ಬೆಂಗಳೂರು: ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡ ಮತದಾನ ಮಾಡುವ ಮೂಲಕ ಜೆಡಿಎಸ್ ಅಭ್ಯರ್ಥಿ ಕುಪ್ಪೇಂದ್ರ ರೆಡ್ಡಿ ಸೋಲಿಗೆ ಕಾರಣವಾದ ಹಿನ್ನೆಲೆಯಲ್ಲಿ ಜೆಡಿಎಸ್ ಗುಬ್ಬಿ ಶಾಸಕ ಶ್ರೀನಿವಾಸ್ ಮತ್ತು ಕೋಲಾರ ಶಾಸಕ ಶ್ರೀನಿವಾಸ್ ಗೌಡರನ್ನು ಉಚ್ಚಾಟನೆ ಮಾಡಲು ಜೆಡಿಎಸ್‍ನಿಂದ ತೀರ್ಮಾನ ಮಾಡಲಾಗಿದ್ದು. ಈ ಸಂಬಂಧ ನಾಳೆಯೇ ಆದೇಶ ಹೊರಡಿಸುವುದಾಗಿ ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ ಸ್ಪಷ್ಟನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಪಕ್ಷದ ರಾಜ್ಯಾಧ್ಯಕ್ಷ ಸಿಎಂ ಇಬ್ರಾಹಿಂ, ಇಬ್ಬರನ್ನು ಅಮಾನತು ಮಾಡಲಾಗಿದೆ. ಎಚ್. ಡಿ. ಕುಮಾರಸ್ವಾಮಿ ಅವರು ಬೆಂಗಳೂರಿನ ಹೊರಗೆ ಇದ್ದಾರೆ. ಅವರ ಬಳಿ ಸಹಿ ಪಡೆದ ಬಳಿಕ ನಾಳೆ ಅಧಿಕೃತ ಆದೇಶ ಹೊರಡಿಸುತ್ತೇವೆ ಎಂದರು.
ಇಬ್ಬರ ಸದಸ್ಯತ್ವ ರದ್ದು ಮಾಡಲು ಬುಧವಾರ ಸ್ಪೀಕರ್‌ಗೆ ದೂರು ಕೊಟ್ಟಿದ್ದೇವೆ, ಇಬ್ಬರು ಪಕ್ಷದ ವಿಪ್ ಉಲ್ಲಂಘನೆ ಮಾಡಿದ್ದಾರೆ, ಕಾಂಗ್ರೆಸ್-ಬಿಜೆಪಿ ಒಟ್ಟಾಗಿ ಅಡ್ಡ ಮತದಾನ ಮಾಡಿಸಿದ್ದಾರೆ. ಹೀಗಾಗಿ ಅನರ್ಹ ಮಾಡಿ ಎಂದು ಮನವಿ ಮಾಡುತ್ತೇವೆ, ಈಗ ಇರುವ ಸ್ಪೀಕರ್ ಸಂವಿಧಾನ ಬದ್ಧವಾಗಿ ಕೆಲಸ ಮಾಡುತ್ತಾರೆ ಎನ್ನುವ ನಂಬಿಕೆ ಇದೆ. ಒಂದು ವೇಳೆ ಸ್ಪೀಕರ್ ಸರಿಯಾಗಿ ನಿರ್ಣಯ ಮಾಡದೇ ಹೋದರೆ ಕೋರ್ಟ್ ಮೊರೆ ಹೋಗುತ್ತೇವೆ ಎಂದು ತಿಳಿಸಿದರು.
ಗುಬ್ಬಿ ಶಾಸಕ ಶ್ರೀನಿವಾಸ್ ತಪ್ಪು ಮಾಡಿಲ್ಲ ಅಂದರೆ ಅಂದೇ ಹೇಳಬೇಕಿತ್ತು, ಮತ ಪತ್ರ ಮುಚ್ಚಿಕೊಂಡು ಯಾಕೆ ಮತ ಹಾಕಿದರು? ಆಮೇಲೆ ಯಾಕೆ ಕುಮಾರಸ್ವಾಮಿ ಬಗ್ಗೆ ಮಾತಾಡಿದರು. ಈಗ ಯಾಕೆ ಆಣೆ ಪ್ರಮಾಣ ಮಾಡುತ್ತಾರೆ ಎಂದು ಗುಬ್ಬಿ ಶ್ರೀನಿವಾಸ್ ವಿರುದ್ದ ಸಿಎಂ ಇಬ್ರಾಹಿಂ ವಾಗ್ದಾಳಿ ನಡೆಸಿದರು.
ಕೆಪಿಸಿಸಿ ಅಧ್ಯಕ್ಷರೇ ಬಿಜೆಪಿಗೆ ಮತ ಹಾಕಿಸಿದ್ದಾರೆ. ಇತಿಹಾಸದಲ್ಲಿ ಮೊದಲ ಬಾರಿಗೆ ಹೀಗೆ ಆಗಿದೆ, ಸೋನಿಯಾ ಗಾಂಧಿ, ಸುರ್ಜೇವಾಲಾ ಯಾಕೆ ಮೌನವಾಗಿ ಇದ್ದಾರೆ. ಇವರು ಮೌನವಾಗಿ ಇರೋದು ನೋಡಿದರೆ ಇವರು ಕೂಡಾ ಶಾಮೀಲಾಗಿದ್ದಾರೆ ಅನ್ನಿಸುತ್ತದೆ ಎಂದು ಆರೋಪ ಮಾಡಿದರು.
ಅಡ್ಡ ಮತದಾನದ ಬಗ್ಗೆ ಮಾತಾಡೋದು ಬಿಟ್ಟು ಇಡಿ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದಾರೆ ಯಾಕೆ, ಕಾಂಗ್ರೆಸ್‍ನವರು ಯಾಕೆ ಇಡಿ ದಾಳಿ ಬಗ್ಗೆ ಪ್ರತಿಭಟನೆ ಮಾಡುತ್ತಾ ಇದ್ದಾರೆ. ಇಲ್ಲಿ ನಮ್ಮ ಶಾಸಕರಿಂದ ಅಡ್ಡ ಮತದಾನ ಮಾಡಿಸಿಕೊಂಡಿದ್ದಾರೆ. ಇದು ಸರಿನಾ? ಇಲ್ಲಿ ಅಡ್ಡ ಮತದಾನ ಮಾಡಿಸಿ, ಅಲ್ಲಿ ಇಡಿ ದಾಳಿ ಬಗ್ಗೆ ಪ್ರತಿಭಟನೆ ಮಾಡೋಕೆ ಅವರಿಗೆ ಯಾವ ನೈತಿಕತೆ ಇದೆ ಎಂದು ಕಾಂಗ್ರೆಸ್ ವಿರುದ್ಧ ಕಿಡಿಕಾರಿದರು.