ಮೀಸಲಾತಿ ಹೆಚ್ಚಳದ ಕುರಿತು ಸರ್ಕಾರ ಬರೀ ಆಶ್ವಾಸನೆ ನೀಡುತ್ತಿದೆ, ಶಿಫಾರಸು ಜಾರಿಗೊಳಿಸುವ ಪ್ರಯತ್ನ ಮಾಡುತ್ತಿಲ್ಲ: ವಾಲ್ಮೀಕಿ ಗುರು ಪ್ರಸನ್ನಾನಂದ ಸ್ವಾಮೀಜಿ

ಬೆಂಗಳೂರು : ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಹೆಚ್ಚಿಸುವಂತೆ ಆಗ್ರಹಿಸಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ ನೇತೃತ್ವದಲ್ಲಿ ನಗರದ ಸ್ವಾತಂತ್ರ್ಯ ಉದ್ಯಾನದಲ್ಲಿ ನಡೆಯುತ್ತಿರುವ ಅಹೋರಾತ್ರಿ ಧರಣಿ 139 ನೇ ದಿನಕ್ಕೆ ಕಾಲಿಟ್ಟಿದ್ದು , ಸರ್ಕಾರದಿಂದ ಪೂರಕ ಸ್ಪಂದನೆ ಸಿಗದಿರುವುದು ಸ್ವಾಮೀಜಿಗಳ ಆಕ್ರೋಶಕ್ಕೆ ಕಾರಣವಾಗಿದೆ .

ಕರ್ನಾಟಕ ಸ್ವಾಭಿಮಾನಿ ಎಸ್.ಸಿ , ಎಸ್.ಟಿ ಸಂಘಟನೆಗಳ ಒಕ್ಕೂಟ ಮತ್ತು ಮೀಸಲಾತಿ ಹೆಚ್ಚಳ ಹೋರಾಟ ಕ್ರಿಯಾ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಧರಣಿ ಸ್ಥಳಕ್ಕೆ ವಿವಿಧ ಮಠಾಧೀಶರು ಆಗಮಿಸಿ ಬೆಂಬಲ ಸೂಚಿಸಿದರು . ಹೋರಾಟ ತೀವ್ರಗೊಳಿಸುವ ಸಂಕಲ್ಪ ಮಾಡಿದರು .

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಧರಣಿ 150 ದಿನ ತಲುಪುವುದಕ್ಕೂ ಮೊದಲು ಬೇಡಿಕೆ ಈಡೇರಿಸಬೇಕು ಇಲ್ಲದಿದ್ದರೆ ಜುಲೈ 11 ರಂದು ಜಿಲ್ಲಾ ಕೇಂದ್ರಗಳಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದೆ, ಧರಣಿ 100 ನೇ ದಿನ ಪೂರೈಸಿದಾಗಲೂ ಜಿಲ್ಲಾ , ತಾಲ್ಲೂಕು ಕೇಂದ್ರದಲ್ಲಿ ಪ್ರತಿಭಟನೆ ನಡೆಸಲಾಗಿತ್ತು ಎಂದು ತಿಳಿಸಿದರು.

ರಾಜ್ಯದಲ್ಲಿರುವ ಎಸ್‌.ಸಿ ಮತ್ತು ಎಸ್.ಟಿ. ಮೀಸಲಾತಿ ಪ್ರಮಾಣ ಕ್ರಮವಾಗಿ ಶೇ. 15 ರಿಂದ ಶೇ. 17 , ಹಾಗೂ ಶೇ 3 ರಿಂದ ಶೇ. 7 ಕ್ಕೆ ಏರಿಸುವಂತೆ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎಚ್. ಎನ್. ನಾಗಮೋಹನ್ ದಾಸ್ ಆಯೋಗವು ರಾಜ ಸರ್ಕಾರಕ್ಕೆ ವರದಿ ಸಲ್ಲಿಸಿತ್ತು. 2020 ರ ಜುಲೈ 7 ರಂದು ವರದಿ ಸಲ್ಲಿಸಿದ್ದರೂ ಸರ್ಕಾರ ಕಾಲಹರಣ ಮಾಡುತ್ತಿದೆ . ಶಿಫಾರಸು ಜಾರಿಗೊಳಿಸುವ ಇಚ್ಛೆಯಿಲ್ಲ ಎಂದು ಆಕ್ರೋಶ ಹೊರಹಾಕಿದರು.

