ಬೆಂಗಳೂರು: ತಾಜ್ ವೆಸ್ಡ್ ಎಂಡ್ನಲ್ಲಿ ಕುಳಿತು ಸರ್ಕಾರ ನಡೆಸಿದ ಕುಮಾರಸ್ವಾಮಿ ಅವರೇ, ಅಂದು ತಮ್ಮನ್ನು ವಿಧಾನ ಸೌಧದಲ್ಲಿ ಹುಡುಕಿದರೆ ಸಿಗಲಿಲ್ಲ, ಕಷ್ಟ ಹೇಳಿಕೊಳ್ಳಲು ಬಂದ ಜನತೆಗೆ ತಾಜ್ ವೆಸ್ಟ್ ಎಂಡ್ ಒಳಗೆ ಬಿಡಲಿಲ್ಲ. ಎಲ್ಲಿದ್ದೀರಿ ಎಂದು ಜನ ಕೇಳಿದಾಗ ಉತ್ತರಿಸಲಿಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ್ ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಆಕ್ರೋಶ ಹೊರಹಾಕಿದರು.
ತಂತಿಯ ಮೇಲೆ ನಡೆಯುತ್ತಿದ್ದೇನೆ ಎನ್ನುವಾಗ ನಾಡಿನ ಜನತೆಗೆ ಮೋಸ ಮಾಡಿದ್ದೇನೆಂಬ ಪಾಪ ಪ್ರಜ್ಞೆ ಕಾಡಲಿಲ್ಲವೇ..? ಕುರ್ಚಿಯಾಸೆಗೆ ಕಳ್ಳರ ಜತೆಗೂ ಸೇರುತ್ತೇನೆಂಬುದನ್ನು ಸಾಬೀತುಪಡಿಸಿದ ತಮ್ಮ ಕಳ್ಳಾಟಗಳನ್ನು ಎಷ್ಟು ದಿನ ಬಚ್ಚಿಡಬಲ್ಲಿರಿ..? ಗೆದ್ದಿದ್ದು ಮೂರು ಮತ್ತೊಂದು ಸೀಟ್ ಆದರೂ ಗೆದ್ದಲು ಕಟ್ಟಿದ ಹುತ್ತದಲ್ಲಿ ಸೇರಿಕೊಂಡ ಹಾವಿನಂತೆ ಕಳ್ಳದಾರಿಯಲ್ಲಿ ಸಿಎಂ ಆದದ್ದು ಯಾರು..? ಎಂದು ಪ್ರಶ್ನಿಸಿದ್ದಾರೆ.
ಶ್ರೀಗಳ ಫೋನ್ ಕದ್ದಾಲಿಕೆ ಮಾಡಿದ ಕುಮಾರಸ್ವಾಮಿ ಅವರನ್ನು ಎಲ್ಲಿದ್ದೀರಿ ಎಂದು ಕೇಳಿದರೆ ವಿಷ ಸರ್ಪದಂತೆ ಬುಸುಗುಡುವುದೇಕೆ..? ಕಾಂಗ್ರೆಸ್ ಜೊತೆ ಸೇರಿ ಶ್ರೀಮತಿ ಸುಮಲತಾ ಅಂಬರೀಷ್ ಅವರನ್ನು ಸೋಲಿಸಲು ಹಣದ ಹೊಳೆಯನ್ನೇ ಹರಿಸಿದ ಕುಮಾರಸ್ವಾಮಿಯವರೆಷ್ಟು ಶುದ್ಧಹಸ್ತರು..? ಅವರಾಡುವ ಮಾತೆಷ್ಟು ಸತ್ಯ ಎಂದು ಕೇಳಿದರೆ ಕಳ್ಳರಂತೆ ನುಣುಚಿಕೊಳ್ಳುವುದೇಕೆ..? ಐಎಂಎ ಹಗರಣದಲ್ಲಿ ತಮಗೂ ಪಾಲು ನೀಡಲು ಹಣ ಸಂಗ್ರಹವಾಗಿತ್ತಂತೆ! ಎಷ್ಟು ತಲುಪಿದೆ? ಇನ್ನೆಷ್ಟು ಬರಬೇಕು? ಕುಮಾರಸ್ವಾಮಿಯವರ ಬುಟ್ಟಿಯಲ್ಲಿ ಯಾವ ಹಾವಿದೆ ಎಂದು ನಾಡಿನ ಜನತೆಗೇ ಗೊತ್ತಿದೆ. ಸುಮ್ಮನೆ ಹಾವಿದೆ, ಹಾವಿದೆ ಎಂದು ಊರೆಲ್ಲಾ ಡಂಗುರ ಸಾರಿ ಹೆದರಿಸುವ ತಂತ್ರವೇಕೆ? ಎಲ್ಲಿಟ್ಟಿದ್ದೀರಿ ನಿಮ್ಮ ದಾಖಲೆಗಳನ್ನು? ಗೆದ್ದಲು ಹಿಡಿಯುವ ಮುನ್ನ ಬಹಿರಂಗಪಡಿಸಿ ಎಂದರು.