ಹಿಂದುಳಿದ ವರ್ಗಗಳ ಹರಿಕಾರ ಎಲ್.ಜಿ.ಹಾವನೂರು.

ಅಸಾಮಾನ್ಯ ಸಾಧನೆ ಮಾಡಿದ ಹಿಂದುಳಿದ ವರ್ಗಗಳ ಹರಿಕಾರ ಲಕ್ಷ್ಮಣ ಗುಂಡಪ್ಪ ಹಾವನೂರರು ಬದುಕಿದ ಹಾದಿ, ಮಾಡಿದ ಸತ್ಕಾರ್ಯಗಳು ಹಿಂದುಳಿದ ಹಾಗೂ ಶೋಷಿತ ವರ್ಗಗಳ ಅಭಿವೃದ್ಧಿಗೆ ಸದಾ ಬೆಳಗುವ ದೀವಿಗೆಗಳಾಗಿವೆ.ಹಿಂದುಳಿದ ವರ್ಗಗಳಿಗೆ ದಾರಿದೀಪವಾದ ಕರ್ನಾಟಕದ ಅಂಬೇಡ್ಕರ್ ಎಂದೇ ಪ್ರಖ್ಯಾತರಾಗಿದ್ದ ಎಲ್.ಜಿ.ಹಾವನೂರರನ್ನು ಯಾವ ಸರ್ಕಾರಗಳೂ ಸೌಜನ್ಯಕ್ಕಾದರೂ ಇಂದು ಸ್ಮರಿಸುವ ಪ್ರಯತ್ನ ಸಹ ಮಾಡಲಿಲ್ಲ.
ಹಾವನೂರರು ಶೋಷಿತ, ಹಿಂದುಳಿದ ವರ್ಗಗಳಿಗೆ, ನೊಂದವರಿಗೆ ಬೆಳಕು ಹಾಗೂ ದಾರಿದೀಪವಾಗಿದ್ದವರು.ಈ ಮಹಾಚೇತನ ಇಂದಿನ ಯುವಪೀಳಿಗೆಗೆ ಆದರ್ಶ ಹಾಗೂ ಅನುಕರಣೀಯ ಯೋಗ್ಯವಾದ ವ್ಯಕ್ತಿತ್ವ ಹೊಂದಿದ್ದವರು.ಬದುಕಿನಲ್ಲಿ ಸಾರ್ಥಕ ಜೀವನ ನಡೆಸಿ ತನ್ನ ಶೋಷಿತ ಸಮುದಾಯಗಳಿಗೆ ಆಸರೆಯಾಗಿ ಉದಾತ್ತ ಧ್ಯೇಯೋದ್ದೇಶಗಳನ್ನು ಜಾರಿಗೆ ತರುವಲ್ಲಿ ಯಶಸ್ವಿಯಾದವರು.
ಸಮಾಜಮುಖಿ ಚಿಂತನೆಗಳನ್ನು ಮೈಗೂಡಿಸಿಕೊಂಡು ಕರ್ನಾಟಕ ರಾಜ್ಯದ ನಕ್ಷೆಯಲ್ಲಿ ಚಿರಸ್ಥಾಯಿಯಾಗಿ ಕಂಗೊಳಿಸಲು ದಾರ್ಶನಿಕರ ,ತತ್ವಜ್ಞಾನಿಗಳ ಪ್ರಾಮಾಣಿಕ ಸೇವಾಕಾಂಕ್ಷಿಗಳ ಕೊಡುಗೆ ಅಪಾರ.ಮನುಷ್ಯ ಇಂದು ವಿಶಾಲ ಮನೋಧರ್ಮವನ್ನು ದೂರೀಕರಿಸಿದ್ದು ಕೂಪಮಂಡೂಕ ಪ್ರಾಣಿಯಂತೆ ಬದುಕುತ್ತಿದ್ದಾರೆ.ಸ್ವಾತಂತ್ರ್ಯಾನಂತರ ರಾಮರಾಜ್ಯ ಪರಿಕಲ್ಪನೆಯತ್ತ ಸಾಗಲು ಅನೇಕ ಮಹನೀಯರ ಪರಿಶ್ರಮ ಅಗಾಧವಾಗಿದೆ.ಇಂಥ ಮೇಲ್ಪಂಕ್ತಿ ಮನೋಧರ್ಮದ ಕೆಲವೇ ಮೇಧಾವಿಗಳಲ್ಲಿ ದಿವಂಗತ ಎಲ್.ಜಿ.ಹಾವನೂರರು ಒಬ್ಬರು. ರಾಜ್ಯದ ನಾನಾ ಸಮಸ್ಯೆಗಳ ಪರಿಹಾರಕ್ಕೆ ಕಟಿಬದ್ಧರಾಗಿ ಸುಂದರ ಸಮಾಜದ ಕನಸು ನನಸಾಗಲು ಸಮರ್ಥ ಹೋರಾಟಗಾರರಾಗಿ ,ನಿರ್ಭೀತ ಎದೆಗಾರಿಕೆಯ ಕಾರ್ಯತತ್ಪರತೆಯಿಂದ ಭವಿಷ್ಯದ ಹಿತಚಿಂತನೆಯಲ್ಲಿ ಕಾರ್ಯೋನ್ಮುಖರಾಗಿದ್ದುದು ಹಾವನೂರರ ಮೇರು ವ್ಯಕ್ತಿತ್ವದ ಧ್ಯೋತಕವಾಗಿತ್ತು.
