ಹುಬ್ಬಳ್ಳಿ, ಮೇ16 ಜಗತ್ತಿನ ಎಲ್ಲಾ ಸಮಸ್ಯೆಗೂ ಭಗವದ್ಗೀತೆಯೇ ಪರಿಹಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.
ಬೈರಿದೇವರಕೊಪ್ಪದ ಗಾಮನಗಟ್ಟಿ ರಸ್ತೆಯ ಓಂ ಶಾಂತಿ ನಗರದಲ್ಲಿರುವ ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯದ ಭಗವದ್ಗೀತಾ ಜ್ಞಾನಲೋಕ (ವಸ್ತು ಸಂಗ್ರಹಾಲಯ) ಲೋಕಾರ್ಪಣೆ ಅವರು ಮಾತನಾಡಿದರು.
ಜಗತ್ತಿನ ಪ್ರತಿಯೊಂದು ಸಮಸ್ಯೆಗೂ ಭಗವದ್ಗೀತೆಯಲ್ಲಿ ಪರಿಹಾರವಿದೆ. ಸಮಸ್ಯೆ ಎದುರಾದಾಗ ಅದರ ಒಂದು ಪುಟ ತಿರುವಿದರೆ ಸಾಕು ಪರಿಹಾರ ಸಿಗುತ್ತದೆ. ಅಧ್ಯಾತ್ಮದ ಬಗ್ಗೆ ಜ್ಞಾನ ಪಡೆಯಲು ಭಗವಂತನಲ್ಲಿ ನಾವು ಕರಗಿ ಲೀನವಾಗಬೇಕು. ಆಗ ಬದುಕು ಸಾರ್ಥಕವಾಗುತ್ತದೆ ಎಂದರು.
ನಾವು ಏಕೆ ಜನ್ಮ ತಾಳಿದ್ದೇವೆ? ಈಗ ಎಲ್ಲಿದ್ದೇವೆ? ಎನ್ನುವ ಸಂಕೀರ್ಣ ಪ್ರಶ್ನೆ ಹುಟ್ಟಿಕೊಳ್ಳುತ್ತವೆ. ನಾವೆಲ್ಲರೂ ಅರೆಬೆಂದ ಕಾಳು. ಗೊತ್ತಿರುವುದಷ್ಟೇ ಜಗತ್ತು ಎಂದುಕೊಳ್ಳುತ್ತೇವೆ. ಗೊತ್ತಿಲ್ಲದ ಜಗತ್ತಿನ ಪರಿಚಯವಾಗಬೇಕಾದರೆ ಭಗವಂತನ ಧ್ಯಾನ ಮಾಡಬೇಕು. ಸರಿ, ತಪ್ಪುಗಳನ್ನು ವಿಮರ್ಶೆಗೆ ಒಳಪಡಬೇಕು. ಇಂತಹ ವಿಚಾರಗಳ ಕ್ರಾಂತಿಯನ್ನು ಬ್ರಹ್ಮಕುಮಾರಿ ಈಶ್ವರಿ ವಿಶ್ವವಿದ್ಯಾಲಯ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಮಾತನಾಡಿ, ವೇದ, ಶಾಸ್ತ್ರ ಹಾಗೂ ಉಪನಿಷತ್ತುಗಳೇ ಭಗವದ್ಗೀತೆಯ ಮೂಲ. ಭಾರತೀಯ ಸಂಸ್ಕೃತಿ ಮತ್ತು ಆಧ್ಯಾತ್ಮವನ್ನು ಜಗತ್ತಿನ ಬಹುತೇಕ ದೇಶಗಳು ಅನುಕರಿಸುತ್ತಿವೆ. ಯಾಕೆಂದರೆ, ಇಲ್ಲಿಯ ಧರ್ಮ ಜಾತಿಗೆ ಮೀಸಲಾದುದ್ದಲ್ಲ. ಅದೊಂದು ಜೀವನ ಸಾಗಿಸುವ ಪದ್ಧತಿ ಎಂದರು.
ಮುಂಬೈ, ಮೌ0ಟ್‍ಅಬು, ದೆಹಲಿ, ಅಹಮದಾಬಾದ್, ಮೈಸೂರು, ಬೆಂಗಳೂರು, ಕಲಬುರ್ಗಿ, ಸೊಲ್ಲಾಪುರ, ಲಕ್ನೊ ಸೇರಿದಂತೆ ದೇಶದ ವಿವಿಧ ಭಾಗಗಳ ಈಶ್ವರಿ ವಿಶ್ವವಿದ್ಯಾಲಯದಿಂದ ಸಾವಿರಕ್ಕೂ ಹೆಚ್ಚು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಮೌ0ಟಅಬುವಿನ ರಾಜಯೋಗಿನಿ ಸಂತೋಷ ದೀದೀಜಿ ಸಾನ್ನಿಧ್ಯ ವಹಿಸಿದ್ದರು.
ಸಚಿವರಾದ ಶಂಕರಪಾಟೀಲ ಮುನೇನಕೊಪ್ಪ, ಹಾಲಪ್ಪ ಆಚಾರ್, ಸಂಸದ ಬಿ.ವೈ. ರಾಘವೇಂದ್ರ, ಶಾಸಕರಾದ ಅರವಿಂದ ಬೆಲ್ಲದ, ಸೋಮಶೇಖರ ರೆಡ್ಡಿ, ರಾಜಯೋಗಿ ಬೃಜ್ ಮೋಹನ್ ಭಾಯಿಜಿ, ಕರುಣಾ ಬಾಯಿಜಿ, ನಿರ್ಮಲಾ ಬೆಹನ್ ಇದ್ದರು