ಫ್ಯಾಟ್ ಸರ್ಜರಿಗೆ ಹೋಗಿದ್ದ ಕಿರುತೆರೆ ನಟಿ ಚೇತನಾ ರಾಜ್ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ದುರಂತ​ ಸಾವು: ಪಾಲಕರ ಗಂಭೀರ ಆರೋಪ

ಬೆಂಗಳೂರು: ಯುವ ಕಿರುತೆರೆ ನಟಿ ಚೇತನಾ ರಾಜ್​ (21) ನಗರದ ನವರಂಗ್ ಸರ್ಕಲ್​ನಲ್ಲಿರುವ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದು, ಫ್ಯಾಟ್ ಸರ್ಜರಿ ವೇಳೆ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ.

ಚೇತನಾ ಕುಟುಂಬ ಬೆಂಗಳೂರು ಉತ್ತರ ತಾಲೂಕಿನ ಅಬ್ಬಿಗೆರೆಯಲ್ಲಿ ವಾಸವಿದೆ.

ವೈದ್ಯರ ನಿರ್ಲಕ್ಷ್ಯದಿಂದ ಚೇತನಾ ಸಾವಿಗೀಡಾಗಿದ್ದಾಳೆಂದು ಕುಟುಂಬ ಆರೋಪ ಮಾಡಿದೆ. ಫ್ಯಾಟ್ ಸರ್ಜರಿ ವೇಳೆ ಶ್ವಾಸಕೋಶಕ್ಕೆ ನೀರಿನ ಅಂಶ ಶೇಖರಣೆಯಾಗಿ ಮೃತಪಟ್ಟಿದ್ದಾಳೆ ಎನ್ನಲಾಗಿದೆ. ಅಗತ್ಯ ಸಲಕರಣೆ ಹಾಗೂ ಪೋಷಕರ ಒಪ್ಪಿಗೆ ಇಲ್ಲದೆ ಸರ್ಜರಿಗೆ ಮುಂದಾಗಿದ್ದ ವೈದ್ಯರ ವಿರುದ್ಧ ಪೋಷಕರು ಕಿಡಿಕಾರಿದ್ದಾರೆ.

ನವರಂಗ್​ನ ಡಾ.ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆಯಲ್ಲಿ ಚೇತನಾ ಚಿಕಿತ್ಸೆ ತೆಗೆದುಕೊಳ್ಳುತ್ತಿದ್ದರು. ಫ್ಯಾಟ್ ಚಿಕಿತ್ಸೆಗೆಂದು ನಿನ್ನೆ ಬೆಳಗ್ಗೆ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ನಾಲ್ಕು ಗಂಟೆ ಹೊತ್ತಿಗೆ ಆರೋಗ್ಯ ಸ್ಥಿತಿ ಗಂಭೀರವಾಗಿ ಶಂಕರಮಠದ ಕಾಡೇ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಚೇತನಾ ಮೃತಪಟ್ಟಿದ್ದಾರೆ.

ಪೋಷಕರಿಗೆ ಮಾಹಿತಿ ನೀಡದೇ ಚೇತನಾ ಫ್ಯಾಟ್ ಸರ್ಜರಿ ಮಾಡಿಸಿಕೊಂಡಿರುವ ಮಾತು ಸಹ ಕೇಳಿಬಂದಿದೆ. ನಿನ್ನೆ ಬೆಳಗ್ಗೆ 9.30ಕ್ಕೆ ಆಸ್ಪತ್ರೆಗೆ ದಾಖಲಾಗಿ ಸರ್ಜರಿ ಮಾಡಿಸಿಕೊಂಡಿದ್ದಾರೆ. ನಂತರ ವಿಚಾರ ಗೊತ್ತಾಗಿ ಶೆಟ್ಟಿ ಆಸ್ಪತ್ರೆಗೆ ಪಾಲಕರು ಹೋಗಿದ್ದರು. ಸರ್ಜರಿ ನಂತರ ಶ್ವಾಸಕೋಶದಲ್ಲಿ ನೀರು ತುಂಬಿಕೊಂಡು ಚೇತನಾ ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಕಾಡೇ ಆಸ್ಪತ್ರೆಯಲ್ಲಿ ನಾಲ್ಕು ಗಂಟೆಗೂ ಹೆಚ್ಚಿನ ಚಿಕಿತ್ಸೆ ನೀಡಲಾಯಿತಾದರೂ ಪ್ರಯೋಜನವಾಗಲಿಲ್ಲ. ಶೆಟ್ಟಿ ಕಾಸ್ಮೆಟಿಕ್ ಆಸ್ಪತ್ರೆ ವೈದ್ಯರ ನಿರ್ಲಕ್ಷ್ಯದಿಂದಲೇ ಈ ಘಟನೆ ನಡೆದಿದೆ. ಪೋಷಕರ ಅನುಮತಿ ಇಲ್ಲದೆ ಹೇಗೆ ಸರ್ಜರಿ ಮಾಡಿದ್ರು? ಶೆಟ್ಟಿ ಆಸ್ಪತ್ರೆಯವರೇ ಚೇತನಾ ರಾಜ್ ಸಾವಿಗೆ ಕಾರಣ ಎಂದು ಮೃತ ಚೇತನಾ ರಾಜ್ ದೊಡ್ಡಪ್ಪ ರಾಜಣ್ಣ ಆರೋಪ ಮಾಡಿದ್ದಾರೆ.

ಕಲರ್ಸ್ ಕನ್ನಡದಲ್ಲಿ ಮೂಡಿಬರುತ್ತಿರುವ ಗೀತಾ, ದೊರೆಸಾನಿ ಹಾಗೂ ಒಲವಿನ ನಿಲ್ದಾಣ ಧಾರಾವಾಹಿಗಳಲ್ಲಿ ಚೇತನಾ ನಟಿಸುತ್ತಿದ್ದರು. ಇದಲ್ಲದೆ, ಇನ್ನೂ ಬಿಡುಗಡೆಯಾಗದ ಹವಾಯಾಮಿ ಸಿನಿಮಾದಲ್ಲೂ ನಟನೆ ಮಾಡಿದ್ದಾರೆ.

Discover more from Valmiki Mithra

Subscribe now to keep reading and get access to the full archive.

Continue reading