ಬೆಳೆಗ್ಗೆ ಎದ್ದ ಕೂಡಲೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರಿಗೆ ನಿಂಬೆರಸ ಮತ್ತು ಚಮಚ ಜೇನುತುಪ್ಪ ಬೆರೆಸಿ ಕುಡಿದರೆ ಬೊಜ್ಜು ಕರಗಿ ಸಣ್ಣಗಾಗುತ್ತಾರೆ ಹಾಗು ಅರೋಗ್ಯಕ್ಕೂ ಒಳ್ಳೆಯದು ಎಂದು ಬಹುತೇಕ ಜನರು ಸೇವಿಸುತ್ತಾರೆ ( ಆದರೆ ಬಿಸಿ ನೀರಿಗೆ ಜೇನುತುಪ್ಪ ಬೆರೆಸಬಾರದು ) ಆದರೆ ಅದೇ ಬಿಸಿನೀರಿಗೆ ಬೆಲ್ಲ ಸೇರಿಸಿ ಕುಡಿದರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ..?
ಬೆಳಗ್ಗೆ ಎದ್ದ ತಕ್ಷಣ ಒಂದು ಲೋಟ ಬಿಸಿ ನೀರು ಕುಡಿದರೆ ಅದರಿಂದ ಜೀರ್ಣಕ್ರಿಯೆಯು ಸರಾಗವಾಗಿ ಆಗುವುದು ಎಂದು ಈಗಾಗಲೇ ನಾವು ತಿಳಿದುಕೊಂಡಿರುವಂತಹ ವಿಚಾರ. ಇದಕ್ಕೆ ಬೆಲ್ಲ ಮತ್ತುನಿಂಬೆರಸ ಬೆರೆಸಿ ಸೇವಿಸಿದರೆ ಲಾಭವು ದುಪ್ಪಟ್ಟು ಆಗುವುದು. ಬೆಳಗ್ಗೆ ಹಲ್ಲುಜ್ಜುವ ಮೊದಲು ಬಿಸಿ ನೀರು ಮತ್ತು ಬೆಲ್ಲ ಹಾಕಿ ಕುಡಿದರೆ ಅದು ಚರ್ಮ ಹಾಗೂ ಆರೋಗ್ಯದ ಮೇಲೆ ಅದ್ಭುತವಾದ ಪರಿಣಾಮ ಬೀರುವುದು.
ಬೆಲ್ಲ ಉಷ್ಣಕಾರಕ. ಹಾಗಾಗಿ ಈ ಚಳಿಗಾಲದಲ್ಲಿ ಬಿಸಿನೀರು ಬೆಲ್ಲದ ಸೇವನೆ ದೇಹವನ್ನು ಬೆಚ್ಚಗೆ ಇಡುವುದು ಮತ್ತು ಚಳಿಗಾಲದ ಸಾಮಾನ್ಯ ತೊಂದರೆಗಳಾದ ಶೀತ, ಕೆಮ್ಮು, ಜ್ವರ ಮುಂತಾದ ಹಲವಾರು ತೊಂದರೆಗಳಿಂದ ಕಾಪಾಡುವುದು. ಆದ್ದರಿಂದ ನಮ್ಮಲ್ಲಿ ಕಷಾಯಗಳಿಗೆ ಬೆಲ್ಲವನ್ನೇ ಹಾಕುವ ಪದ್ದತಿ ಇರುವುದು.
ಎದ್ದ ಕೂಡಲೇ ಬೆಲ್ಲ ಬಿಸಿನೀರು ಸೇವನೆ ದೇಹಕ್ಕೆ ಹೆಚ್ಚಿನ ಶಕ್ತಿಯನ್ನು ಕೊಡುವುದರಿಂದ, ಬೆಳಿಗ್ಗೆ ಜಾಗಿಂಗ್, ಜಿಮ್, ಯೋಗ ಹೋಗುವವರಿಗೆ ಹೆಚ್ಚಿನ ಉತ್ಸಾಹ ಬರುವುದು, ಆಯಾಸ ಕಡಿಮೆಯಾಗುವುದು. ಬೆವರಿಕೆ ಹೆಚ್ಚಾಗಿ ದೇಹದ ಕಲ್ಮಶಗಳು ಹೊರಹೋಗಿ ದೇಹದ ತೂಕ ಕಮ್ಮಿಯಾಗುವುದಲ್ಲದೇ, ಆರೋಗ್ಯಯುತವಾಗುವುದು.
