ಬೆಂಗಳೂರು: ವಿಶ್ವ ವೈದ್ಯರ ದಿನದ ಪ್ರಯುಕ್ತ ವೈದ್ಯರಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ ಬೆಂಗಳೂರಿನಲ್ಲಿ ಒಂದು ವಿಶಿಷ್ಟ ಕಾರ್ಯಕ್ರಮ ನಡೆಯಿತು.
ಹೆಸರಾಂತ ವೈದ್ಯ ಮತ್ತು ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ ಬಿಧನ್ ಚಂದ್ರ ರಾಯ್ ಅವರ ಜನ್ಮದಿನದ ಪ್ರಯುಕ್ತ ಹಾಗೂ ಅವರ ಕೊಡುಗೆಗಳನ್ನು ಗೌರವಿಸಲು ಜುಲೈ 1 ರಂದು ರಾಷ್ಟ್ರೀಯ ವೈದ್ಯರ ದಿನವೆಂದು ಆಚರಿಸಲಾಗುತ್ತದೆ. ವಿಶ್ವ ವೈದ್ಯರ ದಿನದ ಪ್ರಯುಕ್ತ ವೈದ್ಯರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಬೆಂಗಳೂರಿನ ರಾಜಾಜಿನಗರದ NU ಆಸ್ಪತ್ರೆಯ ನರ್ಸ್ ಗಳು, ಸಿಬ್ಬಂದಿಗಳು ತಮ್ಮ ವೈದ್ಯರಿಗೆ ವಿಶಿಷ್ಟ ಬಗೆಯ ಶುಭಾಶಯಗಳನ್ನು ತಿಳಿಸಿದರು.
NU ಆಸ್ಪತ್ರೆಯ ತಳ ಮಹಡಿಯಲ್ಲಿ ಇಂದು ಜು.01ರ ಮಧ್ಯಾಹ್ನದ ಹೊತ್ತಿಗೆ ಒಬ್ಬೊಬ್ಬರಾಗಿ ಸೇರಿದ ಆಸ್ಪತ್ರೆಯ ಸಿಬ್ಬಂದಿ ತಮ್ಮದೇ ಶೈಲಿಯಲ್ಲಿ ಕುಣಿದು ನಲಿಯುತ್ತ ರೋಗಿಗಳ ಪೋಷಕರ ಹಾಗೂ ವೈದ್ಯರ ಗಮನ ಸೆಳೆದರು. ನಂತರ ನೃತ್ಯಕ್ಕೆ ಒಬ್ಬೊಬ್ಬರಾಗಿ ಜೊತೆಯಾದರು. ಸದ್ದೇ ಇಲ್ಲದೆ ಕುಣಿಯಲು ಆರಂಭಿಸಿದ ಸಿಬ್ಬಂದಿ ನಂತರ ಗಮನಸೆಳೆಯುವ ಹಾಡುಗಳಿಗೆ ನೃತ್ಯ ಮಾಡಲಾರಂಭಿದಿದರು. ಆ ಮೂಲಕ ದೇಶದಲ್ಲಿ ನಿಸ್ವಾರ್ಥದಿಂದ ಸೇವೆ ಮಾಡುವ ವೃತ್ತಿಗಳಲ್ಲಿ ಒಂದಾದ ವ್ಯದ್ಯ ವೃತ್ತಿಯನ್ನು ಸಾಕ್ಷಾತ್ ದೇವರ ಸ್ವರೂಪಿಗಳಂತಾಗಿ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯರಿಗೆ ನಮನ ಸಲ್ಲಿಸಿ ಕೃತಜ್ಞತೆ ಅರ್ಪಿಸಿದರು.
ಸಾಮಾನ್ಯವಾಗಿ ಸಮಯದ ಹೊಂದಾಣಿಯ ಕೊರತೆಯ ಕಾರಣಕ್ಕಾಗಿ ವ್ಯದ್ಯರನ್ನು ಶಪಿಸುತ್ತಲೇ ಕಾಲ ಕಳೆತುವ ಬಹುತೇಕ ಆಸ್ಪತ್ರೆಯ ಸಿಬ್ಬಂದಿಗಳಿಗೆ ಹೋಲಿಸಿದರೆ NU ಆಸ್ಪತ್ರೆಯ ಸಿಬ್ಬಂದಿ ಭಿನ್ನ ಎನಿಸಿಕೊಳ್ಳುವ ಜೊತೆಗೆ ವಿಶಿಷ್ಟ Flash Mob ಕಾರ್ಯಕ್ರಮದ ಮೂಲಕ ವೈದ್ಯರಿಗೆ ಕೃಜ್ಞತೆ ಸಲ್ಲಿಸಿ ತಾವೂ ಮೆಚ್ಚುಗೆಗೆ ಪಾತ್ರರಾದರು. ಆ ಮೂಲಕ ವಿಶ್ವ ವೈದ್ಯರ ದಿನವನ್ನು ನರ್ಸ್ ಗಳು, ಸಿಬ್ಬಂದಿಗಳು ವಿಶಿಷ್ಟವಾಗಿ ಆಚರಣೆ ಮಾಡಿ ಗಮನ ಸೆಳೆದರು.
