ಥಿಯೇಟರ್‌ಗಳಲ್ಲಿ ‘ವಿಕ್ರಾಂತ್ ರೋಣ’ನ ಆರ್ಭಟ ಮುಂದುವರೆದಿದೆ. ಜುಲೈ 28ರಂದು ವಿಶ್ವದಾದ್ಯಂತ ತೆರೆಗಪ್ಪಳಿಸಿದ್ದ ಸಿನಿಮಾ ಕೋಟಿ ಕೋಟಿ ರೂ. ಕಲೆಕ್ಷನ್ ಮಾಡಿ ಸದ್ದು ಮಾಡ್ತಿದೆ. ಇಂತಹ ಹೊತ್ತಲ್ಲೇ ನಿರ್ಮಾಪಕರು ಅದೊಂದು ಕಾರಣಕ್ಕೆ ಸಿನಿಮಾ 3D ವರ್ಷನ್ ಟಿಕೆಟ್ ದರ ಇಳಿಸಿದ್ದಾರೆ.
ಅನೂಪ್ ಭಂಡಾರಿ ನಿರ್ದೇಶನದ ಆಕ್ಷನ್ ಅಡ್ವೆಂಚರ್ ಥ್ರಿಲ್ಲರ್ ಸಿನಿಮಾ ‘ವಿಕ್ರಾಂತ್ ರೋಣ’. ಜುಲೈ 28ರಂದು ವಿಶ್ವದಾದ್ಯಂತ ಸಿನಿಮಾ ರಿಲೀಸ್ ಆಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ರೋಣನ ಅವತಾರದಲ್ಲಿ ಅಭಿನಯ ಚಕ್ರವತ್ರಿ ಕಿಚ್ಚ ಸುದೀಪ್ ದರ್ಬಾರ್ ನೋಡಿ ಪರಭಾಷಿಕರು ಬಹುಪರಾಕ್ ಹೇಳ್ತಿದ್ದಾರೆ. 3D ಕನ್ನಡಕದಲ್ಲಿ ರೋಣನ ಆರ್ಭಟ ಸಖತ್ ಕಿಕ್ ಕೊಟ್ಟಿದೆ. ಇನ್ನು ಪೈರಸಿ ಕಾಟವೂ ಚಿತ್ರಕ್ಕೆ ಎದುರಾಗಿತ್ತು.
ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದ ‘ವಿಕ್ರಾಂತ್ ರೋಣ’ ಸಿನಿಮಾ ಕಾರಣಾಂತರಗಳಿಂದ ತಡವಾಗಿ ರಿಲೀಸ್ ಆಯಿತು. ಲೇಟ್ ಆದರೂ ಲೇಟೆಸ್ಟ್ ಆಗಿ ಬಂದ ‘ರೋಣ’ನಿಗೆ ಒಳ್ಳೆ ಓಪನಿಂಗ್ ಸಿಕ್ತು. ಒಂದು ದಿನ ಮೊದಲೇ ವಿದೇಶಗಳಲ್ಲಿ ಸಿನಿಮಾ ಪ್ರೀಮಿಯರ್ ಶೋಗಳು ನಡೆದವು. ಸಲ್ಮಾನ್ ಖಾನ್, ರಾಜಮೌಳಿಯಂತಹ ದಿಗ್ಗಜರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದರು. ಎರಡನೇ ವಾರ ಸಿನಿಮಾ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಸಾಮಾನ್ಯವಾಗಿ ಯಾವುದೇ ಸಿನಿಮಾ ಟಿಕೆಟ್ ದರ ಇಳಿಸುವುದಿಲ್ಲ. ಆದರೆ ಅದೊಂದು ಕಾರಣಕ್ಕೆ ನಿರ್ಮಾಪಕರಾದ ಜಾಕ್ ಮಂಜು ‘ವಿಕ್ರಾಂತ್ ರೋಣ’ 3D ವರ್ಷನ್ ಟಿಕೆಟ್ ದರ ಇಳಿಸುವ ನಿರ್ಧಾರಕ್ಕೆ ಬಂದಿದ್ದಾರೆ. ಇಂದಿನಿಂದಲೇ ಹೊಸ ಟಿಕೆಟ್ ದರ ಜಾರಿಗೆ ಬಂದಿದೆ. ಒಂದು ದಿನ ಮೊದಲೇ ಇದನ್ನು ನಿರ್ಮಾಪಕರು ಘೋಷಿಸಿದ್ದರು.
ಹೊಸ ಟಿಕೆಟ್ ದರ ಎಷ್ಟು?