ಇವರು ಸರಳ ನಡೆನುಡಿಗಳಿಂದ ,ಸಾತ್ವಿಕ ಚಿಂತನೆಗಳಿಂದ ಬಡವ ಬಲ್ಲಿದರೆಂಬ ಭೇದವೆಣಿಸದೆ ಸಾಮಾಜಿಕ ನ್ಯಾಯಕ್ಕಾಗಿ ದುಡಿದ ಚೈತನ್ಯ ಸ್ವರೂಪಿ.ಆ ಮೂಲಕ ತನ್ನ ಬೌದ್ಧಿಕ ಭಂಡಾರದ ಸವಿಯನ್ನು ಹಂಚಿ ಎಲ್ಲ ವರ್ಗಗಳ ಜೊತೆಗೆ ಕೆಳವರ್ಗಗಳು ಸ್ವಾಭಿಮಾನದ ಬದುಕಿನ ನೆಲೆಯನ್ನು ಕಂಡುಕೊಳ್ಳಲು ಹಿಂದುಳಿದ ವರ್ಗಗಳಿಗೆ ಮೀಸಲಾತಿ ದೊರಕಿಸಲು ರಚಿಸಿದ ಹಿಂದುಳಿದ ವರ್ಗಗಳ ಆಯೋಗ ಅದು ಹಾವನೂರು ಆಯೋಗವೆಂದೇ ಹೆಸರಾಯಿತು. ಈ ಮೂಲಕ ಶೋಷಿತ ಹಿಂದುಳಿದ ಸಮುದಾಯಗಳ ಪ್ರಗತಿಗೆ ಪ್ರಾಮಾಣಿಕವಾಗಿ ದುಡಿದ ಹಾವನೂರರ ಸೇವೆ ಚಿರಸ್ಮರಣೀಯ.
ವಾಲ್ಮೀಕಿ ಜನಾಂಗದಲ್ಲಿ ಪ್ರಪ್ರಥಮವಾಗಿ ಕಾನೂನು ಪದವೀಧರರಾಗಿದ್ದು ಹಾವನೂರರಿಗೆ ಹೆಗ್ಗಳಿಕೆ.ಸಾಮಾಜಿಕ ನ್ಯಾಯದ ಹರಿಕಾರ ನಾಯಕ ಜನಾಂಗದ ಭೀಷ್ಮನೆಂದೇ ಕರೆಯಲ್ಪಡುತ್ತಿದ್ದ ಕಾನೂನು ಪಂಡಿತ ಹಾವನೂರರು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬದಲ್ಲಿ ದಿನಾಂಕ 25-03-1925 ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನಲ್ಲಿ ಜನಿಸಿದರು. ಇವರ ವಕೀಲ ವೃತ್ತಿಯ ಆರಂಭಿಕ ದಿನಗಳಲ್ಲಿ ಇವರಿಗೆ ಮೇಲ್ವರ್ಗದವರ ವೃತ್ತಿ ಬದುಕಿನ ಅಸೂಯೆಯೂ ಕಾಡಿದೆ.ನನ್ನಂತಹ ವಿದ್ಯಾವಂತನ ಸ್ಥಿತಿಯೇ ಹೀಗಾದರೆ ಇನ್ನು ನನ್ನ ಜನಾಂಗದ ಸ್ಥಿತಿಗತಿಯೇನು ಎಂಬ ಚಿಂತೆಯಿಂದ ಅವರು ಸಾಮಾಜಿಕ ನ್ಯಾಯಕ್ಕಾಗಿ ಅಂದಿನಿಂದಲೇ ತನ್ನ ಜಾತಿ ಸಂಘಟನೆಯಲ್ಲಿ ತೊಡಗಿಸಿಕೊಂಡರು. ಇವರ ಕಾನೂನು ವಿದ್ವತ್ತನ್ನು ಪರಿಗಣಿಸಿ ಹೈಕೋರ್ಟ್ ನ್ಯಾಯಾಧೀಶ ಹುದ್ದೆ ನೀಡಲು