ಆಯುರ್ವೇದದ ಪ್ರಕಾರ ಬೆಲ್ಲವನ್ನು ಬಿಸಿನೀರಿನೊಂದಿಗೆ ಸೇವಿಸಿದಾಗ ವಿವಿಧ ರೀತಿಯ ಕಾಯಿಲೆಗಳಿಂದ ತಡೆಯವುದು ಮಾತ್ರವಲ್ಲದೆ, ಇದು ಹೃದಯದ ಆರೋಗ್ಯಕ್ಕೂ ಅದ್ಭುತವಾಗಿ ನೆರವಾಗುವುದು. ಇದು ದೇಹಕ್ಕೆ ಒಳ್ಳೆಯ ಶಕ್ತಿ ನೀಡುವುದು ಮತ್ತು ಆರೋಗ್ಯ ವೃದ್ಧಿಸುವುದು. ತೂಕ ಇಳಿಸಿಕೊಳ್ಳಬೇಕು ಎಂದು ಬಯಸುತ್ತಾ ಇರುವವರಿಗೆ ಇದು ತುಂಬಾ ಪರಿಣಾಮಕಾರಿ ಔಷಧಿಯಾಗಿದೆ. ಯಾಕೆಂದರೆ ಇದು ತೂಕ ಹೆಚ್ಚಳಕ್ಕೆ ನೆರವಾಗುವ ಸಕ್ಕರೆಗೆ ಪರ್ಯಾಯವಾಗಿದೆ ( ಸಕ್ಕರೆ ಸೇವನೆಯಿಂದ ಬೊಜ್ಜು ಹೆಚ್ಚಾಗುತ್ತದೆ ), ಮತ್ತು ಇದರಲ್ಲಿ ಪೊಟಾಶಿಯಂ, ಮೆಗ್ನಿಶಿಯಂ, ವಿಟಮಿನ್ ಬಿ1, ಬಿ6 ಮತ್ತು ವಿಟಮಿನ್ ಸಿ ಸಮೃದ್ಧವಾಗಿದೆ.
ಬೆಲ್ಲದಂತೆಯೇ ಸಕ್ಕರೆಯನ್ನು ಸಹಾ ಕಬ್ಬಿನಿಂದ ತಯಾರಿಸಲ್ಪಡುವುದಾದರೂ, ಸಕ್ಕರೆಯನ್ನು ಹೆಚ್ಚು ಬೆಳ್ಳಗೆ ಮಾಡಲು ಸಾಕಷ್ಟು ರಾಸಾಯನಿಕಗಳನ್ನು ಉಪಯೋಗಿಸುತ್ತಾರೆ. ಅಲ್ಲದೆ ಇತರ ಉಪಯೋಗಕ್ಕೆ ಬರುವ ” ಕಾಕಂಬಿ ” – Molasses ತೆಗೆದುಬಿಡುವುದರಿಂದ ಕಬ್ಬಿನ ಹಾಲಿನಲ್ಲಿರುವ ಎಲ್ಲಾ ಖನಿಜಾಂಶಗಳು ಸಂಪೂರ್ಣ ಹೋಗಿಬಿಟ್ಟಿರುತ್ತದೆ.
ಅತ್ಯಧಿಕ ಕಬ್ಬಿಣದ ಅಂಶ ಇರುವುದರಿಂದ ರಕ್ತಹೀನತೆ ನಿವಾರಣೆಯಾಗುವುದು. ಒಂದು ಗ್ರಾಂ ಸಕ್ಕರೆಯಲ್ಲಿ ಬೆಲ್ಲಕ್ಕಿಂತಲೂ ಹೆಚ್ಚಿನ ಕ್ಯಾಲರಿ ಇದೆ. ಮಲಗುವ ಮೊದಲು ಸಹಾ ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಕುಡಿದರೆ ಅದರಿಂದ ಹಲವಾರು ಲಾಭಗಳು ಸಿಗುವುದು.
