ಮುಂಬೈ : ಮಹಾ ರಾಜಕೀಯ ಹೈಡ್ರಾಮಕ್ಕೆ ಅಂತ್ಯ ಹಾಡಿದ್ದು ಶಿವಸೇನೆಯ ರೆಬಲ್ ಬಣಕ್ಕೆ ಮಿತ್ರ ಪಕ್ಷ ಬಿಜೆಪಿ ಬೆಂಬಲ ಸೂಚಿಸಿದ್ದರ ಪರಿಣಾಮವಾಗಿ ರೆಬಲ್ ಬಣದ ನಾಯಕ ಏಕನಾಥ್ ಶಿಂಧೆಗೆ ಸಿಎಂ ಪಟ್ಟ ಒಲಿದು ಬಂದಿದ್ದು ಡಿಸಿಎಂ ಆಗಿ ಮಾಜಿ ಸಿಎಂ ದೇವೇಂದ್ರ ಫಡ್ನವಿಸ್ ಪ್ರಮಾಣ ವಚನ ಸ್ವೀಕರಿಸುವ ಮೂಲಕ ಉದ್ಧವ್ ಠಾಕ್ರೆಗೆ ಠಕ್ಕರ್ ನೀಡಿದ್ದಾರೆ.
ಹಲವು ದಿನಗಳಿಂದ ರಾಜಕೀಯ ಕೋಲಾಹಲ ಸೃಷ್ಟಿಯಾಗಿದ್ದು ರೆಬೆಲ್ ಶಾಸಕರು ಸೂರತ್, ಗುವಾಹಟಿ ಹಾಗೂ ಕೊನೆಯದಾಗಿ ಗೋವಾದಲ್ಲಿ ಉಳಿದುಕೊಂಡಿದ್ದು ಈಗ ಮುಂಬೈಗೆ ಮರಳಲಿದ್ದು ಹೊಸ ಸರ್ಕಾರದಲ್ಲಿ ಮಂತ್ರಿಗಳಾಗುವ ಉತ್ಸಾಹದಲ್ಲಿದ್ದಾರೆ.
ಸರ್ಕಾರದ ರಚನೆಗೆ ರಾಜ್ಯಪಾಲರ ಬಳಿ ಹಕ್ಕು ಮಂಡಿಸಿದ ಶಿವಸೇನಾ ರೆಬಲ್ ಶಾಸಕ ಏಕನಾಥ್ ಶಿಂಧೆ ಶಾಸಕರ ಸಹಿ ಇರುವ ಪತ್ರವನ್ನು ನೀಡುವ ಮೂಲಕ ಹೊಸ ಸರ್ಕಾರಕ್ಕೆ ಮುನ್ನುಡಿ ಬರೆದರು, ಸರ್ಕಾರ ಭಾಗವಾಗಿರುವುದಿಲ್ಲ ಎಂದು ತಿಳಿಸಿದ್ದ ಮಾಜಿ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರು ಹೈಕಮಾಂಡ್ ಆದೇಶದ ಮೇರೆಗೆ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.
ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ರಾಜೀನಾಮೆ ನೀಡುವ ಮುನ್ನ ಹಲವಾರು ಬಾರಿ ರೆಬಲ್ ಶಾಸಕರಿಗೆ ಭಾವನಾತ್ಮಕ ಸಂದೇಶ ಕಳುಹಿಸಿದ್ದರು, ಆದರೆ ಇದಕ್ಕೆ ಮಣೆ ಹಾಕದ ಶಾಸಕರು ಏಕನಾಥ್ ಶಿಂಧೆಗೆ ತಮ್ಮ ಬೆಂಬಲ ಸೂಚಿಸಿದ್ದರು.
ನೂತನ ಮುಖ್ಯಮಂತ್ರಿಯಾಗಿ ಏಕನಾಥ್ ಶಿಂಧೆ ಶಿವಸೇನಾ ಸಂಸ್ಥಾಪಕ ಬಾಳಠಾಕ್ರೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿ ಹಿಂದುತ್ವದ ಸಿದ್ಧಾಂತದ ಮೇಲೆ ಸರ್ಕಾರ ನಡೆಸುವುದಾಗಿ ತಿಳಿಸಿದರು, ಈ ಸಂದರ್ಭದಲ್ಲಿ ಏಕನಾಥ್ ಶಿಂಧೆ ಅವರ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತ್ತು.