ಸರ್ಕಾರ ಮುಂದಾದಾಗ ಅದನ್ನು ನಯವಾಗಿಯೇ ಹಾವನೂರರು ತಿರಸ್ಕರಿಸಿದರು. ಕಾರಣ ನಾನು ನ್ಯಾಯಾಧೀಶನಾಗಿ ಕುಳಿತರೆ ನನ್ನ ವರ್ಗದ ಸಮಸ್ಯೆಗಳಿಗೆ ಬಹಿರಂಗವಾಗಿ ಹೋರಾಟ ಮಾಡಲು ಸಾಧ್ಯವಿಲ್ಲವೆಂದರಿತು ಸಾಮಾಜಿಕ ಕಳಕಳಿ ಮೆರೆದರು.ಇದು ತಳಸಮಾಜಗಳ ಬಗ್ಗೆ ಹಾವನೂರರಿಗಿದ್ದ ನೈಜ ಕಳಕಳಿಯ ಸಂಕೇತ. ಅಂದು ಇವರು ಇನ್ನೂ ಉನ್ನತ ಹುದ್ದೆಗೇರಬಹುದಿತ್ತು.ಆದರೆ ಅವರು ಅಂದು ದೂರದೃಷ್ಟಿಯ ಪರಿಪಕ್ವತೆಯನ್ನು ಮೆರೆದರು.
1972 ರಲ್ಲಿ ದೇವರಾಜ ಅರಸರು ಮುಖ್ಯಮಂತ್ರಿಗಳಾಗಿ ಕೀರ್ತಿಯ ಉತ್ತುಂಗಕ್ಕೇರಲು ಹಾವನೂರರ ಕೊಡುಗೆಯೂ ಕಾರಣವೆಂದರೆ ತಪ್ಪಾಗಲಾರದು. ಏಕೆಂದರೆ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರನ್ನಾಗಿ ಹಾವನೂರರನ್ನು ದೇವರಾಜ ಅರಸರು ನೇಮಿಸಿದ್ದರು.ಕರ್ನಾಟಕದ ಸಾಮಾಜಿಕ,ಆರ್ಥಿಕ ಇತಿಹಾಸದಲ್ಲಿ ಹಾವನೂರರು ಕರ್ನಾಟಕದಾದ್ಯಂತ ಸುತ್ತಾಡಿ ಸಮೀಕ್ಷೆ ನಡೆಸಿ ಮಂಡಿಸಿದ ವರದಿ ಶ್ಲಾಘನೀಯವಾದುದು.ಮೊದಲ ಬಾರಿಗೆ ಹಿಂದುಳಿದ ವರ್ಗಗಳನ್ನು ಸಂಘಟಿಸುವ ಕಾರ್ಯ ಅದಾಗಿದ್ದರಿಂದ ಆ ಮೂಲಕ ಅವರುಗಳಲ್ಲಿ ಸಾಮಾಜಿಕ ಮತ್ತು ರಾಜಕೀಯ ಜಾಗರೂಕತೆಯನ್ನು ಮೂಡಿಸುವಂತಾಯಿತು.ಈ ಆಯೋಗದ ವರದಿಯನ್ನು ಸ್ವತಃ ಅಂದಿನ ಮುಖ್ಯಮಂತ್ರಿ ದೇವರಾಜ ಅರಸುರವರೇ ಹಿಂದುಳಿದ ವರ್ಗಗಳ ಬೈಬಲ್ ಎಂದು ಮುಕ್ತಕಂಠದಿಂದ ಪ್ರಶಂಸಿಸಿದರು.ನಂತರ ಇದು ಶೋಷಿತ ಹಾಗೂ ಹಿಂದುಳಿದ ವರ್ಗಗಳ ಬದುಕಿನ ಜೀವನಾಡಿಯಾಯಿತು.ಈ ವರದಿಯಿಂದ ಅರಸುರವರ ಆಡಳಿತಕ್ಕೆ ಸ್ವತಃ ಅವರಿಗೇ ಗರಿ ಮೂಡಿಸಿತೆಂದರೆ ಅತಿಶಯೋಕ್ತಿಯೆನಿಸದು.