ಗ್ಯಾಸ್ ಮತ್ತು ಮಲಬದ್ಧತೆಯಂತಹ ಸಮಸ್ಯೆಯಿಂದ ಬಳಲುತ್ತಿದ್ದರೆ ಆಗ ನೀವು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ರಾತ್ರಿ ಮಲಗುವ ಮೊದಲು ಕುಡಿಯಿರಿ. ಇದರಿಂದ ಜೀರ್ಣಕ್ರಿಯೆ ಸರಾಗವಾಗಿ ನಡೆದು ಮಲಬದ್ಧತೆ ( constipation ) ನಿವಾರಣೆಯಾಗುವುದು. ನಮ್ಮಲ್ಲಿ ಹಳ್ಳಿಗಳಲ್ಲಿ ಇತ್ತೀಚಿನವರೆಗೂ ಊಟದ ಅಂತ್ಯದಲ್ಲಿ ಬೆಲ್ಲ ಸೇವನೆ ಮಾಡುವಂತಹ ಕ್ರಮವಿತ್ತು. ಇದು ದೇಹದಲ್ಲಿ ಜೀರ್ಣಕಾರಕ ಕಿಣ್ವಗಳನ್ನು ಉತ್ತೇಜಿಸಿ ಜೀರ್ಣಕ್ರಿಯೆಗೆ ಸಹಕರಿಸುವುದು.
ಹಲವಾರು ಕಾರಣಗಳಿಂದ ಖಿನ್ನತೆಗೆ ( depression ) ಒಳಗಾಗಿರುವಂತಹವರಿಗೆ ರಾತ್ರಿ ನಿದ್ರೆ ಮಾಡಲು ತುಂಬಾ ಕಷ್ಟವಾಗುವುದು ( ನಿದ್ರಾಹೀನತೆ – Insomnia ) ಇದರಿಂದ ಮಾರನೇ ಬೆಳಿಗ್ಗೆಯಿಂದಲೇ ಆಲಸ್ಯ, ಜಡತ್ವ, ಅನಾರೋಗ್ಯ. ಅಂತಹವರು ರಾತ್ರಿ ಮಲಗುವ ಮೊದಲು ಬೆಲ್ಲ ಬಿಸಿನೀರು ಸೇವಿಸುವುದರಿಂದ ದೇಹದಲ್ಲಿ Happy hormones / feel good hormones ಗಳಾದ Dopamine, Serotonin, Oxytocin ಮತ್ತು Endorphins ಹೆಚ್ಚು ಉತ್ಪಾದನೆ ಆಗಿ, ಮನಸ್ಸು ಮತ್ತು ದೇಹ ಉಲ್ಲಾಸಮಯವಾಗುವುದು.
ಬೆಲ್ಲವು ಕಡಿಮೆ ಸಿಹಿ ಹೊಂದಿದೆ ಮತ್ತು ಸಕ್ಕರೆಗೆ ಹೋಲಿಕೆ ಮಾಡಿದರೆ ಇದರಲ್ಲಿ ಕೊಬ್ಬಿನಾಂಶವು ಕಡಿಮೆ. ಸಕ್ಕರೆ ಬದಲಿಗೆ ಬೆಲ್ಲ ತಿಂದರೆ ಅದರಿಂದ ಬಾಯಿ ಹಾಗೂ ಒಸಡುಗಳ ಆರೋಗ್ಯವು ಉತ್ತಮವಾಗಿ ಇರುವುದು. ಬೆಲ್ಲವನ್ನು ಏಲಕ್ಕಿ ಜತೆಗೆ ಸೇರಿಸಿಕೊಂಡು ತಿಂದರೆ ಅದು ಬಾಯಿಯಲ್ಲಿ ಇರುವ ಬ್ಯಾಕ್ಟೀರಿಯಾ ನಿವಾರಣೆ ಮಾಡುವುದು. ಬಾಯಿಯ ದುರ್ವಾಸನೆಯು ಹೋಗುವುದು ಮತ್ತು ಬಾಯಿಯಲ್ಲಿನ ಹಾನಿಕಾರಕ ಬ್ಯಾಕ್ಟೀರಿಯಾ ನಿವಾರಣೆಯಾಗಿ ಅದರಿಂದ ಬಾಯಿಗೆ ಸಂಬಂಧಿಸಿದ ಹಲವಾರು ಸಮಸ್ಯೆಗೆ ಪರಿಹಾರ.
ಮೊಡವೆ ಮತ್ತು ಚರ್ಮದ ಹಲವು ಸಮಸ್ಯೆಯಿದ್ದರೆ ಆಗ ನೀವು ಬಿಸಿ ನೀರಿಗೆ ಹಾಕಿಕೊಂಡು ಬೆಲ್ಲ ಸೇವಿಸಬೇಕು. ಇದು ಶುದ್ಧೀಕರಿಸುವ ಗುಣ ಹೊಂದಿದೆ ಮತ್ತು ಚರ್ಮದ ಸಮಸ್ಯೆಯನ್ನು ದೂರ ಮಾಡಲು ಇದು ಅದ್ಭುತವಾದ ಮನೆಮದ್ದಾಗಿದೆ. ಇದು ವಯಸ್ಸಾಗುವ ಲಕ್ಷಣಗಳನ್ನು ಕೂಡ ತಡೆಹಿಡಿಯುವುದು.
