ಬೆಂಗಳೂರು : ರಾಜ್ಯ ವಿಧಾನಮಂಡಲ ಅಧಿವೇಶನದ ನಂತರ ಎರಡೂ ಪಕ್ಷದ ಮುಖಂಡರು ರಾಜ್ಯದತ್ತ ಮುಖ ಮಾಡಲಿದ್ದಾರೆ.
ರಾಜ್ಯದಲ್ಲಿ ಬಿಜೆಪಿಯ ಸಂಪೂರ್ಣ ಜವಾಬ್ದಾರಿಯನ್ನು ಪ್ರಧಾನಿ ಮೋದಿ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೇ ತೆಗೆದುಕೊಳ್ಳಲಿದ್ದಾರೆ.ಅವರು ರಾಜ್ಯಕ್ಕೆ ಹೆಚ್ಚೆಚ್ಚು ಪ್ರವಾಸ ಮಾಡುವಂತೆ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ.
ಆಯುಷ್ಮಾನ್ ಕಾರ್ಡ್ ವಿತರಣೆ, ಹಾಡಿ ಮತ್ತು ಹಟ್ಟಿಗಳ ವಾಸಿಗಳಿಗೆ ಹಕ್ಕುಪತ್ರ ವಿತರಣೆ, ಚಿಕ್ಕಬಳ್ಳಾಪುರ ಮೆಡಿಕಲ್ ಕಾಲೇಜು ಉದ್ಘಾಟನೆ, ಮೈಸೂರು-ಬೆಂಗಳೂರು ಹೆದ್ದಾರಿ ಅನಾವರಣ… ಹೀಗೆ ವಿವಿಧ ಕಾರ್ಯಕ್ರಮಗಳನ್ನು ಮೋದಿ ಚುನಾವಣೆ ಘೋಷಣೆಗೆ ಮುನ್ನ ಪೂರ್ಣಗೊಳಿಸಲಿದ್ದಾರೆ. ಕಾರ್ಯಕ್ರಮಗಳ ಉದ್ಘಾಟನೆಗಳಿಗಾಗಿ ಮೋದಿ ಪ್ರತಿ ಹದಿನೈದು ದಿನಕ್ಕೊಮ್ಮೆ ರಾಜ್ಯಕ್ಕೆ ಆಗಮಿಸಲಿದ್ದಾರೆ. ಷಾ ಪ್ರತಿ ವಾರ ರಾಜ್ಯಕ್ಕೆ ಬಂದು ವಿವಿಧ ಕಾರ್ಯಕ್ರಮಗಳ ಜತೆಗೆ ಸಂಘಟನೆಗೂ ಆದ್ಯತೆ ನೀಡಲಿದ್ದಾರೆ.
ರಾಜ್ಯದಲ್ಲಿ ಬಂಡಾಯ ಕಾಣಿಸದಂತೆ ಎಚ್ಚರವಹಿಸಲು ಈಗಾಗಲೇ ಬಿಜೆಪಿ ವರಿಷ್ಠರು ರಾಜ್ಯ ನಾಯಕರಿಗೆ ಸೂಚನೆ ನೀಡಿದ್ದಾರೆ. ಹಿಮಾಚಲಪ್ರದೇಶದಲ್ಲಿ ಹದಿನಾಲ್ಕು ಜನ ಬಂಡಾಯವಾಗಿ ಸ್ಪರ್ಧಿಸಿದ್ದರು. ಅದರಲ್ಲಿ ನಾಲ್ಕು ಜನ ಕಾಂಗ್ರೆಸ್ನಿಂದ ಗೆದ್ದಿದ್ದಾರೆ. ರಾಜ್ಯದಲ್ಲಿ ಆ ರೀತಿಯ ಪರಿಸ್ಥಿತಿ ಉದ್ಭವಿಸದಂತೆ ಎಚ್ಚರಿಕೆ ತೆಗೆದುಕೊಳ್ಳಲು ಚರ್ಚೆ ನಡೆಸಲಾಗಿದೆ.