ಬೆಂಗಳೂರು: ವಿಶೇಷ ಖಾಯಿಲೆಯಿಂದ ಬಳಲುವವರಿಗೆ ಅವರ ಇಷ್ಟದ ವ್ಯಕ್ತಿಗಳನ್ನು ಭೇಟಿ ಮಾಡಿಸಿ, ಅವರ ಆಸೆಗಳನ್ನು ಪೂರೈಸಿ ಅವರಿಗೆ ತಮ್ಮ ಮನೋಬಲ ಹೆಚ್ಚುವಂತೆ ಮಾಡಲಾಗುತ್ತದೆ, ಇದರಿಂದಾಗಿ ರೋಗಿಯು ಮಾನಸಿಕವಾಗಿ ಸಬಲನಾಗುತ್ತಾನೆ.
ಇಂತಹದೇ ಮತ್ತೊಂದು ವಿಶೇಷ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ, ಆ್ಯಸಿಡ್ ದಾಳಿಗೊಳಗಾದ ಯುವತಿ ಕನ್ನಡದ ಹೆಸರಾಂತ ನಟ ಕಿಚ್ಚ ಸುದೀಪ್ ಅವರನ್ನು ನೋಡುವ ಆಸೆ ವ್ಯಕ್ತ ಪಡಿಸಿದ್ದಾರೆ, ತಾವು ಸುದೀಪ್ ಅವರ ಅಪ್ಪಟ ಅಭಿಮಾನಿಯಾಗಿದ್ದು, ನನಗೆ ಅವರ ಎಲ್ಲಾ ಸಿನಿಮಾಗಳೂ ಇಷ್ಟ ಆ್ಯಸಿಡ್ ದಾಳಿಗೆ ಒಳಗಾಗುವ ಮುನ್ನವೂ ನಾನು ಅವರ ಸಿನಿಮಾಗಳನ್ನು ನೋಡಿದ್ದೇನೆ ಎಂದು ಅವರು ಹೇಳಿದ್ದಾರೆ.
ಆ ಸಂತ್ರಸ್ತೆ ಇನ್ನೂ ಕೂಡ ಸೆಂಟ್ ಜಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗಾಗಲೇ ಅವರಿಗೆ ಎರಡು ಬಾರಿ ಬ್ಲಡ್ ಮತ್ತು ಸ್ಕಿನ್ ಪ್ಲಾಂಟೇಷನ್ ಸರ್ಜರಿ ಮುಗಿದಿದೆ. ಈ ನಡುವೆ ತನ್ನ ಕುಟುಂಬಸ್ಥರ ಬಳಿ ಕಿಚ್ಚ ಸುದೀಪ್ ನೋಡುವ ಆಸೆಯನ್ನು ಹೇಳಿಕೊಂಡಿದ್ದಾರೆ.
ಈ ಸಂಕಟದ ನಡುವೆಯೂ ಅವರು ನಾಲ್ಕು ಬಾರಿ ಸುದೀಪ್ ನೋಡಬೇಕು ಅಂತಾ ಕೇಳಿದ್ದಾರೆ. ಸದ್ಯಕ್ಕೆ ಆ ಯುವತಿಯನ್ನು ಸಮಾಧಾನಿಸಲು ಕುಟುಂಬದವರು ಸುದೀಪ್ ಸರ್ ಅವರಿಗೆ ಬಿಡುವು ಇರುವುದಿಲ್ಲ ವ್ಯವಸ್ಥೆ ಮಾಡುತ್ತೇವೆ ಎಂದು ಸಮಾಧಾನ ಮಾಡಿದ್ದಾರೆ.
ಅನಾರೋಗ್ಯಕ್ಕೆ ತುತ್ತಾದ ಅನೇಕ ಅಭಿಮಾನಿಗಳನ್ನು ಈಗಾಗಲೇ ಕಿಚ್ಚ ಸುದೀಪ್ ಭೇಟಿ ಮಾಡಿದ್ದಾರೆ. ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿದ್ದಾರೆ. ಈ ಬಾರಿ ಆ್ಯಸಿಡ್ ದಾಳಿಗೆ ಒಳಗಾಗಿರುವ ಈ ಅಭಿಮಾನಿಯ ಆಸೆಯನ್ನೂ ನಟ ಕಿಚ್ಚ ಸುದೀಪ್ ಅವರು ಈಡೇರಿಸಲಿ ಎನ್ನುವುದೇ ಅವರ ಕುಟುಂಬದ ಮನವಿಯಾಗಿದೆ.