ಕರ್ನಾಟಕ ರಕ್ಷಣಾ ವೇದಿಕೆ ಲಕ್ಷಾಂತರ ಕಾರ್ಯಕರ್ತರು ಪ್ರತಿಭಟಿಸಿದರು.

ರಾಜ್ಯದ ಎಲ್ಲ ಭಾಗಗಳಲ್ಲೂ ರಾಷ್ಟ್ರೀಯ ಮತ್ತು ಗ್ರಾಮೀಣ ಬ್ಯಾಂಕ್ ಗಳ ಮುಂದೆ ಇಂದು ಕರ್ನಾಟಕ ರಕ್ಷಣಾ ವೇದಿಕೆ ಲಕ್ಷಾಂತರ ಕಾರ್ಯಕರ್ತರು ಪ್ರತಿಭಟಿಸಿದರು. ಗುರಿ ಇದ್ದಿದ್ದು ಕನಿಷ್ಠ ಒಂದು ಸಾವಿರ ಪ್ರತಿಭಟನೆಗಳು. ನಿರೀಕ್ಷೆ ಮೀರಿ ಎರಡು ಸಾವಿರಕ್ಕೂ ಹೆಚ್ಚು ಪ್ರತಿಭಟನೆಗಳು ನಡೆದವು. 2006 ರಿಂದಲೂ ಕರವೇ ರಾಜ್ಯಾಧ್ಯಕ್ಷರಾದ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಹಿಂದಿಹೇರಿಕೆ ವಿರೋಧಿ ಚಳವಳಿಗಳು ನಡೆಯುತ್ತಲೇ ಬಂದಿವೆ. ಈ ವರ್ಷದ ಪ್ರತಿಭಟನೆ ದಶದಿಕ್ಕುಗಳಲ್ಲೂ ಸದ್ದು ಮಾಡಿದೆ. ಈ ಪ್ರತಿಭಟನೆಯ ಸಕಾರಾತ್ಮಕ ಪರಿಣಾಮಗಳು ಹಲವು. ಕೆಲವನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ.

1. ಬಹುತೇಕ ರಾಷ್ಟ್ರೀಕೃತ ಬ್ಯಾಂಕ್ ಗಳಲ್ಲಿ ಪ್ರತಿವರ್ಷ ಸೆಪ್ಟೆಂಬರ್ 14ರಂದು ಹಿಂದಿ ದಿವಸ ಆಚರಣೆ ನಡೆಯುತ್ತಿತ್ತು. ಈ ವರ್ಷ ಪ್ರತಿಭಟನೆಯ ಬಿಸಿಯಿಂದಾಗಿ ಹಿಂದಿ ದಿವಸ ನಡೆಯಲಿಲ್ಲ. ಇತರ ಕೇಂದ್ರ ಸರ್ಕಾರಿ ಇಲಾಖೆಗಳು, ಉದ್ಯಮಗಳಲ್ಲೂ ಹಿಂದಿ ದಿವಸ ಆಚರಣೆ ನಡೆಯಲಿಲ್ಲ. (ನಡೆದಿದ್ದರೂ ಕದ್ದುಮುಚ್ಚಿ ನಡೆದಿರಬಹುದಷ್ಟೆ.) ಹಾಸನದಲ್ಲಿ ನಡೆಯಬೇಕಿದ್ದ ಹಿಂದಿ ದಿವಸ ಕರವೇ ಹೋರಾಟದಿಂದಾಗಿ ಕನ್ನಡ ದಿವಸವಾಗಿ ಪರಿವರ್ತನೆಯಾಯಿತು.

2. ಚಳವಳಿ ಈ ಬಾರಿ ಅತ್ಯಂತ decentralised ಆಗಿ ನಡೆದಿದ್ದು ವಿಶೇಷ. ಇದರ ಪರಿಣಾಮವಾಗಿ ಲಕ್ಷಾಂತರ ಜನರಿಗೆ ಹಿಂದಿಹೇರಿಕೆ ವಿರುದ್ಧದ ಹೋರಾಟದ ಕುರಿತು ಜಾಗೃತಿ ಮೂಡಿಸಲು ಸಾಧ್ಯವಾಯಿತು.

3. ಬ್ಯಾಂಕ್ ಗಳಲ್ಲಿ ಕನ್ನಡದಲ್ಲಿ ಸೇವೆ ಸಿಗದೆ ಕನ್ನಡಿಗರು ಗೊಣಗಾಡಿಕೊಂಡು ಹೊರಗೆ ಬರುತ್ತಿದ್ದರು. ಇವತ್ತಿನ ಕರವೇ ಪ್ರತಿಭಟನೆ ಸಾರ್ವಜನಿಕರಲ್ಲಿ ಧೈರ್ಯ ತುಂಬಿದೆ. ಕನ್ನಡದಲ್ಲೇ ಸೇವೆ ಒದಗಿಸಿ ಎಂದು‌ ಅವರು ಕೇಳಲು ಈ ಪ್ರತಿಭಟನೆಗಳು ಶಕ್ತಿ ತುಂಬಿವೆ.

