ಕರ್ನಾಟಕ, ದೆಹಲಿ, ಮಹಾರಾಷ್ಟ್ರ, ಕೇರಳ, ತೆಲಂಗಾಣ ಸಹಿತ ದೇಶದ 14 ರಾಜ್ಯಗಳಲ್ಲಿ ಕೊರೋನಾ ಮತ್ತೆ ಆತಂಕಕಾರಿ ಹಂತದಲ್ಲಿ ತೀವ್ರತೆ ಪಡೆದುಕೊಳ್ಳುತ್ತಿದ್ದು, ಮುನ್ನೆಚ್ಚರಿಕೆ ಕ್ರಮ ಇನ್ನಷ್ಟು ಹೆಚ್ಚಿಸುವಂತೆ ಆಯಾ ಸರ್ಕಾರಗಳಿಗೆ ಕೇಂದ್ರ ಖಡಕ್ ಸೂಚನೆ ನೀಡಿದೆ.
ಕೊರೋನಾ ಹೆಚ್ಚಳ ಹಿನ್ನೆಲೆಯಲ್ಲಿ ಕರೆಯಲಾಗಿದ್ದ ವರ್ಚುವಲ್ ಪರಿಶೀಲನಾ ಸಭೆಯಲ್ಲಿ ಕೇಂದ್ರ ಆರೋಗ್ಯ ಕಾರ್ಯದರ್ಶಿ ರಾಜೇಶ್ ಭೂಷಣ್, ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿದ್ದು, ಚಿಕಿತ್ಸೆಗೆ ದಾಖಲಾದ ಕೊರೋನಾ ಸೋಂಕಿತರ ಸಾಂಕ್ರಾಮಿಕ ರೋಗಶಾಸ್ತ್ರದ ಪ್ರೊಫೈಲ್ ಅನ್ನು ಕಟ್ಟುನಿಟ್ಟಾಗಿ ಮೇಲ್ವಿಚಾರಣೆ ಮಾಡುವಂತೆ ಹಾಗೂ ಈ ಬಗ್ಗೆ ಕೇಂದ್ರ ಸಚಿವಾಲಯಕ್ಕೆ ವರದಿ ಮಾಡುವಂತೆ ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವ ರಾಜ್ಯಗಳಲ್ಲಿ ಎರಡನೇ ಮತ್ತು ಮುನ್ನೆಚ್ಚರಿಕೆ ಕೋವಿಡ್ ಲಸಿಕೆ ಪಡೆಯುವವರ ಸಂಖ್ಯೆ ಕಡಿಮೆಯಾಗಿದ್ದು, ವಯಸ್ಸಾದವರು ಹಾಗೂ 12 ರಿಂದ 17 ವಯೋಮಾನದವರಿಗೆ ಎರಡನೇ ಡೋಸ್ ಅನ್ನು ತ್ವರಿತವಾಗಿ ನೀಡುವಂತೆಯೂ ಕೇಂದ್ರ ಸಲಹೆ ನೀಡಿದೆ.