ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕ ಲಿಂಗುಸ್ವಾಮಿ ಅವರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೋಟ್ಯಂತರ ರೂಪಾಯಿ ಸಾಲ ಪಡೆದು, ಹಣ ಹಿಂದಿರುಗಿಸದೇ ಅವರು ಕಿರಿಕ್ ಮಾಡಿಕೊಂಡಿದ್ದಾರೆ. ಚೆಕ್ ಬೌನ್ಸ್ ಪ್ರಕರಣದಲ್ಲಿ ಅವರು ಅಪರಾಧ ಮಾಡಿರುವುದು ಸಾಬೀತಾಗಿದ್ದು, 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.
ವರ್ಷಗಳಿಂದ ಲಿಂಗುಸ್ವಾಮಿ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಅನೇಕ ಹಿಟ್ ಸಿನಿಮಾಗಳನ್ನು ನೀಡಿದ ಖ್ಯಾತಿ ಅವರಿಗೆ ಇದೆ. ಸಹೋದರನ ಜೊತೆಗೂಡಿ ಅವರು ಸಿನಿಮಾ ನಿರ್ಮಾಣ ಸಂಸ್ಥೆಯನ್ನೂ ನಡೆಸುತ್ತಿದ್ದಾರೆ. ‘ಆನಂದಂ’, ‘ರನ್’, ‘ಸಂಡಕೋಳಿ’, ‘ಭೀಮ’, ‘ಪೈಯಾ’ ಮುಂತಾದ ಸಿನಿಮಾಗಳನ್ನು ನಿರ್ದೇಶಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಇತ್ತೀಚೆಗೆ ಅವರು ನಿರ್ದೇಶನ ಮಾಡಿದ ‘ದಿ ವಾರಿಯರ್’ ಚಿತ್ರ ಕೂಡ ಗಮನ ಸೆಳೆದಿದೆ.
ಪಿವಿಪಿ ಎಂಬ ಕಂಪನಿಯಿಂದ 1.03 ಕೋಟಿ ರೂಪಾಯಿ ಸಾಲ ಪಡೆದಿದ್ದರು. ಸಾಲ ವಾಪಸ್ ನೀಡುವಾಗ 35 ಲಕ್ಷ ರೂಪಾಯಿ ಚೆಕ್ ನೀಡಿದ್ದರು. ಆದರೆ ಅವರ ಬ್ಯಾಂಕ್ ಖಾತೆಯಲ್ಲಿ ಅಗತ್ಯ ಹಣ ಇಲ್ಲದ ಕಾರಣ ಚೆಕ್ ಬೌನ್ಸ್ ಆಗಿದೆ. ಈ ಸಂಬಂಧ ಪಿವಿಪಿ ಕಂಪನಿಯವರು ಕೋರ್ಟ್ ಮೆಟ್ಟಲು ಏರಿದರು. ಈ ಪ್ರಕರಣದ ತೀರ್ಪು ಬಂದಿದ್ದು, ಲಿಂಗುಸ್ವಾಮಿ ಮತ್ತು ಅವರ ಸಹೋದರನಿಗೆ 6 ತಿಂಗಳು ಜೈಲು ಶಿಕ್ಷೆ ವಿಧಿಸಲಾಗಿದೆ.