4.ಪ್ರತಿವರ್ಷ ನಮ್ಮ ಕೆಲವು ರಾಜಕಾರಣಿಗಳು ‘ಹಿಂದಿ ದಿವಸ’ಕ್ಕೆ ಶುಭ ಕೋರುವ ಟ್ವೀಟ್, ಪೋಸ್ಟ್ ಗಳನ್ನು ಹಾಕುತ್ತಿದ್ದರು. ಈ ವರ್ಷ ಅದು ಗಣನೀಯವಾಗಿ ಕಡಿಮೆಯಾಗಿದೆ. ಎಲ್ಲೋ ಪ್ರಹ್ಲಾದ ಜೋಷಿಯಂಥವರು ಬರೆದುಕೊಂಡರೂ ಕನ್ನಡಿಗರು ಅದಕ್ಕೆ ಸರಿಯಾದ ಉತ್ತರಗಳನ್ನು ಕೊಟ್ಟಿದ್ದಾರೆ.

5. ಯಾವುದೇ ರೂಪದ ಹಿಂದಿ ಹೇರಿಕೆಯನ್ನು ಕರ್ನಾಟಕ ಸಹಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶ ಒಕ್ಕೂಟ ಸರ್ಕಾರಕ್ಕೆ ಇವತ್ತಿನ ಚಳವಳಿಯಿಂದ ಹೋಗಿದೆ. ಕನ್ನಡಿಗರ ಮೇಲೆ ಹಿಂದಿ ಹೇರುವುದಕ್ಕೆ ಎರಡು ಬಾರಿ ಯೋಚಿಸುವಂತೆ ಮಾಡುತ್ತದೆ. ಹಿಂದೆ ನಮ್ಮ ಮೆಟ್ರೋದಿಂದ ಹಿಂದಿಯನ್ನು ತೆಗೆಸಿದ ಕರವೇ ಹೋರಾಟವೂ ಇಂಥದ್ದೇ ಆಶಾಭಾವನೆ ಮೂಡಿಸಿತ್ತು.

6. ಈ ಬಾರಿ ಹಲವಾರು ಜನನಾಯಕರು ಹಿಂದಿಹೇರಿಕೆ ವಿರುದ್ಧ ಧ್ವನಿ ಎತ್ತಿರುವುದು ವಿಶೇಷ. ಸಿನಿಮಾ ನಟರು ಮತ್ತು‌ ಅವರ ಅಭಿಮಾನಿಗಳು ಹಿಂದಿ ಹೇರಿಕೆ‌ ವಿರುದ್ಧ ಧ್ವನಿ ಮೊಳಗಿಸಿದರು. ಹಿಂದಿ ಹೇರಿಕೆ ವಿರುದ್ಧ ಹೋರಾಟ ಈಗ‌ ಕೇವಲ ಕರವೇ ಹೋರಾಟವಾಗಿ ಉಳಿದಿಲ್ಲ, ಅದು ಜನಾಕ್ರೋಶವಾಗಿ ಬದಲಾಗಿದೆ.

7. ಕನ್ನಡ ಚಳವಳಿಯೆಂಬುದು ಕೇವಲ ಭಾವನಾತ್ಮಕ ವಿಷಯಗಳ ದಿಢೀರ್ ಪ್ರತಿಕ್ರಿಯೆಗಳೆಂಬ ಹಣೆಪಟ್ಟಿ ಕಳಚಿಕೊಂಡಿದೆ. ಕನ್ನಡಿಗರು, ತಮಿಳರು, ತೆಲುಗರು, ಮಲಯಾಳಿಗಳು ಒಟ್ಟಾಗಿ ನಮ್ಮ ಹಕ್ಕುಗಳಿಗೆ ಹೋರಾಡಬೇಕು ಎಂಬ ನಿಲುವನ್ನು ಕರವೇ ಪ್ರತಿಪಾದಿಸುತ್ತ ಬಂದಿದೆ. (ನಮ್ಮ ಮೆಟ್ರೋ ಹೋರಾಟದ ಸಂದರ್ಭದಲ್ಲಿ ಕರವೇ ಬಹುಭಾಷಾ ಪ್ರತಿನಿಧಿಗಳ ದುಂಡುಮೇಜಿನ ಸಭೆ ನಡೆಸಿತ್ತು.) ಕನ್ನಡ ಹೋರಾಟವೆಂದರೆ ಕನ್ನಡಿಗರ ಬದುಕಿನ ಹೋರಾಟವೆಂಬ ಕರವೇ ನಿಲುವಿಗೆ ಇವತ್ತಿನ ಚಳವಳಿ ಮತ್ತಷ್ಟು ಶಕ್ತಿ ನೀಡಿದೆ.

8. ಕನ್ನಡ ಚಳವಳಿ ಮತ್ತು ಕನ್ನಡಿಗರ ಸಮಸ್ಯೆಗಳು ರಾಜಕೀಯ ವಿಷಯವಾಗಬೇಕು, ಚುನಾವಣೆಗಳನ್ನು ಪ್ರಭಾವಿಸಬೇಕು. ಕರ್ನಾಟಕದಲ್ಲೂ ಪ್ರಾದೇಶಿಕ ರಾಜಕೀಯ ಶಕ್ತಿಗಳು ಬಲಗೊಳ್ಳಬೇಕು ಎಂಬ ಕೂಗು ಈಗ ಮತ್ತೆ ಕೇಳಿಸುತ್ತಿದೆ.

ನಾವು ಸಾಗಬೇಕಾದ ಹಾದಿ ದೂರವಿದೆ, ಆದರೆ ಹೆಜ್ಜೆ ಇಟ್ಟಾಗಿದೆ. ಹಿಂದಡಿ ಇಡುವ ಪ್ರಶ್ನೆಯೇ ಇಲ್ಲ.

-ದಿನೇಶ್ ಕುಮಾರ್ ಎಸ್.ಸಿ

Discover more from Valmiki Mithra

Subscribe now to keep reading and get access to the full archive.

Continue reading