’ಮಿಸ್ ನಂದಿನಿ’ ಚಿತ್ರದ ಟ್ರೇಲರ್ ಬಿಡುಗಡೆ ಯಾಗಿದ್ದು ಅಭಿಮಾನಿಗಳು ಡಾ.ಪ್ರಿಯಾಂಕಾ ಉಪೇಂದ್ರ ಅವರಿಗೆ ’ಅಭಿನಯ ಅಪ್ಸರೆ’ ಬಿರುದು ನೀಡಿ ಗೌರವಿಸಿದ್ದಾರೆ.
ಡಾ.ಪ್ರಿಯಾಂಕಾ ಉಪೇಂದ್ರ ಮಾತನಾಡಿ ಸುಂದರ ಚಿತ್ರವಾಗಿದೆ. ಸರ್ಕಾರಿ ಶಾಲೆ ಶಿಕ್ಷಕಿಯಾಗಿ ಕಾಣಿಸಿಕೊಂಡಿದ್ದೇನೆ. ಇಂತಹ ಪಾತ್ರಕ್ಕೆ ನನ್ನನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ತುಂಬಾ ಥಾಂಕ್ಸ್. ಕನ್ನಡ ಅಷ್ಟು ಸ್ಪಷ್ಟವಾಗಿ ಮಾತನಾಡಲು ಬಾರದಿದ್ದರೂ ನಿರ್ದೇಶಕರು ಸೆಟ್‌ನಲ್ಲಿ ಹೇಳಿಕೊಡುತ್ತಿದ್ದರು. ಮಕ್ಕಳ ಜತೆ ನಟಿಸುವುದೇ ಒಂದು ರೀತಿಯ ಖುಷಿ ಸಿಗುತ್ತದೆ. ಅವರುಗಳ ಕಾಮಿಡಿ ಟ್ರ್ಯಾಕ್ ಚೆನ್ನಾಗಿ ಮೂಡಿಬಂದಿದೆ. ತುಂಬಾ ಸಿನಿಮಾಗಳಲ್ಲಿ ಮಾಡುತ್ತಿದ್ದರೂ ಇಂತಹ ಚಿತ್ರದಲ್ಲಿ ಅಭಿನಯಿಸಿರುವುದು ಸಂತಸ ತಂದಿದೆ. ಸರ್ಕಾರಿ ಶಾಲೆಯಲ್ಲೇ ಚಿತ್ರೀಕರಣ ಮಾಡಲಾಗಿದೆ. ಇಂತಹ ಚಿತ್ರಕ್ಕೆ ನಾವೆಲ್ಲರೂ ಪ್ರೋತ್ಸಾಹ ಕೊಡಬೇಕು. ಅಭಿಮಾನಿಗಳು ಪ್ರೀತಿಯಿಂದ ಬಿರುದನ್ನು ನೀಡಿದ್ದಾರೆ. ಅವರಿಂದಲೇ ಚಿತ್ರರಂಗದಲ್ಲಿ 25 ವರ್ಷ ಸೇವೆ ಸಲ್ಲಿಸಿ ಇಲ್ಲಿಯ ತನಕ ಬಂದಿರುವುದು ಅಂತ ಹೇಳಿದರು.
ಇಂದಿನ ಸರ್ಕಾರಿ ಶಾಲೆಯ ಸ್ಥಿತಿಗತಿಗಳು ಹಾಗೂ ಅಭಿವೃದ್ದಿ ಕುರಿತಂತೆ ಸಿನಿಮಾ ಮಾಡಿದ್ದಾರೆ. ಶಿಕ್ಷಣ ಉದಾರವಾಗಿರುವುದರಿಂದ ಖಾಸಗಿ ಶಾಲೆಯನ್ನು ವಿರೋಧಿಸುವ ಹಾಗಿಲ್ಲ. ಹಳ್ಳಿಯಲ್ಲಿ ಒಂದು ಖಾಸಗಿ ಶಾಲೆ ತೆರೆದರೆ, ಅದು ಹತ್ತು ಸರ್ಕಾರಿ ಶಾಲೆಯನ್ನು ಕಬಳಿಸುತ್ತದೆ. ಹಿಂದುಳಿದ, ದಲಿತ ವರ್ಗ ಇರುವ ಕಡೆ ಶಾಲೆಗಳು ಕುಂಠಿತವಾಗಿದೆ. ಇದರ ಬಗ್ಗೆ ಚಿಂತನೆ ನಡೆಸಬೇಕಾಗಿದೆ. ಶಿಕ್ಷಣ ಇಲಾಖೆ ಒಬ್ಬ ವಿದ್ಯಾರ್ಥಿಗೆ 4000 ಹಣವನ್ನು ಖರ್ಚು ಮಾಡುತ್ತಿದೆ. ಹಳ್ಳಿಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ಶಾಲೆಯಲ್ಲಿ ಮಕ್ಕಳ ಕೊರತೆ ಅದು ಒಂದು ಕಾರಣವಾಗಿದೆ. ಎಲ್ಲವನ್ನು ಸರ್ಕಾರವೇ ನೋಡಿಕೊಳ್ಳಬೇಕು ಅಂದರೆ ಕಷ್ಟವಾಗುತ್ತದೆ. ಅಂತಹ ಪರಿಕಲ್ಪನೆಯನ್ನು ನಾವುಗಳು ಮೊದಲು ಬಿಡಬೇಕು. ಶಾಲೆಯಲ್ಲಿ ಓದಿರತಕ್ಕಂಥ ವಿದ್ಯಾರ್ಥಿಗಳು ಶಾಲೆಯ ಬಗ್ಗೆ ಗಮನ ಹರಿಸಿದರೆ ಅಭಿವೃದ್ದಿಗೊಳ್ಳುತ್ತದೆ ಎಂದು ಕಡೂರು ಶಾಸಕ ಬೆಳ್ಳಿಪ್ರಕಾಶ್ ಅಭಿಪ್ರಾಯಪಟ್ಟರು.
