ವಿಶಾಖಪಟ್ಟಣ: ಸಂಘಟಿತ ಹೋರಾಟದ ಫಲವಾಗಿ ಭಾರತ ತಂಡ ಗೆಲ್ಲಲೇ ಬೇಕಾದ ಪಂದ್ಯದಲ್ಲಿ ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧ ಮೂರನೇ ಪಂದ್ಯದಲ್ಲಿ ಗೆಲುವು ಸಾಧಿಸುವ ಮೂಲಕ ಸರಣಿಯನ್ನು ಜೀವಂತವಾಗಿರಿಸಿಕೊಂಡಿದೆ.
ಮೊದಲೆರಡು ಪಂದ್ಯಗಳಲ್ಲಿ ಟಾಸ್ ಸೋತಿದ್ದ ನಾಯಕ ರಿಷಭ್ ಪಂತ್ ಮತ್ತೊಮ್ಮೆ ಟಾಸ್ ಸೋತರು. ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡ ಪ್ರವಾಸಿ ತಂಡದ ನಾಯಕ ತೆಂಬು ಬವುಮಾ ಭಾರತ ತಂಡವನ್ನು ಬ್ಯಾಟಿಂಗ್ ಗೆ ಆಹ್ವಾನಿಸಿದರು.
ಮೊದಲಿಗೆ ಬ್ಯಾಟಿಂಗ್ ಮಾಡಿದ ಭಾರತ ತಂಡ ಸಂಪೂರ್ಣ ಲಾಭವನ್ನು ಪಡೆದುಕೊಂಡು ಮೊದಲ ವಿಕೆಟ್ ಜೊತೆಯಾಟದಲ್ಲಿ ಆರಂಭಿಕ ಜೋಡಿ 97 ರನ್ ಕಲೆಹಾಕುವಲ್ಲಿ ಯಶಸ್ವಿಯಾಯಿತು, ಮೊದಲೆರಡು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದ ರುತುರಾಜ್ ಗಾಯಕ್ವಾಡ್ 35 ಎಸೆತಗಳಲ್ಲಿ 57 ರನ್ ಗಳಿಸಿದರೆ, ಎಡಗೈ ಬ್ಯಾಟ್ಸ್‌ಮನ್ ಇಶಾನ್ ಕಿಶನ್ 35 ಎಸೆತಗಳಲ್ಲಿ 54 ರನ್ ಗಳಿಸಿದರು, ದಕ್ಷಿಣ ಆಫ್ರಿಕಾ ತಂಡದ ಸ್ಪಿನ್ನರ್ ಕೇಶವ್ ಮಹಾರಾಜ್ ಗಾಯಕ್ವಾಡ್ ರೂಪದಲ್ಲಿ ಮೊದಲ ವಿಕೆಟ್ ಪಡೆದರು.
ನಂತರ ಬಂದಂತಹ ಶ್ರೇಯಸ್ ಅಯ್ಯರ್ ಹಾಗೂ ನಾಯಕ ರಿಷಭ್ ಪಂತ್ ಹೆಚ್ಚು ಕಾಲ ಕ್ರಿಸ್ ನಲ್ಲಿ ಉಳಿಯಲಿಲ್ಲ, ಕೊನೆಯಲ್ಲಿ ಉಪ ನಾಯಕ ಹಾರ್ದಿಕ್ ಪಾಂಡ್ಯ 31 ರನ್ ಸೇರಿಸುವ ಮೂಲಕ ತಂಡ 20 ಓವರ್ ಮುಕ್ತಾಯದ ಹಂತಕ್ಕೆ 179 ಸ್ಪರ್ಧಾತ್ಮಕ ರನ್ ಕಲೆ ಹಾಕಿದರು.
ಮೊದಲೆರಡು ಪಂದ್ಯಗಳಲ್ಲಿ ಬೌಲಿಂಗ್ ವೈಫಲ್ಯ ಅನುಭವಿಸಿದ್ದ ಭಾರತ ತಂಡ ಈ ಪಂದ್ಯದಲ್ಲಿ ಪ್ರವಾಸಿ ತಂಡವನ್ನು 19.1 ಓವರ್‌ನಲ್ಲೇ 131 ರನ್ ಗೆ ಆಲೌಟ್ ಮಾಡಿ 48 ರನ್ ಗಳಿಂದ ಜಯಗಳಿಸಿದರು, ಸ್ಪಿನ್ನರ್ ಯಜುವೇಂದ್ರ ಚಹಲ್ 3 ವಿಕೆಟ್ ಕಬಳಿಸಿದರೆ ಹರ್ಷಲ್ ಪಟೇಲ್ 4 ವಿಕೆಟ್ ಪಡೆಯುವ ಮೂಲಕ ಜಯವನ್ನು ಸುಲಭಗೊಳಿಸಿದರು.