ಅಥಣಿ: ತಾಲೂಕಿನ ರಡೆರಟ್ಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿಗಾಗಿ ಆಗ್ರಹಿಸಿ ಗ್ರಾಮ ಪಂಚಾಯತಿಯ ಗ್ರಾಮ ಸಭೆಗೆ ಗ್ರಾಮಸ್ಥರು ಖಾಲಿ ಕೊಡ ಹಿಡಿದು ಮಕ್ಕಳ ಸಹಿತ ಮುತ್ತಿಗೆ ಹಾಕಿ ಪಿ.ಡಿ.ಓ ಹಾಗೂ ಗ್ರಾ.ಪಂ ಅಧ್ಯಕ್ಷೆಯನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ಜರುಗಿತು.
ರಡ್ಡೇರಹಟ್ಟಿ ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ಸಮಸ್ಯೆ ಇರುವುದರಿಂದ, ಗ್ರಾಮಸ್ಥರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕಳೆದ ಎರಡು ವರ್ಷಗಳ ಹಿಂದೆ ಶುದ್ಧ ಕುಡಿಯುವ ನೀರಿನ ಘಟಕವನ್ನು ನಿರ್ಮಿಸಲಾಗಿದೆ. ಆದರೆ ಗ್ರಾಮ ಪಂಚಾಯತಿಯವರ ಸೊಂಬೆರಿತನದಿಂದ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭವಾಗಿಲ್ಲ ಜೊತೆಗೆ ಕೃಷ್ಣಾನದಿಯಿಂದ ರಡ್ಡೇರಹಟ್ಟಿ ಗ್ರಾಮಕ್ಕೆ ಬರುವ ನೀರಿನ ಪೈಪಿಗೆ ಹಲವರು ಅಡ್ಡಹಾಕಿ ನೀರು ಬಳಸುತ್ತಿರುವುದರಿಂದ ನೀರು ಸಮರ್ಪಕವಾಗಿ ಬರದೇ ಹಾಗೇ ಉಳಿದಿರುವುದು ಗ್ರಾಮಸ್ಥರಿಗೆ ಕುಡಿಯುವ ನೀರಿನ ತೊಂದರೆಯಾಗಿದೆ.
ಶುದ್ಧ ಕುಡಿಯುವ ನೀರಿನ ಸಲುವಾಗಿ ಗ್ರಾಮಸ್ಥರು ದಿನಪ್ರತಿ 5 ಕಿ.ಮೀ ಕ್ರಮಿಸಿ ನೀರು ತರುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಅಲ್ಲದೇ ಗ್ರಾಮದಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಪ್ರಾರಂಭಿಸುವಂತೆ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ಪ್ರಯೋಜನವಾಗದ ಕಾರಣ ಹಾಗೂ ಕಳೆದ ನಾಲ್ಕೈದು ವರ್ಷಗಳಿಂದ ಶುದ್ಧ ಕುಡಿಯುವ ನೀರು ಸಿಗದೆ ಬೇಸತ್ತ ಗ್ರಾಮಸ್ಥರು ಇವತ್ತು ಖಾಲಿ ಕೊಡಗಳನ್ನು ಹಿಡಿದು ಗ್ರಾಮ ಪಂಚಾಯತಿಯ ಗ್ರಾಮ ಸಭೆಗೆ ಮುತ್ತಿಗೆ ಹಾಕುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಪ್ರತಿಭಟನೆ ತೀವ್ರಗೊಳ್ಳುತ್ತಿದ್ದಂತೆ ಗ್ರಾಮಸಭೆಯ ನೋಡಲ್ ಅಧಿಕಾರಿ ಎಚ್ .ಎಮ್ ಕಾಂಬಳೆ ಪಲಾಯನಗೈದಿದ್ದಾರೆ.