ಬೆಂಗಳೂರಿನ ಎನ್‌ಯು ಆಸ್ಪತ್ರೆಗಳ ವ್ಯವಸ್ಥಾಪಕ ನಿರ್ದೇಶಕ ಮತ್ತು ಹಿರಿಯ ಸಮಾಲೋಚಕ, ಪೀಡಿಯಾಟ್ರಿಕ್ ಮೂತ್ರಶಾಸ್ತ್ರಜ್ಞ ಡಾ. ಪ್ರಸನ್ನ ವೆಂಕಟೇಶ್ ಮಾತನಾಡಿ, “ವೈದ್ಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು, ಅವರು ದೈನಂದಿನ ದೈಹಿಕ ಚಟುವಟಿಕೆ, ವಾರ್ಷಿಕ ಆರೋಗ್ಯ ತಪಾಸಣೆ ಮತ್ತು ಸೂಕ್ತವಾದ ಆಹಾರಕ್ರಮವನ್ನು ಖಚಿತಪಡಿಸಿಕೊಳ್ಳಬೇಕು. ವೈದ್ಯರ ದಿನವು ನಮಗೆ ಅತ್ಯಂತ ಮಹತ್ವದ್ದು. ವೈದ್ಯರು ಸಮಾಜದ ಆರೋಗ್ಯ ಕಾಪಾಡಲು ತಮ್ಮ ಕುಟುಂಬದ ಸಮಯ ತ್ಯಾಗ ಮಾಡುತ್ತಾರೆ. ವೈದ್ಯಕೀಯ ತಂತ್ರಜ್ಞಾನವು ನಿರಂತರವಾಗಿ ವಿಕಸನಗೊಳ್ಳುತ್ತಿದೆ. ನಮ್ಮ ವೈದ್ಯರಿಗೆ ಅವರ ನಿಸ್ವಾರ್ಥ ಸೇವೆಗಾಗಿ ಅನಂತರ ಧನ್ಯವಾದಗಳು ಎಂದರು.
NU ಆಸ್ಪತ್ರೆಯ ವೈದ್ಯರಾದ ಡಾ. ಪ್ರಮೋದ್ ಕೃಷ್ಣಪ್ಪ ಅವರು ಮಾತನಾಡಿ, “ಇದು ನಿಜವಾಗಿಯೂ ಆಹ್ಲಾದಕಾರಿ ಉಲ್ಲಾಸಯುತ ಕಾರ್ಯಕ್ರಮವಾಗಿತ್ತು. ನಾವೆಲ್ಲರೂ NU ಆಸ್ಪತ್ರೆಯಲ್ಲಿ ಕುಟುಂಬವಾಗಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಕುಟುಂಬ ಸದಸ್ಯರು ಸಮಾಜದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತನ್ಮೂಲಕ ಈ ಫ್ಲಾಶ್ ಮಾಬ್ ಮೂಲಕ ಗೌರವ ಸಮರ್ಪಣೆ ಮಾಡಿದ್ದು ನಿಜಕ್ಕೂ ಸಂತೋಷದ ವಿಚಾರ. ಇಂದಿನ ನಮ್ಮ ದಿನವನ್ನು ನಾವು ಸಂಭ್ರಮಿಸಿದೆವು. ಇದರ ಜೊತೆಗೆ ವೈದ್ಯರು, ನರ್ಸ್ ಗಳು ತಮ್ಮ ಆರೋಗ್ಯದ ಬಗ್ಗೆಯೂ ಕಾಳಜಿವಹಿಸಬೇಕು ಎಂದು ಹೇಳಿದರು.
ಈ ವೇಳೆ ಡಾ.ಸ್ವಾತಿ ಪೋತಿನೇನಿ, ಡಾ. ಪ್ರಮೋದ್ ಕೃಷ್ಣಪ್ಪ, ಡಾ. ಆಶಿಶ್, ಡಾ. ಸ್ನೇಹ, ಡಾ. ನಿತಿನ್ ನಾಯಕ್, ಡಾ. ಶಕುಂತಲಾ ಮೋದಿ, ಡಾ. ದೀಪಕ್ ಕೃಷ್ಣಪ್ಪ ಮತ್ತಿತರರು ಉಪಸ್ಥಿತರಿದ್ದರು.