ಹಾವನೂರರ ಕಾರ್ಯ ನೈಪುಣ್ಯತೆ ಮತ್ತು ವಿದ್ವತ್ತನ್ನು ಪರಿಗಣಿಸಿ ಅರಸುರವರು 1978 ರಲ್ಲಿ ವಿಧಾನಪರಿಷತ್ ಸದಸ್ಯರನ್ನಾಗಿ ಆಯ್ಕೆ ಮಾಡಿ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ , ಹಿಂದುಳಿದ ,ಅಲ್ಪಸಂಖ್ಯಾತ ಹಾಗೂ ಸಮಾಜ ಕಲ್ಯಾಣ ಸಚಿವರನ್ನಾಗಿ ನೇಮಕ ಮಾಡಿದರು. ಇವರ ಸೇವಾಕೈಂಕರ್ಯಕ್ಕೆ ಹಲವಾರು ಅಂತರ್ರಾಷ್ಟ್ರೀಯ ಪ್ರಶಸ್ತಿಗಳೂ ಮುಡಿಗೇರಿವೆ.ಕರ್ನಾಟಕದ ಧರ್ಮಸಿಂಗ್ ನೇತೃತ್ವದ ಸರ್ಕಾರ ದೇವರಾಜ ಅರಸು ಪ್ರಶಸ್ತಿ ನೀಡಿ ಗೌರವಿಸಿತು.1991 ರಲ್ಲಿ ದಕ್ಷಿಣ ಆಫ್ರಿಕಾದ ಸಂವಿಧಾನ ಸಲಹೆಗಾರರಾಗಿ ಭಾರತದ ಪ್ರತಿನಿಧಿಯಾಗಿ ಸಂವಿಧಾನ ರಚಿಸಿದ ಕೀರ್ತಿಗೂ ಪಾತ್ರರಾದರು.
ತನ್ನ ಸಮಾಜ ಸಾಮಾಜಿಕವಾಗಿ ,ಶೈಕ್ಷಣಿಕವಾಗಿ, ಆರ್ಥಿಕವಾಗಿ ಮತ್ತು ರಾಜಕೀಯವಾಗಿ ಸಬಲವಾಗದೆ ಹೋದಲ್ಲಿ ತಮ್ಮ ಬದುಕಿನ ನೆಲೆಯನ್ನು ಭದ್ರಪಡಿಸಿಕೊಳ್ಳಲಾಗದು ಎಂದು ಸಮಾಜದ ಮುಖಂಡರಿಗೆ ಮಾರ್ಗದರ್ಶನ ನೀಡುತ್ತಿದ್ದರು. ಹಾವನೂರು ಆಯೋಗ ಜಾರಿಗೆ ಬಂದ ಸಂದರ್ಭದಲ್ಲಿ ಆಧುನಿಕ ದ್ರೋಣಾಚಾರ್ಯರು ವಿರೋಧಿಸಿದರು. ವಿಪರ್ಯಾಸವೆಂದರೆ ಆ ಸಂದರ್ಭದಲ್ಲಿ ಈ ಆಯೋಗದಿಂದ ಅನುಕೂಲ ಪಡೆದ ಹಿಂದುಳಿದ ವರ್ಗಗಳ ಮುಖಂಡರು ಅವರ ಬೆಂಬಲಕ್ಕೆ ಈ ಸಂದರ್ಭದಲ್ಲಿ ನಿಲ್ಲಲಿಲ್ಲವಂತೆ.ಕೆಲವರು ಈ ಆಯೋಗವನ್ನು ಇಂದಿಗೂ ತಪ್ಪಾಗಿಯೇ ಅರ್ಥೈಸಿಕೊಂಡಿದ್ದಾರೆ.ಏಕೆಂದರೆ ಹಾವನೂರು ಆಯೋಗದಿಂದ ಕೇವಲ ನಾಯಕ ಸಮುದಾಯಕ್ಕೆ ಮೀಸಲಾತಿ ದೊರಕಿದೆಯೆಂದು ತಪ್ಪಾಗಿ ತಿಳಿದಿದ್ದಾರೆ. ಈ ಆಯೋಗದಿಂದ ವಾಲ್ಮೀಕಿ ಸಮುದಾಯಕ್ಕೆ ಯಾವ ಅನುಕೂಲವೂ ಆಗಿಲ್ಲ. ಈ ಆಯೋಗದ ಸಿಂಹಪಾಲು ಹಿಂದಳಿದ ವರ್ಗಗಳಿಗೆ ಅನುಕೂಲವಾಗಿದೆ. ಹಾವನೂರು ಆಯೋಗದಿಂದ ಬ್ರಾಹ್ಮಣ ಜಾತಿ ಹೊರತು ಪಡಿಸಿ ಉಳಿದೆಲ್ಲ ಹಿಂದುಳಿದ ವರ್ಗಗಳಿಗೂ ಮೀಸಲಾತಿ ಸೌಲಭ್ಯ ದೊರಕಿದೆ.