ಕಿಡ್ನಿಯಲ್ಲಿ ಕಲ್ಲಿನ ಸಮಸ್ಯೆ ನಿವಾರಣೆ ಮಾಡಲು ನೀವು ಬಿಸಿ ನೀರಿಗೆ ಬೆಲ್ಲ ಹಾಕಿಕೊಂಡು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಿರಿ. ಇದು ಕಲ್ಲುಗಳನ್ನು ಕರಗಿಸಿ ಸಣ್ಣ ಗಾತ್ರದವುಗಳನ್ನಾಗಿ ಮಾಡಿ ಮೂತ್ರದ ಮೂಲಕ ಹೊರಹಾಕಲು ಇದು ಸಹಕಾರಿ ಆಗಿರುವುದು. ಬೆಲ್ಲವನ್ನು ಬಿಸಿನೀರಿನಲ್ಲಿ ಕುಡಿಯುವುದರಿಂದ ಇನ್ನೂ ಬಹಳಷ್ಟು ಪ್ರಯೋಜನಗಳಿವೆ. ಆದ್ದರಿಂದ ಈಗಲೇ ಅಭ್ಯಾಸ ಆರಂಭಿಸಿ. ಇತ್ತೀಚೆಗೆ ಮಾರುಕಟ್ಟೆಯಲ್ಲಿ ಸಿಗುವ ಬೆಲ್ಲಕ್ಕೆ ಹೆಚ್ಚಿನ ರಾಸಾಯನಿಕ ಸೇರಿಸುತ್ತಿದ್ದಾರೆ. ಹಾಗಾಗಿ ನೀವು ಕೊಳ್ಳುವ ಬೆಲ್ಲದ ಬಗ್ಗೆ ಗಮನವಿರಲಿ.
ರಾಸಾಯನಿಕಗಳ ಬೆರಕೆ ಇಲ್ಲದ ಕಬ್ಬಿನ ಬೆಲ್ಲ ಉಪಯೋಗಿಸಿ. ಇದಕ್ಕಿಂತಲೂ ಉತ್ತಮ ಅಂದರೆ ತಾಳೆ ಬೆಲ್ಲ / ತಾಟೆ ಬೆಲ್ಲ, ತೆಂಗಿನ ಮರದ ಬೆಲ್ಲ – Palm Jaggery, ಬೈನೆ ಬೆಲ್ಲ ( ಮಲೆನಾಡಿನವರಿಗೆ ಮಾತ್ರ ಗೊತ್ತು ), ಖರ್ಜೂರ ಮರದ ಬೆಲ್ಲ – Date Jaggery ಮುಂತಾದವುಗಳು. ಇದರ ಬಗ್ಗೆ ಮುಂದಿನ ಲೇಖನದಲ್ಲಿ ವಿವರವಾಗಿ ಬರೆಯುತ್ತೇನೆ.
ಸಕ್ಕರೆ ಖಾಯಿಲೆ ( Diabetes ) ಇರುವವರು ಬೆಲ್ಲದ ಸೇವನೆ ಸಹಾ ಮಾಡಬಾರದು ಎಂದು ವಿಜ್ಞಾನ / ವಿಜ್ಞಾನಿಗಳು / ಡಾಕ್ಟರ್ಗಳು ಹೇಳುತ್ತಾರೆ ( GI – Glycemic Index ಹೆಚ್ಚಾಗಿರುವುದರಿಂದ ) ಆದರೆ ನಮ್ಮ ಆಯುರ್ವೇದದ ಪ್ರಕಾರ ಬೆಲ್ಲದ ಸೇವನೆ ಒಳ್ಳೆಯದು… ಅದರಲ್ಲೂ ಕಬ್ಬಿನಿಂದ ತೆಗೆದ ಬೆಲ್ಲಗಳಿಗಿಂತಲೂ ಮೇಲೆ ತಿಳಿಸಿದ ಬೆಲ್ಲಗಳು ಇನ್ನೂ ಉತ್ತಮ. ಹಾಗಾಗಿ ಉಪಯೋಗಿಸುವುದು ಬಿಡುವುದು ನಿಮ್ಮ ವಿವೇಚನೆಗೆ ಬಿಟ್ಟಿದ್ದು.