ಬೆಂಗಳೂರು: ಎಸ್‍ಡಿಪಿಐ, ಪಿಎಫ್‍ಐ ಸಂಘಟನೆಗಳಿಂದ ಸಮಾಜದ ಸ್ವಾಸ್ಥ್ಯ ಹಾಳಾಗುತ್ತಿದೆ. ಸಾಮರಸ್ಯ ಕದಡುತ್ತಿವೆ ಎಂಬ ಆರೋಪಗಳಿವೆ. ಸಾಕ್ಷ್ಯಗಳಿದ್ದರೆ ಕೂಡಲೇ ಆ ಸಂಘಟನೆಗಳನ್ನು ನಿಷೇಧ ಮಾಡಿ ಎಂದು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಸವಾಲು ಹಾಕಿದರು.
ಒಂದೆಡೆ ಬಿಜೆಪಿಯವರು ಪ್ರಚೋದನೆ ನೀಡುತ್ತಾರೆ ಮತ್ತೊಂದೆಡೆ ಎಸ್‍ಡಿಪಿಐ, ಪಿಎಫ್‍ಐನಂತಹ ಸಂಘಟನೆಗಳು ಸಾಮರಸ್ಯ ಹಾಳು ಮಾಡುತ್ತಿವೆ. ಇದಕ್ಕೂ ಕಾಂಗ್ರೆಸ್‍ಗೂ ಯಾವುದೇ ಸಂಬಂಧವಿಲ್ಲ. ಆದರೂ ನಮ್ಮ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಾರೆ. ಬಿಜೆಪಿ ಸರ್ಕಾರದ ಬಳಿ ಸಾಮಥ್ರ್ಯ ಕದಡುವ ಸಂಘಟನೆಗಳ ಕುರಿತು ಮಾಹಿತಿ ಇದ್ದರೆ ನಿಷೇಧ ಮಾಡಲು ಸಮಸ್ಯೆ ಏನು ಎಂದು ಪ್ರಶ್ನಿಸಿದರು.
ಪದೇ ಪದೇ ಸುಳ್ಳನ್ನೇ ಸಮರ್ಥನೆ ಮಾಡಿ ಕಾಂಗ್ರೆಸ್ ಮೇಲೆ ಗೂಬೆ ಕೂರಿಸುವ ಯತ್ನ ಬಿಜೆಪಿ ಮಾಡುತ್ತಿದೆ. ವೀರ ಸಾರ್ವಕರ್ ಯಾವ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು ಎಂಬುದನ್ನು ತೋರಿಸಲಿ. ಅವರು ಸ್ವಾತಂತ್ರ್ಯ ಹೋರಾಟದಲ್ಲೇ ಭಾಗವಹಿಸಿರಲಿಲ್ಲ. ಬಿಜೆಪಿಯವರದು ನಕಲಿ ದೇಶಭಕ್ತಿ ಎಂದು ಕಿಡಿಕಾರಿದರು.
ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಜವಹಾರ್ ಲಾಲ್ ನೆಹರು ಅವರ ಫೋಟೋ ಹಾಕದೆ ಇವರು ಯಾವ ಸಂದೇಶ ನೀಡುತ್ತಾರೆ. ದೇಶ ವಿಭಜನೆಗೆ ನೆಹರು ಕಾರಣ ಎಂದು ರಾಜ್ಯ ಬಿಜೆಪಿಗರು ಹೇಳುವುದಾದರೆ ಪ್ರಧಾನಿ ನರೇಂದ್ರಮೋದಿ ಕೆಂಪುಕೋಟೆಯಲ್ಲಿ ಭಾಷಣ ಮಾಡುವಾಗ ನೆಹರು ಅವರ ಸ್ವಾತಂತ್ರ್ಯ ಹೋರಾಟದ ಕೊಡುಗೆಯನ್ನು ಸ್ಮರಿಸಿದ್ದೇಕೆ? ಬಿಜೆಪಿಯವರಿಗೆ ಇತಿಹಾಸ ಗೊತ್ತಿಲ್ಲ. ಸ್ವಾತಂತ್ರ್ಯ ಹೋರಾಟ ಎಂದರೆ ಏನೂ ಎಂಬುದು ಗೊತ್ತಿಲ್ಲ, ಸ್ವಾತಂತ್ರ್ಯ ಹೋರಾಟದಲ್ಲೂ ಅವರು ಭಾಗವಹಿಸಿಲ್ಲ ಎಂದು ದೂರಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್‍ಎಸ್‍ಎಸ್‍ನ ಕೈಗೊಂಬೆ. ದಕ್ಷಿಣಕನ್ನಡದಲ್ಲಿ ಹತ್ಯೆ ನಡೆದಾಗ ಪ್ರವೀಣ್ ಅವರ ಮನೆಗೆ ಭೇಟಿ ನೀಡಿದ್ದ ಮುಖ್ಯಮಂತ್ರಿ ಪರಿಹಾರ ಕೊಟ್ಟರು. ಅಲ್ಲಿ ಹತ್ಯೆಯಾದ ಅಲ್ಪಸಂಖ್ಯಾತ ಸಮುದಾಯದವರಿಗೆ ಈವರೆಗೂ ಪರಿಹಾರ ಕೊಟ್ಟಿಲ್ಲ. ಜನರ ತೆರಿಗೆ ಹಣದಲ್ಲಿ ಇವರು ಪಕ್ಷಪಾತ ಮಾಡುತ್ತಿದ್ದಾರೆ ಎಂದರು.