ಬೆಂಗಳೂರು: ಸಂಪುಟ ಪುನಾರಚನೆ ಮೇ 10ರೊಳಗೆ ನಡೆಯಲಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಸಂಪುಟ ಪುನಾರಚನೆ ಅಥವಾ ವಿಸ್ತರಣೆಯ ವಿಚಾರವಾಗಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರವೇ ಅಂತಿಮವಾಗಿದೆ. ಹೈಕಮಾಂಡ್ ಏನು ತೀರ್ಮಾನ ತೆಗೆದುಕೊಳ್ಳುತ್ತದೋ ಅದಕ್ಕೆ ನಾವು ಬದ್ಧವಾಗಿರುತ್ತೇವೆ. ಈ ವಿಚಾರವಾಗಿ ಕೇಂದ್ರ ನಾಯಕರ ತೀರ್ಮಾನವೇ ಇದರಲ್ಲಿ ಅಂತಿಮ ಎಂದು ಹೇಳಿದರು.
ಬಿಜೆಪಿ ಕೇಂದ್ರ ನಾಯಕತ್ವವು ತಮ್ಮನ್ನು ಕರೆದ ತಕ್ಷಣ ರಾಜ್ಯ ಸಚಿವ ಸಂಪುಟದ ಬಗ್ಗೆ ಚರ್ಚಿಸಲು ನವದೆಹಲಿಗೆ ಹೋಗಲು ಸಿದ್ಧ ಎಂದು ಬೊಮ್ಮಾಯಿ ಗುರುವಾರ ಹೇಳಿದ್ದರು. ಬಹಳ ಜನ ಪಕ್ಷಕ್ಕೆ ಇನ್ನೂ ಬರುವವರಿದ್ದಾರೆ. ನಮ್ಮ ಪಕ್ಷ ಇನ್ನಷ್ಟು ಬಲವಾಗಲಿದೆ. ಪ್ರತಿ ಜಿಲ್ಲೆಯಿಂದಲೂ ಪಕ್ಷಕ್ಕೆ ಬರುತ್ತಾರೆ. ಅದರಲ್ಲೂ ಮಂಡ್ಯದಿಂದ ಅನೇಕ ಜನ ಪಕ್ಷಕ್ಕೆ ಸೇರ್ಪಡೆ ಆಗಲಿದ್ದಾರೆ. 150 ಸ್ಥಾನ ಗೆಲ್ಲುವುದು ನಮ್ಮ ಗುರಿ. ಪ್ರಧಾನಿಯವರಿಗೆ 150 ಕ್ಷೇತ್ರ ಗೆಲ್ಲುವ ಭರವಸೆ ಕೊಟ್ಟಿದ್ದೇವೆ. ಆ ಗುರಿ ಮುಟ್ಟಲು ರಾಜ್ಯ ಪ್ರವಾಸ ಮಾಡುತ್ತೇವೆ ಎಂದರು.
ಇದೇ ಸಂದರ್ಭದಲ್ಲಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಯತ್ನಾಳ್ ಹೇಳಿಕೆ ಬಗ್ಗೆ ನಾನೇನೂ ಮಾತಾಡಲ್ಲ. ಪಕ್ಷದ ನಾಯಕರಿದ್ದಾರೆ, ಅವರು ನೋಡ್ಕೋತಾರೆ ಎಂದರು. ಚುನಾವಣಾ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಮೈಸೂರು, ಚಾಮರಾಜನಗರ ಸೇರಿ ಹಲವು ಜಿಲ್ಲೆಗಳಿಗೆ ಪ್ರವಾಸ ಮಾಡ್ತೇವೆ ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು.
ಸಿಎಂ ಸ್ಥಾನ 2,500 ಕೋಟಿ ಮಾರಾಟಕ್ಕಿದೆ ಎಂಬ ಅರ್ಥದಲ್ಲಿ ಯತ್ನಾಳ್ ಹೇಳಿಕೆ ನೀಡಿದ್ದರು. ಬೆಳಗಾವಿಯಲ್ಲಿ ಮಾತನಾಡಿದ್ದ ಅವರು, ದೆಹಲಿಯಿಂದ ನನ್ನ ಬಳಿಗೆ ಬಂದಿದ್ದ ಕೆಲವರು ನಿಮ್ಮನ್ನು ಸಿಎಂ ಮಾಡುತ್ತೇವೆ. 2,500 ಕೋಟಿ ಸಿದ್ಧವಿಟ್ಟುಕೊಳ್ಳಿ ಎಂದು ಹೇಳಿದ್ದರು ಎಂಬ ಸ್ಫೋಟಕ ಹೇಳಿಕೆಯನ್ನು ಯತ್ನಾಳ್ ನೀಡಿದ್ದಾರೆ. ಈ ಹೇಳಿಕೆ ಇದೀಗ ರಾಜಕೀಯವಾಗಿ ಅಲ್ಲೋಲ ಕಲ್ಲೋಲ ಸೃಷ್ಟಿಸುತ್ತಿದೆ.