ಬೆಂಗಳೂರು: ಒಳಮೀಸಲಾತಿ ಜಾರಿಗಾಗಿ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದ ದಲಿತ ಹೋರಾಟಗಾರರ ಮೇಲೆ ಲಾಠಿ ಬೀಸುವ ಮೂಲಕ ಬಿಜೆಪಿ ಸರ್ಕಾರ ದಲಿತರ ವಿರುದ್ಧ ತನ್ನೊಳಗಿದ್ದ ದ್ವೇಷ, ಅಸಹನೆಯನ್ನು ಕಾರಿಕೊಂಡಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತ ಪಡಿಸಿದೆ.
ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುತ್ತೇವೆ ಎಂದಿದ್ದ ಸರ್ಕಾರವೇ ಇಂದು ಲಾಠಿಚಾರ್ಜ್ ನಡೆಸಿ ಜಾರಿಯನ್ನು ನಿರಾಕರಿಸುವ ಸಂದೇಶ ನೀಡಿದೆ ಎಂದು ಟ್ವೀಟ್ ಮಾಡಿದೆ.
ಕೇಸರಿ ಶಾಲು ಹೊದ್ದು ಪುಂಡಾಟಿಕೆ ನಡೆಸುವವರಿಗೆ ಈ ಸರ್ಕಾರದಲ್ಲಿ ರಾಜಮರ್ಯಾದೆ ಸಿಗುತ್ತಿದೆ. ಭ್ರಷ್ಟಾಚಾರ, ಅಕ್ರಮ ನಡೆಸುವವರಿಗೆ, ರೌಡಿಗಳಿಗೆ, ಕ್ರಿಮಿನಲ್‍ಗಳಿಗೆ ರಾಜಮರ್ಯಾದೆ ಸಿಗುತ್ತಿದೆ. ಆದರೆ, ಶಾಂತಿಯಿಂದ ಪ್ರತಿಭಟಿಸುವ ದಲಿತ ಹೋರಾಟಗಾರರಿಗೆ ಮಾತ್ರ ಲಾಠಿಏಟು ಬೀಳುತ್ತಿದೆ. ಬಿಜೆಪಿ ದೃಷ್ಟಿಯಲ್ಲಿ ದಲಿತರು ಕ್ರಿಮಿನಲ್‍ಗಳಂತೆ ಕಾಣುವರೇ ಎಂದು ಕಾಂಗ್ರೆಸ್ ಕಿಡಿಕಾರಿದೆ.