ಮಾಲೀಕನ ಸಮೇತ ವಾಹನ ಟೊಯಿಂಗ್…!!!

ನಗರಗಳಲ್ಲಿ ವಾಹನ ನಿಲ್ಲಿಸಲು ಸರಿಯಾದ ಜಾಗಗಳೇ ಇರುವುದಿಲ್ಲ. ಇದರಿಂದ ಕೆಲವೊಮ್ಮೆ ವಾಹನ ಸವಾರರು ಎಲ್ಲೆಂದರಲ್ಲಿ ವಾಹನ ನಿಲ್ಲಿಸಿ ತೆರಳುತ್ತಾರೆ. ಇದು ಸಂಚಾರ ಅಡಚಣೆಗೂ ಕಾರಣವಾಗುತ್ತದೆ. ಇದರಿಂದ ಕಂಗೆಟ್ಟ ಅಧಿಕಾರಿಗಳು ಹೀಗೆ ಎಲ್ಲೆಂದರಲ್ಲಿ ನೋ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ ವಾಹನಗಳನ್ನು ಕ್ರೇನ್ ಮೂಲಕ ಟೋಯಿಂಗ್ ಮಾಡಿ ಸ್ಥಳದಿಂದ ಹೊತ್ತೊಯ್ಯುತ್ತಾರೆ. ಹೀಗೆ ಎಲ್ಲೆಂದರಲ್ಲಿ ವಾಹನ ನಿಲ್ಲಿಸುವ ಸವಾರರಿಗೆ ಹೀಗೆ ಬುದ್ಧಿ ಕಲಿಸಲು ಆಡಳಿತ ಮುಂದಾಗಿದೆ.

ಇದು ಹಳೆ ವಿಚಾರ ಇದರಲ್ಲೇನು ವಿಶೇಷ ಅಂತ ಕೇಳ್ತಿದ್ದೀರಾ. ಮಹಾರಾಷ್ಟ್ರದ ನಾಗಪುರದಲ್ಲಿಯೂ ಹೀಗೆಯೇ ಪೊಲೀಸರು ರಸ್ತೆ ಬದಿ ಎರ್ರಾಬಿರಿಯಾಗಿ ನಿಲ್ಲಿಸಿದ್ದ ವಾಹನ ಟೋಯಿಂಗ್‌ಗೆ ಮುಂದಾಗಿದ್ದಾರೆ. ಆದರೆ ಎಷ್ಟರಲ್ಲಾಗಲೇ ಸ್ಕೂಟರ್‌ ಮಾಲೀಕ ಸ್ಥಳಕ್ಕೆ ಬಂದಿದ್ದು, ಸ್ಕೂಟರ್‌ನ್ನು ಬಿಡುವಂತೆ ಕೇಳಿ ಕೊಂಡಿದ್ದಾರೆ. ಅಲ್ಲದೇ ತಮ್ಮ ಸ್ಕೂಟರ್ ಏರಿ ಕುಳಿತುಕೊಂಡಿದ್ದಾರೆ. ಇತ್ತ ಸ್ಕೂಟರ್‌ ಎತ್ತಾಕಿಕೊಂಡು ಹೋಗಲು ಸ್ಕೂಟರ್‌ಗೆ ಕೇಬಲ್ ಕಟ್ಟಿದ್ದ ಸಿಬ್ಬಂದಿ ಸ್ಕೂಟರ್‌ ಸವಾರನ ಮನವಿಗೆ ಕರಗದೇ ಆತ ಇರುವಾಗಲೇ ಸ್ಕೂಟರ್‌ನ್ನು ಮೇಲೆತ್ತಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಮಹಾರಾಷ್ಟ್ರದ ನಾಗಪುರ ಜಿಲ್ಲೆಯ ಸರ್ದಾರ್ ಬಜಾರ್‌ನಲ್ಲಿ ಈ ವಿಡಿಯೋ ಸೆರೆ ಆಗಿದ್ದು, ನೋಡುಗರಲ್ಲಿ ನಗೆಯುಕ್ಕಿಸುತ್ತಿದೆ. ಸರ್ದರ್‌ ಬಜಾರ್‌ನ ಅಂಜುಮನ್ ಸಂಕೀರ್ಣದ ಬಳಿ ನೋ ಪಾರ್ಕಿಂಗ್‌ ಸ್ಥಳದಲ್ಲಿದ್ದ ವಾಹನಗಳನ್ನು ಟ್ರಾಫಿಕ್ ಪೊಲೀಸರು ಹಾಗೂ ಟೋಯಿಂಗ್ ಸಿಬ್ಬಂದಿ ಟೋಯಿಂಗ್ ಟ್ರಕ್‌ ಮೂಲಕ ತೆರವು ಮಾಡಲು ಮುಂದಾಗಿದ್ದಾರೆ. ಎರಡು ಮೂರು ದ್ವಿಚಕ್ರವಾಹನಗಳನ್ನು ಈಗಾಗಲೇ ಟ್ರಕ್‌ಗೆ ಲೋಡ್ ಮಾಡಿದ್ದ ಸಿಬ್ಬಂದಿ ಮತ್ತೊಂದು ವಾಹನವನ್ನು ಲೋಡ್ ಮಾಡಲು ಮುಂದಾಗಿ ಅದಕ್ಕೆ ಕೇಬಲ್‌ನ್ನು ಕಟ್ಟಿದ್ದಾರೆ. ಅಷ್ಟರಲ್ಲಿ ಅದರ ಮಾಲೀಕ ವಿಷಯ ತಿಳಿದು ಎದ್ನೋ ಬಿದ್ನೋ ಅಂತ ಅಲ್ಲಿಗೆ ಓಡಿ ಬಂದಿದ್ದು, ಸ್ಕೂಟರ್‌ನ್ನು ಟೋ ಮಾಡದಂತೆ ಕೇಳಿದ್ದಾನೆ. ಆದರೆ ಅಧಿಕಾರಿಗಳು ಈತನ ಮಾತಿಗೆ ತಲೆಕೆಡಿಸಿಕೊಂಡಿಲ್ಲ. ಇದರಿಂದ ಆತ ಕೂಡಲೇ ತನ್ನ ಸ್ಕೂಟರ್ ಮೇಲೆ ಕುಳಿತಿದ್ದಾನೆ. ಈತನ ಸಮೇತ ಟೋಯಿಂಗ್ ಸಿಬ್ಬಂದಿ ಸ್ಕೂಟರ್‌ನ್ನು ಮೇಲೆತ್ತಿದ್ದಾರೆ. ಈ ಘಟನೆಯನ್ನು ಯಾರೋ ನೋಡುಗರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು ವೈರಲ್ ಆಗಿದೆ.

Discover more from Valmiki Mithra

Subscribe now to keep reading and get access to the full archive.

Continue reading