ಧರಣಿಯು 108 ನೇ ದಿನಕ್ಕೆ ಕಾಲಿಟ್ಟಿದ್ದ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಥಳಕ್ಕೆ ಬಂದು ಭರವಸೆ ನೀಡಿದ್ದರು. ಇನ್ನೂ ಅಂತಿಮ ನಿರ್ಧಾರ ಪ್ರಕಟಿಸಲ್ಲ ಎಂದು ದೂರಿದರು. ಸಾಹಿತಿಗಳು , ಚಿಂತಕರು , ಪ್ರಜ್ಞಾವಂತರು ಹಾಗೂ ದಲಿತ ಸಂಘರ್ಷ ಸಮಿತಿ , ಕನ್ನಡ ಸಂಘಟನೆ ಮುಖಂಡರು ಈ ಹೋರಾಟ ಬೆಂಬಲಿಸಿದ್ದಾರೆ . ಪ್ರತಿ 10 ವರ್ಷಕ್ಕೊಮ್ಮೆ ಮೀಸಲಾತಿ ಪರಿಷ್ಕರಣೆ ನಡೆಯಬೇಕು , ಆದರೆ ಹಳೇ ಮೀಸಲಾತಿ ಅನುಸರಿಸಲಾಗುತ್ತಿದೆ ಎಂದರು .

ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ , ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ , ಜ್ಞಾನಪ್ರಕಾಶ ಸ್ವಾಮೀಜಿ, ಸರ್ದಾರ ಸೇವಾಲಾಲ್ ಸ್ವಾಮೀಜಿ , ಬಸವನಾಗಿದೇವ ಸ್ವಾಮೀಜಿ ಸೇರಿದಂತೆ ವಿವಿಧ ಮುಖಂಡರು ಹಾಜರಿದ್ದರು .

ಅಹೋರಾತ್ರಿ ಧರಣಿಯಲ್ಲಿ ಮಂಗಳವಾರ ( ಎಡದಿಂದ ) ಛಲವಾದಿ ಮಹಾಸಂಸ್ಥಾನದ ಬಸವನಾಗಿದೇವ ಸ್ವಾಮೀಜಿ , ಚಿತ್ರದುರ್ಗದ ಬಂಜಾರ ಗುರುಪೀಠದ ಪೀಠಾಧ್ಯಕ್ಷ ಸರ್ದಾರ್‌ ಸೇವಾಲಾಲ್ ಸ್ವಾಮೀಜಿ , ಉರಿಲಿಂಗಿ ಪೆದ್ದಿಮಠದ ಜ್ಞಾನಪ್ರಕಾಶ ಸ್ವಾಮೀಜಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಸ್ವಾಮೀಜಿ , ಚಿತ್ರದುರ್ಗದ ಮಾದಾರ ಚನ್ನಯ್ಯ ಗುರುಪೀಠ ಬಸವಮೂರ್ತಿ ಮಾದಾರ ಚನ್ನಯ್ಯ , ಚಿತ್ರದುರ್ಗದ ಭೋವಿ ಗುರುಪೀಠದ ಸಿದ್ಧರಾಮೇಶ್ವರ ಮಹಾಸಂಸ್ಥಾನ ಮಠದ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ , ಇಮ್ಮಡಿ ಕೇತೇಶ್ವರ ಸ್ವಾಮೀಜಿ ಭಾಗವಹಿಸಿದ್ದರು.

Discover more from Valmiki Mithra

Subscribe now to keep reading and get access to the full archive.

Continue reading