ಬೆಂಗಳೂರು: ಮತಪಟ್ಟಿ ಅಕ್ರಮಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಸಚಿವ ಡಾ. ಅಶ್ವತ್ಥ ನಾರಾಯಣ ಅವರ ಬಂಧನ ಆಗಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಚುನಾವಣಾ ಆಯೋಗಕ್ಕೆ ದೂರು ನೀಡಿದ ಬಳಿಕ ಮಾತನಾಡಿದ ಅವರು, ಬಿಜೆಪಿ ನಡೆಸಿದ ಷಡ್ಯಂತ್ರ ಇವಾಗ ಸಾರ್ವಜನಿಕ ಆಸ್ತಿ ಆಗಿ ಬಿಟ್ಟಿದೆ. ಈ ಅಕ್ರಮ ಇಡೀ ದೇಶಕ್ಕೆ ಗೊತ್ತಾಗಿದೆ.ಮತಪಟ್ಟಿ ಪರಿಷ್ಕರಣೆಗೆ ಚಿಲುಮೆ ಸಂಸ್ಥಿಗೆ ಬಿಬಿಎಂಪಿ ಕಮಿಷನರ್ ಅನುಮತಿ ನೀಡಿದ್ದಾರೆ. ಆ ದುರಾತ್ಮ ಖಾಸಗಿಯಾಗಿ ಬಿಎಲ್ ಓ ನೇಮಕ ಮಾಡಿದ್ದಾನೆ. ಇದು ಕಾನೂನಿಗೆ ವಿರೋಧವಾಗಿದೆ ಎಂದರು.
ಅಕ್ರಮದ ಬಗ್ಗೆ ತನಿಖೆ ಮಾಡುತ್ತೇವೆ ಎನ್ನುತ್ತಾರೆ ರಾಜ್ಯ ಮುಖ್ಯ ಚುನಾವಣಾಧಿಕಾರಿ. ಆದರೆ ತನಿಖೆಯಿಂದ ಸತ್ಯ ಹೊರ ಬರಲ್ಲ, ಕ್ಷೇತ್ರ ವಿಭಾಗಾಧಿಕಾರಿ, ಬಿಬಿಎಂಪಿ ಕಮಿಷನರ್ ಅವರನ್ನು ತನಿಖೆ ಮಾಡಲು ಆಗುತ್ತಾ? ಸಿಎಂ ತನಿಖೆ ಮಾಡಲು ಆಗುತ್ತಾ? ಈ ಕಾರಣಕ್ಕಾಗಿ ನ್ಯಾಯಾಂಗ ತನಿಖೆಗೆ ನೀಡಿ ಎಂದು ಆಗ್ರಹ ಮಾಡಿದ್ದೇವೆ ಎಂದರು.