ಕೊಪ್ಪಳ: ಬಿಜೆಪಿಯವರು ಸೀಳು ನಾಯಿ ಇದ್ದಂತೆ ಎಂದು ಹೇಳಿರುವ ವಿರೋಧ ಪಕ್ಷದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಾರಿಗೆ ಸಚಿವ ಬಿ. ಶ್ರೀರಾಮುಲು ಆಕ್ರೋಶ ವ್ಯಕ್ತಪಡಿಸಿದ್ದು, ಸಿದ್ದರಾಮಯ್ಯ ಭಸ್ಮಾಸುರ ಇದ್ದಹಾಗೆ ಕೈ ಇಟ್ಟವರೆಲ್ಲರೂ ಭಸ್ಮವಾಗುತ್ತಾರೆ ಎಂದು ತಿಳಿಸಿದ್ದಾರೆ.
ಕೊಪ್ಪಳದ ಪಂಪ ಸರೋವರದಲ್ಲಿ ಶ್ರೀ ವಿಜಯಲಕ್ಷ್ಮಿ ದೇವಸ್ಥಾನ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸತ್ಯ ಹರಿಶ್ಚಂದ್ರರ ರೀತಿ ಮಾತನಾಡುತ್ತಾರೆ, ವಾಸ್ತವದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರದು ನಾಲಿಗೆ ಸೀಳು ನಾಯಿ ಇದ್ದಹಾಗೆ, ಸಿದ್ದರಾಮಯ್ಯ ಎರಡು ತಲೆ ಹಾವು ಇದ್ದಂತೆ. ಅವರಿಗೆ ಖುರ್ಚಿ ಬಿಟ್ಟರೆ ಬೇರೇ ಏನೂ ಕಾಣಿಸುತ್ತಿಲ್ಲ ಎಂದು ಕಿಡಿಕಾರಿದರು.
ಬಿಜೆಪಿ, ಹಿಂದುತ್ವ ಬಿಟ್ಟರೆ ಅವರಿಗೆ ಬೇರೆ ಏನೂ ಕಾಣುತ್ತಿಲ್ಲ. ಸಿದ್ದರಾಮಯ್ಯ ಭಸ್ಮಾಸ್ಮುರ ಇದ್ದ ಹಾಗೆ ಯಾರ ತಲೆ ಮೇಲೆ ಕೈ ಇಟ್ಟರೂ ಅವರ ಕಥೆ ಮುಗಿಯುತ್ತದೆ, ಈಗಾಗಲೇ ರಾಜ್ಯ ಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆಯನ್ನು, ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸ್ವ ಕ್ಷೇತ್ರವಾದ ಕೊರಟಗೆರೆಯಲ್ಲಿ ಡಾ. ಜಿ. ಪರಮೇಶ್ವರ ಅವರನ್ನು ಮುಗಿಸಿ ಮುಖ್ಯಮಂತ್ರಿ ಗದ್ದುಗೆಗೆ ಏರಿದ್ದರು, ಶೀಘ್ರದಲ್ಲಿಯೇ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರನ್ನು ಮುಗಿಸುತ್ತಾರೆ, ಸಿದ್ದರಾಮಯ್ಯ ಅವರ ಮುಂದಿನ ಟಾರ್ಗೆಟ್ ಡಿಕೆಶಿ ಅವರೇ ಎಂದು ತಿಳಿಸಿದರು.