ಅಂಕೋಲಾ: ಕ್ಷುಲ್ಲಕ ಕಾರಣಕ್ಕೆ ಗೌಡ ಸಮುದಾಯದಿಂದ ಗೌಡ ಕುಟುಂಬವೊಂದನ್ನು ಬಹಿಷ್ಕಾರ ಮಾಡಿ ಅಮಾನವೀಯತೆ ಮೆರೆದ ಆರೋಪ ಎದುರಾಗಿದೆ.
ಜಿಲ್ಲೆಯ ಅಂಕೋಲಾ ತಾಲೂಕಿನ ಹಾರವಾಡ ಗ್ರಾಮದಲ್ಲಿ ಸಂಜಯ್ ಬಂಟಾ ಗೌಡ ಎನ್ನುವ ಹಾಲಕ್ಕಿ ಸಮುದಾಯಕ್ಕೆ ಸೇರಿದ ಯುವಕನ ಮದುವೆಯ ಶುಭ ಕಾರ್ಯ 2012ರಲ್ಲಿ ನಡೆದಿತ್ತು.ಈ ಸಂದರ್ಭ ಊರಗೌಡನಾಗಿದ್ದ ಆನಂದುಗೌಡನಿಗೆ ಮದುವೆ ಆಮಂತ್ರವನ್ನು ಈ ಕುಟುಂಬ ನೀಡಿರಲಿಲ್ಲ.
ಬಂಟ ಗೌಡ ಕುಟುಂಬ ಕೂಡಾ ಊರ ಗೌಡನಾಗಿರುವ ಆನಂದು ಗೌಡ ಕುಟುಂಬಕ್ಕೆ ಆಮಂತ್ರಣದ ವೀಳ್ಯ ನೀಡಿರಲಿಲ್ಲ.ಇದರಿಂದ ದ್ವೇಷ ಸಾಧಿಸುವ ನಿಟ್ಟಿನಲ್ಲಿ ಆನಂದುಗೌಡ ಎಂಬಾತ ಹಾಲಕ್ಕಿ ಸಮುದಾಯದ ಜನರನ್ನು ಒಟ್ಟು ಸೇರಿಸಿ ಒಂದು ಕೂಟ ಮಾಡಿ, ನಾನು ಊರ ಗೌಡನಾಗಿದ್ದು, ನನಗೆ ಮದುವೆಯ ಆಮಂತ್ರಣ ನೀಡಿಲ್ಲ. ಈ ಕಾರಣದಿಂದ ಬಂಟಾ ಗೌಡ ಅವರ ಕುಟುಂಬವನ್ನು ಬಹಿಷ್ಕಾರ ಮಾಡುವಂತೆ ಆದೇಶ ಮಾಡುತ್ತೇನೆ ಎಂದು ಕೂಟದಲ್ಲಿ ಠರಾವು ಪಾಸ್ ಮಾಡಿರುವುದಾಗಿ ಆರೋಪಿಸಲಾಗಿದೆ. ಈ ಠರಾವಿನಂತೆ ಹಾಲಕ್ಕಿ ಸಮುದಾಯದ ಯಾವುದೇ ವ್ಯಕ್ತಿಯೂ ಈ ಕುಟುಂಬದೊಂದಿಗೆ ಮಾತನಾಡುವಂತಿಲ್ಲ, ಕಿರಾಣಿ ಅಂಗಡಿಗಳಲ್ಲಿ ವಸ್ತುಗಳನ್ನು ನೀಡುವಂತಿಲ್ಲ. ಒಂದು ವೇಳೆ ನಿಯಮ ಮೀರಿದರೆ ದಂಡ ವಿಧಿಸಲಾಗುತ್ತೆ.
ಅಲ್ಲದೇ, ಅವರಿಗೂ ಸಮುದಾಯದಿಂದ ಬಹಿಷ್ಕಾರ ಮಾಡಲಾಗುತ್ತೆ ಎಂದು ಎಚ್ಚರಿಸಿರುವುದಾಗಿ ಆರೋಪಿಸಲಾಗಿದೆ. ಇದನ್ನು ಪಾಲಿಸಿಕೊಂಡು ಬರುತ್ತಿರುವ ಹಾಲಕ್ಕಿ ಸಮುದಾಯದ ಇಲ್ಲಿಯವರೆಗೆ ಬಹಿಷ್ಕಾರಕ್ಕೆ ಒಳಪಟ್ಟ ಈ ಕುಟುಂಬದ ಜತೆ ಯಾವುದೇ ಸಂಪರ್ಕ, ವ್ಯವಹಾರ ನಡೆಸುತ್ತಿಲ್ಲ ಎಂದೆನ್ನಲಾಗಿದೆ. ಅಂದಹಾಗೆ, ಆನಂದುಗೌಡ ಕುಟುಂಬ ಮತ್ತು ಬಂಟಾಗೌಡ ಕುಟುಂಬಕ್ಕೆ ಈ ಹಿಂದೆ ಆಸ್ತಿ ವಿಚಾರಕ್ಕೆ ಗಲಾಟೆಯಾಗಿತ್ತು.
ಬಂಟಾ ಗೌಡ ಕುಟುಂಬ ನಮ್ಮ ಸಂಪ್ರದಾಯಕ್ಕೆ ದ್ರೋಹಾ ಮಾಡಿದ್ದಾರೆ ಎಂದು ಸಭೆ ಸೇರಿಸಿ ಸಮುದಾಯದಿಂದ ಬಂಟಾಗೌಡ ಕುಟುಂಬವನ್ನ ಬಹಿಷ್ಕಾರ ಮಾಡಿದ್ದಾನೆ ಎಂದೆನ್ನಲಾಗಿದೆ.