ಇಂತಹ ದೈತ್ಯ ಪ್ರತಿಭೆಯ ಸಮಾಜಸೇವೆಯನ್ನು ಸರ್ಕಾರ ಸ್ಮರಿಸುವ ಸದುದ್ದೇಶದಿಂದಾಗಿ ಹಾವನೂರರ ಜಯಂತಿ ಆಚರಣೆ ಮಾಡುವ ಮತ್ತು ಹಾವನೂರರ ಹೆಸರಿನಲ್ಲಿ ಸರ್ಕಾರದಿಂದಲೇ ಪ್ರಶಸ್ತಿ ನೀಡುವ ಮೂಲಕ ಅವರ ಸೇವೆಯನ್ನು ಜೀವಂತವಾಗಿಡಬಹುದಾಗಿದೆ.ವಿಧಾನಸೌಧದ ಆವರಣದಲ್ಲಿ ಹಾವನೂರರ ಪುತ್ಥಳಿಯನ್ನು ಪ್ರತಿಷ್ಟಾಪನೆ ಮಾಡಬೇಕು. ಇಂದು ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಧಿಕಾರ ಹಿಡಿದವರು ಈ ಬಗ್ಗೆ ಗಮನಹರಿಸುವ ನಿಟ್ಟಿನಲ್ಲಿ ಸಾಗಲಿ.
ಈ ದೈತ್ಯ ಪ್ರತಿಭೆ ಮೇಲ್ವರ್ಗದಲ್ಲಿ ಜನಿಸಿದ್ದರೆ ರಾಜ್ಯ ಹಾಗೂ ರಾಷ್ಟ ಮಟ್ಟದ ಉನ್ನತಾಧಿಕಾರದ ಹುದ್ದೆಗಳನ್ನೇರುತ್ತಿದ್ದರು.ಪ್ರತಿಭೆಯಿದ್ದವರಿಗೆ ಅವಕಾಶಗಳು ಸಿಗುವುದಿಲ್ಲ.ಅವಕಾಶ ದೊರೆತವರಿಗೆ ಪ್ರತಿಭೆಯ ಕೊರತೆಯಿರುತ್ತದೆ. ರಾಜ್ಯ ಸರ್ಕಾರ ಪ್ರತಿವರ್ಷ ಮಾರ್ಚ್ 25 ರಂದು ಕಾನೂನು ಪಂಡಿತ ಹಾವನೂರರ ಜಯಂತಿ ಆಚರಿಸಿ ಅವರನ್ನು ಗೌರವಿಸುವ ಕೆಲಸ ಮಾಡಬೇಕು. ಯುವಪೀಳಿಗೆ ಇಂತಹವರ ಸಾಧನೆ ಮತ್ತು ಆದರ್ಶಗಳನ್ನು ತಿಳಿಯಲು ಹಾವನೂರರ ಕುರಿತು ಶಾಲಾ ಪಠ್ಯ ಪುಸ್ತಕಗಳಲ್ಲಿ ಅಳವಡಿಸಬೇಕು.
– ಜಿ.ನಾಗರಾಜು ಗಾಣದಹುಣಸೆ.
ಸಹಸಂಪಾದಕರು
ವಾಲ್ಮೀಕಿ ಕರ್ನಾಟಕ ಪತ್ರಿಕೆ
9035169758.

Discover more from Valmiki Mithra

Subscribe now to keep reading and get access to the full archive.

Continue reading