ಬೆಂಗಳೂರು: ಪಂಚಮಸಾಲಿ, ಒಕ್ಕಲಿಗರ ಮೀಸಲಾತಿ ಪರಿಷ್ಕರಣೆಗೆ ರಾಜ್ಯ ಸರ್ಕಾರ ನಿನ್ನೆ ಹೊರಡಿಸಿರುವ ಘೋಷಣೆಯಿಂದ ಯಾವ ಸಮಾಜಕ್ಕೂ ನ್ಯಾಯ ಸಿಗುವುದಿಲ್ಲ. ಮುಖ್ಯಮಂತ್ರಿ ಟೋಪಿ ಹಾಕಿ, ಜನ ಸಮುದಾಯಕ್ಕೆ ಮೋಸ ಮಾಡಿದ್ದಾರೆ. ಯಾರಿಗೂ ಅವಕಾಶ ಸಿಗದಿರಲಿ ಎಂದು ರಾಜಕೀಯವಾಗಿ ಹೆದರಿಕೊಂಡು ತೆಗೆದುಕೊಂಡಿರುವ ತೀರ್ಮಾನ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಬಳಿ ಎಲ್ಲಾ ಮಾಹಿತಿ ಮತ್ತು ದಾಖಲೆಗಳಿವೆ. ಶೀಘ್ರವೇ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಸೇರಿ ಪತ್ರಿಕಾಗೋಷ್ಠಿ ನಡೆಸಿ ಎಲ್ಲ ವಿವರಗಳನ್ನು ಬಿಚ್ಚಿಡುತ್ತೇವೆ ಎಂದು ತಿರುಗೇಟು ನೀಡಿದರು.
ಸರ್ಕಾರದವರು ನಮ್ಮನ್ನು ಶಾಲಾ ಮಕ್ಕಳೆಂದು ಭಾವಿಸಿದ್ದಾರೆ. ಅವರ ಕ್ರಮದಿಂದ ಯಾರಿಗೆ ಅನುಕೂಲ? ಇರುವ ಮೀಸಲಾತಿ ವರ್ಗ ತೆಗೆದುಹಾಕಲು ಹೇಗೆ ಸಾಧ್ಯ? ಇದು ಅಸಾಧ್ಯ. ಇಡಬ್ಲ್ಯೂಎಸ್‍ಗೆ ನೀಡಲಾಗಿರುವ ಶೇ.10ರಷ್ಟು ಮೀಸಲಾತಿ ತೆಗೆದರೆ ಅವರ ಭವಿಷ್ಯ ಏನಾಗಬೇಕು ? ಯಾವುದೇ ಕ್ರಮವನ್ನಾದರೂ ಸಂವಿಧಾನ ಬದ್ಧ, ಕಾನೂನು ಬದ್ಧವಾಗಿ ತೆಗೆದುಕೊಳ್ಳಬೇಕು. ಈ ಕ್ರಮದಿಂದ ಪಂಚಮಸಾಲಿ ಹಾಗೂ ಒಕ್ಕಲಿಗರಿಗೆ ನ್ಯಾಯ ಸಿಗುತ್ತದೆ ಎಂದು ಬಿಜೆಪಿ ನಾಯಕರನ್ನು ಬಿಟ್ಟು ಆಯಾ ಸಮುದಾಯದ ಮುಖಂಡರಿಂದ ಹೇಳಿಕೆ ಕೊಡಿಸಲಿ ಎಂದು ಸವಾಲು ಹಾಕಿದರು.