ತುಮಕೂರು : ರಕ್ಷಕರೇ ಭಕ್ಷಕರಾದರೆ ಏನು ಗತಿ, ಹೊಟ್ಟೆ ಪಾಡಿಗಾಗಿ ಹೋಟೆಲ್ ನಡೆಸುತ್ತಿದ್ದ ಮಹಿಳೆಯ ಮೇಲೆ ಪೊಲೀಸ್ ಕಾನ್ಸ್‌ಟೇಬಲ್ ಓರ್ವ ಅತ್ಯಾಚಾರಕ್ಕೆ ಯತ್ನಿಸಿರುವ ಆತಂಕಕಾರಿ ಘಟನೆ ಬುಧವಾರ ಜೂನ್ 29 ಬೆಳಗ್ಗೆ 10 ಗಂಟೆಗೆ ಕಿಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಎಚ್.ಎನ್ . ಮಂಜುನಾಥ್ ( ಮಿಲ್ಟಿ ) ಅತ್ಯಾಚಾರಕ್ಕೆ ಯತ್ನಿಸಿದ ಪೇದೆ, ಈತ ತಿಪಟೂರು ತಾಲೂಕಿನ ಕಿಬ್ಬನಹಳ್ಳಿ ಪೊಲೀಸ್ ಠಾಣೆಯಲ್ಲಿ ಕಾನ್ಸ್ಟೇಬಲ್ ಆಗಿ ಸೇವೆ ಸಲ್ಲಿಸುತ್ತಿದ್ದ, ಅತ್ಯಾಚಾರಕ್ಕೆ ಯತ್ನಿಸಿದ ಆರೋಪದಲ್ಲಿ ಬಂಧಿಸಲಾಗಿದ್ದು , ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕಿಬ್ಬನಹಳ್ಳಿ ಪೊಲೀಸರು ಕಳುಹಿಸಿದ್ದಾರೆ.
ಮಂಜುನಾಥ್ ಈ ಹಿಂದೆ ಸೇನೆಯಲ್ಲಿ ಸೇವೆ ಸಲ್ಲಿಸಿದ್ದು ಸೈನ್ಯದಲ್ಲಿ ಕೆಲಸ ಬಿಟ್ಟು ಕಾನ್ಸ್‌ಟೇಬಲ್ ಆಗಿದ್ದ , ಸಂತ್ರಸ್ತ ಮಹಿಳೆ ಕಿಬ್ಬನಹಳ್ಳಿಯಲ್ಲಿ ಹೋಟೆಲ್ ನಡೆಸಿಕೊಂಡಿದ್ದಾರೆ . ಬುಧವಾರ ( ಜೂನ್ 29 ) ಬೆಳಗ್ಗೆ ಮಹಿಳೆಯ ಗಂಡ ಹೋಟೆಲ್‌ಗೆ ಪದಾರ್ಥಗಳನ್ನು ತರಲೆಂದು ತಿಪಟೂರಿಗೆ ಹೋಗಿದ್ದರು ಈ ವೇಳೆ ತಿಂಡಿ ತಿನ್ನುವ ನೆಪದಲ್ಲಿ ಹೋಟೆಲ್ ಬಳಿ ಬಂದಿದ್ದ ಆರೋಪಿ ಮಂಜುನಾಥ್ , ಮಹಿಳೆಯ ಜೊತೆ ಅನುಚಿತವಾಗಿ ವರ್ತಿಸಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.
ಸಹಕರಿಸದೇ ಹೋದರೆ , ಹೋಟೆಲ್ ಬಂದ್ ಮಾಡಿಸುವುದಾಗಿ ಮಹಿಳೆಗೆ ಬೆದರಿಕೆ ಹಾಕಿದ್ದಾನೆ, ಮಹಿಳೆ ಯಾವುದಕ್ಕೂ ಜಗ್ಗದಿದ್ದಾಗ ಕೊಲೆ ಬೆದರಿಕೆಯನ್ನು ಹಾಕಿದ್ದಾನೆ ಇದಾದ ಕೂಡಲೇ ಮಹಿಳೆ ತನ್ನ ಪತಿಗೆ ಕರೆ ಮಾಡಿ ಎಲ್ಲವನ್ನು ತಿಳಿಸಿದ್ದಾಳೆ, ತಕ್ಷಣ ಕಿಬ್ಬನಹಳ್ಳಿ ಪೊಲೀಸ್ ಠಾಣೆಗೆ ತೆರಳಿ ಸಂತ್ರಸ್ತೆಯ ಪತಿ ದೂರು ದಾಖಲಿಸಿದ್ದಾರೆ .
ಭಾರತೀಯ ದಂಡ ಸಂಹಿತೆ 354 ( ಎ ) , 354 ( ಬಿ ) , 448 , 506 , 509 , ಹಾಗೂ ಎಸ್ ಸಿ , ಎಸ್ ಟಿ ಕಾಯ್ದೆ ಅಡಿ ಎಫ್‌ಐಆರ್ ದಾಖಲಿಸಿಕೊಳ್ಳಲಾಗಿದ್ದು ತಕ್ಷಣವೇ ಪೇದೆ ಮಂಜುನಾಥ್‌ನನ್ನು ಬಂಧಿಸಿರುವ ಪೊಲೀಸರು ಆತನನ್ನು ತುಮಕೂರು ಜಿಲ್ಲಾ ಕಾರಾಗೃಹಕ್ಕೆ ಕಳುಹಿಸಿದ್ದಾರೆ.