ಇಂದಿನಿಂದ ಜಾರಿಗೆ ಬರುವಂತೆ ‘ವಿಕ್ರಾಂತ್ ರೋಣ’ 3D ಟಿಕೆಟ್ ದರ ಇಳಿಕೆಯಾಗಿದೆ. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ 100 ರೂ. ಹಾಗೂ ಮಲ್ಟಿಫ್ಲೆಕ್ಸ್‌ಗಳಲ್ಲಿ 150ರೂ. ಟಿಕೆಟ್ ದರ ನಿಗದಿಪಡಿಸಲಾಗಿದೆ. ಹೆಚ್ಚು ಜನ ಸಿನಿಮಾ ನೋಡಲಿ ಅನ್ನುವ ಉದ್ದೇಶದಿಂದ ನಿರ್ಮಾಪಕರಾದ ಜಾಕ್ ಮಂಜು ಈ ನಿರ್ಧಾರಕ್ಕೆ ಬಂದಿದ್ದಾರೆ.
ಟಿಕೆಟ್ ದರ ಇಳಿಸಿದ್ದೇಕೆ?
“ನಮ್ಮ ‘ವಿಕ್ರಾಂತ್ ರೋಣ’ ಚಿತ್ರವನ್ನು 3Dಯಲ್ಲಿ ಲಕ್ಷಾಂತರ ಜನ ನೋಡಿ ಮೆಚ್ಚಿಕೊಂಡಿರುವುದು ಸಂತಸ ತಂದಿದೆ. ಚಿತ್ರ ನಿರ್ಮಿಸುವಾಗ ಪ್ರತಿ ನಿರ್ಮಾಪಕನ ಆಸೆ ಒಂದೇ, ಹೆಚ್ಚು ಜನ ಥಿಯೇಟರ್‌ನಲ್ಲಿ ಚಿತ್ರ ವೀಕ್ಷಿಸಿ ಮೆಚ್ಚಿಕೊಂಡರೆ ಸಾಕು. ಚಿತ್ರ ಚೆನ್ನಾಗಿದ್ದರೂ ಥಿಯೇಟರ್ ಅಲ್ಲದೇ ಬಹಳಷ್ಟು ಜನ ಪೈರಸಿಯಲ್ಲಿ ನೋಡುತ್ತಿದ್ದಾರೆ. ಈ ನಿಟ್ಟಿನಿಂದ ಲಾಭ ಪಕ್ಕಕ್ಕಿಟ್ಟು ನಮ್ಮ ಕರ್ನಾಟಕದ ಜನತೆ ‘ವಿಕ್ರಾಂತ್ ರೋಣ’ 3D ಅನ್ನು ಇನ್ನೂ ಹೆಚ್ಚಾಗಿ ಚಿತ್ರಮಂದಿರದಲ್ಲೇ ನೋಡಲಿ ಎಂದು ಈ ನಿರ್ಧಾರ ಕೈಗೊಂಡಿದ್ದೇನೆ” ಎಂದು ನಿರ್ಮಾಪಕರಾದ ಜಾಕ್ ಮಂಜು ಫಿಲ್ಮಿ ಬೀಟ್‌ಗೆ ತಿಳಿಸಿದ್ದಾರೆ.
ಕೆಲವೆಡೆ ಟಿಕೆಟ್ ದರ ಇನ್ನು ಇಳಿಕೆ ಆಗಿಲ್ಲ!
‘ವಿಕ್ರಾಂತ್ ರೋಣ’ 3D ವರ್ಷನ್‌ಗೆ ಒಳ್ಳೆ ರೆಸ್ಪಾನ್ಸ್ ಸಿಕ್ತಿದ್ದು, ಇನ್ನು ಹೆಚ್ಚು ಜನ ಬಂದು ಸಿನಿಮಾ ನೋಡಲಿ ಅನ್ನುವ ಕಾರಣಕ್ಕೆ ಟಿಕೆಟ್ ದರ ಇಳಿಸಲಾಗಿದೆ. ಆದರೆ ಕೆಲವು ಥಿಯೇಟರ್ ಮಾಲೀಕರು ಮತ್ತು ಮಲ್ಟಿಫ್ಲೆಕ್ಸ್‌ಗಳಲ್ಲಿ ಟಿಕೆಟ್ ದರ ಇಳಿಸಿಲ್ಲ. ಈ ಬಗ್ಗೆ ನಿರ್ಮಾಪಕರ ಜಾಕ್ ಮಂಜು “ಎಲ್ಲರೂ 3Dಯಲ್ಲಿ ಸಿನಿಮಾ ನೋಡಲಿ ಅನ್ನುವ ಕಾರಣಕ್ಕೆ ನಾವು ಟಿಕೆಟ್ ದರ ಇಳಿಸಿದ್ದೇವೆ. ಬಹುತೇಕ ಎಲ್ಲಾ ಕಡೆ ಹೊಸ ದರ ಜಾರಿಗೆ ಬಂದಿದೆ. ಇನ್ನು ಕೆಲವೆಡೆ ಮೊದಲಿನ ದರವೇ ಮುಂದುವರೆದಿರುವುದು ತಿಳಿಯಿತು. ಅವರಿಗೂ ಸೂಚನೆ ನೀಡಿ ಮೇಲ್ ಕಳುಹಿಸುತ್ತಿದ್ದೇವೆ” ಎಂದು ಮಾಹಿತಿ ನೀಡಿದ್ದಾರೆ.