ಮೈಸೂರು: ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಪುರಾತನ ಕಲ್ಯಾಣಿಯಲ್ಲಿ ನಿರ್ಮಿಸಲಾಗಿದ್ದ ಶಿವನಮೂರ್ತಿ ಹೊತ್ತ ಗೋಪುರ ಕುಸಿದು ಬಿದ್ದಿದ್ದು, ಕಲ್ಯಾಣಿ ದುರಸ್ತಿ ಮಾಡಲು ಬಂದಿದ್ದ ಯುವ ಬ್ರಿಗೇಡ್ನ ಸ್ವಯಂ ಸೇವಕರು ಅನಾಹುತದಿಂದ ಪಾರಾಗಿದ್ದಾರೆ. ಸ್ಮಶಾನದ ಪ್ರವೇಶದ್ವಾರದಲ್ಲಿ ಪುರಾತನ ಕಲ್ಯಾಣಿಯಿದ್ದು, ಸುಮಾರು ಮೂವತ್ತು ವರ್ಷಗಳ ಹಿಂದೆ ಕಲ್ಯಾಣಿಯ ಮಧ್ಯಭಾಗದಲ್ಲಿ ಶಿವನಮೂರ್ತಿಯನ್ನ ಹೊತ್ತ ಗೋಪುರ ನಿರ್ಮಾಣ ಮಾಡಲಾಗಿತ್ತು.
ಈ ಕಲ್ಯಾಣಿ ಸೂಕ್ತ ನಿರ್ವಹಣೆ ಇಲ್ಲದೆ ಗಿಡಗಂಟೆಗಳಿಂದ ಆವೃತ್ತವಾಗಿತ್ತು. ಜೊತೆಗೆ ಗೋಪುರವೂ ಶಿಥಿಲಗೊಂಡಿತ್ತು. ಕಲ್ಯಾಣಿಯನ್ನ ಸುಸ್ಥಿತಿಗೆ ತರಲು ಯುವ ಬ್ರಿಗೇಡ್ನ ಸ್ವಯಂ ಸೇವಕರು ಮುಂದಾಗಿದ್ದರು. ಕಳೆದ ಎರಡು ದಿನಗಳಿಂದ 20ಕ್ಕೂ ಹೆಚ್ಚು ಯುವಕರಿಂದ ಸ್ವಚ್ಛತಾ ಕಾರ್ಯ ನಡೆಯುತ್ತಿತ್ತು. ನಿನ್ನೆ ಗೋಪುರದ ಭಾಗದಲ್ಲೇ ಯುವಕರು ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು. ವಿಶ್ರಾಂತಿಗಾಗಿ ಪಕ್ಕದಲ್ಲಿ ಕುಳಿತಿದ್ದಾಗ ಗೋಪುರ ದಿಢೀರ್ ಕುಸಿತಗೊಂಡಿದೆ. ಇದರಿಂದ ಯುವಕರು ಬಚಾವಾಗಿದ್ದಾರೆ.