ಶ್ರೀ ವಿಜಯ್ ಫಿಲಿಂಸ್ ಮುಖಾಂತರ ನೀಲಕಂಠಸ್ವಾಮಿ ನಿರ್ಮಾಣ ಮಾಡುತ್ತಿದ್ದಾರೆ. ಆಶಾ ಸಹ ನಿರ್ಮಾಪಕರು.
ಎಲ್ಲಾ ಮಕ್ಕಳು ಸರ್ಕಾರಿ ಶಾಲೆಯಲ್ಲೆ ಓದಬೇಕೆಂದು ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಲಾಗಿದೆ. ಖಾಸಗಿ ಶಾಲೆಯಲ್ಲಿ ಇದ್ದಂತ ಗುಣಮಟ್ಟವು ಸರ್ಕಾರಿ ಶಾಲೆಯಲ್ಲಿ ಇರಬೇಕೆಂದು ಹೇಳಲಾಗಿದೆ. ಇದಕ್ಕೆ ಸರ್ಕಾರವು ಯಾವ ರೀತಿ ಸ್ಪಂದಿಸುತ್ತದೆ ಎನ್ನುವುದೇ ಚಿತ್ರದ ಸಾರಾಂಶ. ಕಾರವಾರ, ಬಾಗಲಕೋಟೆ, ಬೆಂಗಳೂರು ಕಡೆಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ ಎಂಬುದಾಗಿ ಮಾಹಿತಿಯನ್ನು ನಿರ್ದೇಶಕ ಗುರುದತ್.ಎಸ್.ಆರ್ ನೀಡಿದರು.
ಮುಖ್ಯಮಂತ್ರಿಯಾಗಿ ಅಭಿನಯಿಸಿರುವ ಸಿದ್ಲಿಂಗುಶ್ರೀಧರ್, ಶಿಕ್ಷಕರಾಗಿರುವ ಅಪ್ಪಣ್ಣ, ರಘುಪಾಂಡೇಶ್ವರ್, ಅಧಿಕಾರಿಯಾಗಿರುವ ಯತಿರಾಜ್, ಶಾಸಕನಾಗಿ ಡ್ಯಾನಿಕುಟ್ಟಪ್ಪ, ವಕೀಲೆ ಲಕ್ಷೀಸಿದ್ದಯ್ಯ, ಚಿತ್ರಕ್ಕೆ ಸಾಹಿತ್ಯ ಮತ್ತು ಸಂಗೀತ ಒದಗಿಸಿರುವ ಸಾಯಿಸರ್ವೇಶ್ ಮುಂತಾದವರು ಅನುಭವಗಳನ್ನು ಹಂಚಿಕೊಂಡರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಬಾ.ಮ.ಹರೀಶ್, ನಟಿ,ನಿರ್ದೇಶಕಿ ಶೀತಲ್‌ಶೆಟ್ಟಿ ತಂಡಕ್ಕೆ ಶುಭ ಹಾರೈಸಲು ಆಗಮಿಸಿದ್ದರು. ’ಕನ್ನಡ ಬೆಳಸೋರ್ ಬೇಡ ಬಳಸೋರ್ ಬೇಕು’ ಎಂಬ ಅಡಿಬರಹ ಇರುವ ಚಿತ್ರವು ಸೆಪ್ಟಂಬರ್ ತಿಂಗಳಲ್ಲಿ ತೆರೆಕಾಣುವ ಸಾದ್ಯತೆ ಇದೆ.